×
Ad

ಬೆಳಗಾವಿ ಗಡಿ ವಿವಾದ: ಶಾಂತಿ ಕಾಪಾಡಲು ಪೊಲೀಸ್ ಆಯುಕ್ತರ ಮನವಿ

Update: 2019-12-31 19:47 IST

ಬೆಳಗಾವಿ, ಡಿ.31: ಕಳೆದ ಕೆಲ ದಿನಗಳಿಂದ ವಿವಿಧ ಸಂಘಟನೆಗಳಿಂದ ಗಡಿ ಸಮಸ್ಯೆ ಮುಂದಿಟ್ಟುಕೊಂಡು ಸಮಾಜದ ಶಾಂತಿ ಕದಡುವ ಪ್ರಯತ್ನ ಮಾಡುತ್ತಿರುವ ಹಿನ್ನೆಲೆಯಲ್ಲಿ ಮರಾಠಾ ಸಮಾಜದೊಂದಿಗೆ ಬೆಳಗಾವಿಯ ಪೊಲೀಸ್ ಆಯುಕ್ತರು ಶಾಂತಿ ಸಭೆಯ ನಡೆಸಿ, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.

ಮಂಗಳವಾರ ಬೆಳಗಾವಿಯ ಪೊಲೀಸ್ ಆಯುಕ್ತರ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಪೊಲೀಸ್ ಆಯುಕ್ತ ಬಿ.ಎಸ್.ಲೋಕೇಶ್ ಕುಮಾರ ಅವರ ಅಧ್ಯಕ್ಷತೆಯಲ್ಲಿ ಮರಾಠಾ ಸಮಾಜದೊಂದಿಗೆ ಶಾಂತಿ ಸಭೆ ನಡೆಸಲಾಯಿತು. ಕಳೆದ 8-10 ದಿನಗಳಿಂದ ಬೆಳಗಾವಿ ಗಡಿಭಾಗದಲ್ಲಿ ಮತ್ತು ಕೊಲ್ಹಾಪುರದಲ್ಲಿ ಗಡಿವಾದವನ್ನು ಕೆದಕಿ ತೆಗೆದು ಎರಡು ಭಾಷಿಕರ ಮಧ್ಯೆ ದ್ವೇಷದ ಬೀಜವನ್ನ ಬಿತ್ತುವ ಕೆಲಸವನ್ನು ಕೆಲ ಸಂಘಟನಾ ಶಕ್ತಿಗಳು ಮಾಡುತ್ತಿವೆ. ಇದರಲ್ಲಿ ಅಮಾಯಕರು ಬಲಿ ಪಶುಗಳಾಗುತ್ತಿದ್ದು, ಅವರು ಇಂತಹ ಪ್ರಚೋದನಾಕಾರಿ ಪ್ರತಿಭಟನೆಗಳಲ್ಲಿ ಪಾಲ್ಗೊಳ್ಳದಂತೆ ಪೊಲೀಸ್ ಆಯುಕ್ತ ಲೋಕೇಶ್‌ಕುಮಾರ ಕರೆ ನೀಡಿದರು.

ಇದಕ್ಕೂ ಮೊದಲೂ ಎಸಿಪಿ ನಾರಾಯಣ ಭರಮನಿಯವರು ಸಮಾಜದ ಮುಖಂಡರನ್ನು ಉದ್ದೇಶಿಸಿ ಮಾತನಾಡಿ, ಕಳೆದ 8-10 ದಿನಗಳಿಂದ ಬೆಳಗಾವಿ ಗಡಿಭಾಗದಲ್ಲಿ ಮತ್ತು ಕೊಲ್ಹಾಪುರದಲ್ಲಿ ಗಡಿವಿವಾದವನ್ನು ಸೃಷ್ಟಿಸಿ ಅಶಾಂತಿಯನ್ನು ಪಸರಿಸುವ ಕೃತ್ಯಕ್ಕೆ ಇಳಿಯಲಾಗುತ್ತದೆ. ಆದರೆ ಕಳೆದ 2 ವರ್ಷಗಳಿಂದ ಬೆಳಗಾವಿಯ ಭಾಗದಲ್ಲಿ ಯಾವುದೇ ರೀತಿಯ ಅಶಾಂತಿಯಾಗಲಿ, ಕೋಮು ಗಲಭೆಗಳಾಗಲಿ ನಡೆದಿಲ್ಲ. ಬೆಳಗಾವಿಯಲ್ಲಿ ಶಾಂತಿಯನ್ನು ಕಾಪಾಡುವಲ್ಲಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ಹೀಗಾಗಿ, ಈ ಸಂದರ್ಭದಲ್ಲಿಯೂ ಕೂಡ ಶಾಂತತೆಯನ್ನು ಕಾಪಾಡಬೇಕೆಂದು ಸಭಿಕರಿಗೆ ಕರೆ ನೀಡಿದರು.

ಸಭೆಯಲ್ಲಿ ಎಂಇಎಸ್‌ನ ದೀಪಕ ದಳ, ಮನೋಹರ ಕಿಣೇಕರ, ರಾಜು ಮರವೆ, ಜಯ ಜಾಧವ, ರಾಜು ಖಟಾವ್‌ಕರ ಮತ್ತಿತರರು ಉಪಸ್ಥಿತರಿದ್ಧರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News