'ಸಬ್ಸಿಡಿ ದರದಲ್ಲಿ ಮದ್ಯ ಪೂರೈಕೆ' ಬಗ್ಗೆ ಅಬಕಾರಿ ಸಚಿವ ನಾಗೇಶ್ ಸ್ಪಷ್ಟನೆ

Update: 2019-12-31 16:02 GMT

ಬೆಂಗಳೂರು, ಡಿ.31: ಅಗ್ಗದ ಅಥವಾ ಸಬ್ಸಿಡಿ ಮದ್ಯ ಪೂರೈಸುವ ಯಾವುದೇ ಪ್ರಸ್ತಾವನೆಯು ರಾಜ್ಯ ಸರಕಾರದ ಪರಿಶೀಲನೆಯಲ್ಲಿ ಇಲ್ಲವೆಂದು ಅಬಕಾರಿ ಸಚಿವ ಎಚ್.ನಾಗೇಶ್ ಸ್ಪಷ್ಟಪಡಿಸಿದ್ದಾರೆ.

2013ರಿಂದಲೂ ರಾಜ್ಯದಲ್ಲಿ ಕಡಿಮೆ ದರದ ಮತ್ತು ಉತ್ತಮ ಗುಣಮಟ್ಟದ ಮದ್ಯ ಸರಬರಾಜಿಗೆ ಸರಕಾರದ ಮುಂದೆ ಬೇಡಿಕೆ ಇದೆ. ಆದರೆ, ನಾನು ಅಬಕಾರಿ ಸಚಿವನಾದ ನಂತರ ಇಂತಹ ಯಾವುದೇ ಪ್ರಸ್ತಾವನೆಯನ್ನು ಸರಕಾರದ ಮುಂದೆ ಮಂಡಿಸಿಲ್ಲ. ಬಡಜನರು ಹೆಚ್ಚು ಬಳಕೆ ಮಾಡುವ ಕಡಿಮೆ ದರದ ಮದ್ಯವನ್ನು ಸಬ್ಸಿಡಿ ದರದಲ್ಲಿ ಪೂರೈಕೆ ಮಾಡುವುದು ಸೂಕ್ತವಲ್ಲವೇ ಎಂಬ ಮಾಧ್ಯಮದವರ ಪ್ರಶ್ನೆಗೆ, ಇಂತಹ ಬೇಡಿಕೆಯು ಹಿಂದಿನಿಂದ ಇದೆ ಎಂದು ಉತ್ತರಿಸಿದ್ದೇನೆ. ಆದರೆ, ಸಬ್ಸಿಡಿ ದರದಲ್ಲಿ ಮದ್ಯ ಪೂರೈಕೆ ಮಾಡುತ್ತೇನೆಂದು ಹೇಳಿಲ್ಲವೆಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಬಕಾರಿ ಇಲಾಖೆಯ ನಿಯಮಗಳ ಪ್ರಕಾರ ಸಿ ಎಲ್ 2 (ಎಂಆರ್‌ಪಿ ಔಟ್‌ಲೆಟ್ ಮತ್ತು ವೈನ್‌ಸ್ಟೋರ್ಸ್) ಗಳಲ್ಲಿ ರಾತ್ರಿ 10-30ರವರೆಗೆ ಮತ್ತು ಸಿಎಲ್9( ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಪಬ್ ) ಗಳಲ್ಲಿ ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1ರವರೆಗೆ ಹಾಗೂ ಉಳಿದೆಡೆಗಳಲ್ಲಿ ರಾತ್ರಿ 11-30ರವರೆಗೆ ಮದ್ಯಪೂರೈಕೆಗೆ ಅವಕಾಶವಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News