ಜ.2ರಂದು ಪ್ರಧಾನಿ ತುಮಕೂರಿಗೆ: 'ಕಪ್ಪು ಬಟ್ಟೆಯೊಂದಿಗೆ ಸ್ವಾಗತಿಸುತ್ತೇವೆ' ಎಂದ ಕೋಡಿಹಳ್ಳಿ ಚಂದ್ರಶೇಖರ್

Update: 2019-12-31 16:39 GMT

ತುಮಕೂರು, ಡಿ.31: ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮೀಣ ಭಾರತವನ್ನು ಮರೆತಿದ್ದಾರೆ. ಮಹತ್ವಾಕಾಂಕ್ಷೆಯ ಫಸಲ್ ಭಿಮಾ ಯೋಜನೆಯಿಂದ ರೈತರಿಗೆ ಲಾಭವಾಗಲಿಲ್ಲ ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರೇಖರ್ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪೂರ್ವದಲ್ಲಿ ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ಹೇಳಿ ನೀಡಿದ್ದ ಭರವಸೆಯನ್ನು ಯಾಕೆ ಈಡೇರಿಸಲಿಲ್ಲ ಎಂದು ಪ್ರಶ್ನಿಸಿದ ಅವರು, ರೈತ ಪರ ಸರ್ಕಾರ ಎನ್ನುತ್ತಲೇ ರೈತ ವಿರೋಧಿ ಧೋರಣೆಯನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ದೂರಿದರು.

ಸಿಎಎ, ಪೌರತ್ವ ಕಾಯ್ದೆ ಜಾರಿಗೆ ತೋರುವ ಉತ್ಸಾಹವನ್ನು ಪ್ರಧಾನಿ ಮೋದಿ ಅವರು ಸ್ವಾಮಿನಾಥನ್ ವರದಿ ಜಾರಿಗೆ ಯಾಕೆ ತೋರುತ್ತಿಲ್ಲ. ದೇಶಾದ್ಯಂತ ನಡೆದ ಚುನಾವಣಾ ಪ್ರಚಾರದಲ್ಲಿ ಸ್ವಾಮಿನಾಥನ್ ವರದಿ ಜಾರಿಗೊಳಿಸುವುದಾಗಿ ಹೇಳಿದ್ದ ಮೋದಿ ಅವರು, ಮೊದಲು ಸ್ವಾಮಿನಾಥನ್ ವರದಿ ಜಾರಿಗೊಳಿಸಲಿ. ಜಿಲ್ಲೆಯಲ್ಲಿ ಪ್ರಾರಂಭವಾದ ಫುಡ್ ಪಾರ್ಕ್ ಬಾಗಿಲು ಮುಚ್ಚಿದೆ. ರೈತರನ್ನು ಮರೆತಿರುವ ಮೋದಿ ಅವರು, ಬರೀ ರೈತರ ಕಾರ್ಯಕ್ರಮದಲ್ಲಿ ಭಾಗಿಯಾಗುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂದರು.

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಬೀಜ ಸಂರಕ್ಷಣಾ ಕಾಯ್ದೆ ಉದ್ದೇಶ ಖಾಸಗಿ ಕಂಪನಿಗಳನ್ನು ಪ್ರೋತ್ಸಾಹಿಸುವುದಷ್ಟೇ ಆಗಿದೆ. ಪಾರಂಪರಿಕವಾಗಿ ಬೀಜವನ್ನು ಕಾಪಾಡಿಕೊಂಡು ಬಂದಿರುವ ರೈತರಿಗೆ ಇದು ಮರಣ ಶಾಸನವಾಗಿದ್ದು, ಈ ಕಾಯ್ದೆ ಜಾರಿಗೆ ಬರುವ ಮುಂಚೆ ರೈತರ ಅಭಿಪ್ರಾಯವನ್ನು ಕೇಂದ್ರ ಸರ್ಕಾರ ಪಡೆದುಕೊಳ್ಳಬೇಕು ಹಾಗೂ ಸಾರ್ವಜನಿಕ ಚರ್ಚೆಯ ಬಳಿಕವಷ್ಟೇ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದರ ವಿರುದ್ಧ ಜ.2ರಂದು ನಡೆಯಲಿರುವ ರೈತ ಸಮಾವೇಶ ಕಾರ್ಯಕ್ರಮದಲ್ಲಿ, ರಾಜ್ಯ ರೈತ ಸಂಘದ ಮುಖಂಡರು ಕಪ್ಪು ಶರ್ಟ್ ಹಾಕಿ ಭಾಗವಹಿಸುತ್ತೇವೆ. ಆ ಮೂಲಕ ನಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತೇವೆ. ಕಪ್ಪು ಶರ್ಟ್ ಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇವೆ. ಅವಕಾಶ ನೀಡದೇ ಇದ್ದರೆ ಬಂಧಿಸಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರೈತರ ಆಕ್ರೋಶದಿಂದಲೇ ಐದು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿತ್ತು. ಸೈನಿಕರ ಸಾವಿನ ಉದ್ವೇಗ ಇಲ್ಲದೇ ಹೋಗಿದ್ದರೆ ಮೋದಿ ಮತ್ತೆ ಪ್ರಧಾನಿಯಾಗುತ್ತಿರಲಿಲ್ಲ. ರೈತರನ್ನು ನಿರ್ಲಕ್ಷಿಸಿದರೆ ತಕ್ಕ ಪಾಠ ಕಲಿಸುವಬೇಕಾಗುತ್ತದೆ ಎಂದು ಹೇಳಿದರು. ರಾಜ್ಯ ಪ್ರವಾಹಕ್ಕೆ ತತ್ತರಿಸಿದ್ದು, ಸಂತ್ರಸ್ತರು ಬೀದಿಯಲ್ಲಿದ್ದಾರೆ. ಮೋದಿ ಅವರಿಗೆ ಅಂಗಲಾಚಿದರೂ ಕೇಂದ್ರ ನಮ್ಮ ರಾಜ್ಯದ ಕಡೆ ತಿರುಗಿ ನೋಡಲಿಲ್ಲ. ಕೇಂದ್ರ ಸರ್ಕಾರದ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಮಾಡಿದರೂ, ಸಂತ್ರಸ್ತರ ಕಡೆ ನೋಡಲು ಆಗದ ಪ್ರಧಾನಿ ಇವರು ಎಂದು ಆರೋಪಿಸಿದರು.

ರೈತ ಮುಖಂಡ ಆನಂದ್ ಪಟೇಲ್ ಮಾತನಾಡಿ, ರೈತರ ಸಮಾವೇಶಕ್ಕೆ ರೈತರನ್ನು ಅಧಿಕಾರಿ ದುಂಬಾಲು ಬಿದ್ದು ಕರೆತರುತ್ತಿದ್ದಾರೆ. ಬಸ್ ಮಾಡಿದ್ದೇವೆ, ತಿಂಡಿ ಕೊಡಿಸುತ್ತೇವೆ ಎಂದೆಲ್ಲ ಬೆನ್ನುಬಿದ್ದಿದ್ದಾರೆ. ಸರ್ಕಾರದ ಕಾರ್ಯಕ್ರಮ ಯಶಸ್ವಿಯಾಗಿದ್ದರೆ ರೈತರು ಸ್ವಯಂಪ್ರೇರಿತವಾಗಿ ಭಾಗವಹಿಸುತ್ತಿದ್ದರು. ಈ ರೀತಿ ಬಲವಂತದಿಂದ ಕರೆತರುವ ಕಾರ್ಯವನ್ನು ಅಧಿಕಾರಿಗಳು ಮಾಡುತ್ತಿರಲಿಲ್ಲ ಎಂದರು.

ಕಾರ್ಯಕ್ರಮಕ್ಕೆ ಬರುವಂತೆ ರೈತರನ್ನು ಒತ್ತಾಯಿಸುತ್ತಿರುವ ಅಧಿಕಾರಿಗಳು, ರೈತರ ಸಂಕೇತವಾದ ಹಸಿರು ಶಾಲನ್ನು ಹಾಕಿಕೊಂಡು ಬರದಂತೆ ಮನವಿ ಮಾಡುತ್ತಿದ್ದಾರೆ. ಕಳೆದ ಮೂವತ್ತೆಂಟು ವರ್ಷಗಳಿಂದ ರೈತರ ಸಂಕೇತವಾಗಿರುವ ಹಸಿರು ಶಾಲನ್ನು ಬಿಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸಲು ಹೇಳಲು ಇವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸಿದರು

ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಕೆಂಕೆರೆ ಸತೀಶ್, ಅನಿಲ್ ಕುಮಾರ್, ಭಕ್ತರಹಳ್ಳಿ ಬೈರೇಗೌಡ, ಧನಂಜಯ ಆರಾಧ್ಯ ಹಾಗೂ ಎಲ್ಲ ತಾಲೂಕು ಅಧ್ಯಕ್ಷರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News