ರಾಜ್ಯದಲ್ಲಿ 2 ವರ್ಷಗಳಲ್ಲಿ ಹೆಚ್ಚಾದ ಅರಣ್ಯ ಪ್ರದೇಶ ಎಷ್ಟು ಸಾವಿರ ಚದರ ಕಿ.ಮೀ. ಗೊತ್ತೇ ?
ಬೆಂಗಳೂರು, ಡಿ.31: ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸುಮಾರು 1,025 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶ ಅಧಿಕಗೊಂಡಿದ್ದು, ಅರಣ್ಯ ಪ್ರದೇಶ ವಿಸ್ತೀರ್ಣ ಹೆಚ್ಚಳದಲ್ಲಿ ದೇಶದಲ್ಲಿಯೇ ಮೊದಲನೇ ಸ್ಥಾನ ಪಡೆದುಕೊಂಡಿದೆ.
ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಇಲಾಖೆಯ ಭಾರತೀಯ ಅರಣ್ಯ ಸರ್ವೇಕ್ಷಣ ಸಂಸ್ಥೆ ಬಿಡುಗಡೆ ಮಾಡಿರುವ 2019 ರ ದ್ವೈವಾರ್ಷಿಕ ವರದಿಯಲ್ಲಿ ಈ ಅಂಶ ತಿಳಿಸಲಾಗಿದೆ.
2017 ರಲ್ಲಿ ಬಿಡುಗಡೆಯಾಗಿದ್ದ ವರದಿಯಲ್ಲಿನ ಅಂಕಿ ಅಂಶಗಳಿಗೆ ಹೋಲಿಕೆ ಮಾಡಿದರೆ ದೇಶದಾದ್ಯಂತ 3,976 ಚದರ ಕಿ.ಮೀ. ಅರಣ್ಯ ಪ್ರದೇಶ ವಿಸ್ತೀರ್ಣವಾಗಿದೆ. ಆಂಧ್ರಪ್ರದೇಶದಲ್ಲಿ 990 ಚದರ ಕಿ.ಮೀ., ಕೇರಳದಲ್ಲಿ 823 ಚದರ ಕಿ.ಮೀ. ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ 371 ಚದರ ಕಿ.ಮೀ ಅರಣ್ಯಪ್ರದೇಶ ವಿಸ್ತೀರ್ಣಗೊಂಡಿದ್ದು, ಕರ್ನಾಟಕದ ನಂತರ ಸ್ಥಾನ ಪಡೆದಿವೆ.
ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳ ಹಿಂದೆ 37,550 ಚದರ ಕಿ.ಮೀ.ನಷ್ಟು ಅರಣ್ಯ ಪ್ರದೇಶವಿತ್ತು. ಐಆರ್‌ಎಸ್ ರಿಸೋರ್ಸ್ ಸ್ಯಾಟ್-2 ಎಲ್‌ಐಎಸ್‌ಎಸ್ 111 ಉಪಗ್ರಹದ ದತ್ತಾಂಶದ ಆಧಾರದಲ್ಲಿ ವರದಿ ಸಿದ್ಧಪಡಿಸಲಾಗಿದೆ. ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ವರದಿಯನ್ನು ಬಿಡುಗಡೆಗೊಳಿಸಿದ್ದಾರೆ.
ಒಟ್ಟು ಅರಣ್ಯ ಪ್ರದೇಶ ವಿಸ್ತೀರ್ಣದಲ್ಲಿ ಕರ್ನಾಟಕ 6 ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಕರ್ನಾಟಕದ ಒಟ್ಟು ಭೂಭಾಗದ (1.92 ಲಕ್ಷ ಚದರ ಕಿ.ಮೀ.) ಶೇ.20.11 ರಷ್ಟು ಅರಣ್ಯ ಪ್ರದೇಶವಿದೆ. ಅತಿ ಹೆಚ್ಚು ಅರಣ್ಯ ಪ್ರದೇಶ ಹೊಂದಿರುವ ಮಹಾರಾಷ್ಟ್ರದಲ್ಲಿ ದೇಶದ 32.9 ಲಕ್ಷ ಚದರ ಕಿ.ಮೀ. ಭೂಭಾಗದ ಶೇ.23.34 ಅರಣ್ಯ ಪ್ರದೇಶವಿದೆ.
ವೃಕ್ಷ ವೈವಿಧ್ಯತೆಯಲ್ಲಿ ಪ್ರಥಮ: ವೃಕ್ಷ, ಕುರುಚಲು ಹಾಗೂ ಗಿಡಮೂಲಿಕೆ ಎಂಬ ಮೂರು ವಿಭಾಗದಲ್ಲಿನ ವೈವಿಧ್ಯತೆಯನ್ನು ವರದಿಯಲ್ಲಿ ವಿಂಗಡಿಸಲಾಗಿದೆ. ಇದರಲ್ಲಿ ವೃಕ್ಷ ವೈವಿಧ್ಯತೆಯಲ್ಲಿ ಕರ್ನಾಟಕ ಮೊದಲನೇ ಸ್ಥಾನವನ್ನು ಪಡೆದಿದೆ. ಕುರುಚಲು(140) ಹಾಗೂ ಗಿಡಮೂಲಿಕೆ(40) ಸೇರಿ 505 ವಿಧಗಳ ವೃಕ್ಷಗಳು ಕಂಡಿಬಂದಿದೆ.
ಶಿವಮೊಗ್ಗದಲ್ಲಿ ಅಧಿಕ ಅರಣ್ಯ ನಾಶ: ರಾಜ್ಯದ ಒಟ್ಟು ಅರಣ್ಯ ಪ್ರದೇಶ ಅಧಿಕವಾಗಿದ್ದರೂ, ಹಿಂದಿನ ವರದಿಗೆ ಹೋಲಿಕೆ ಮಾಡಿದರೆ ಸುಮಾರು 50 ಚದರ ಕಿ.ಮೀ. ಅರಣ್ಯವನ್ನು ಶಿವಮೊಗ್ಗ ಕಳೆದುಕೊಂಡಿದೆ. ಜಿಲ್ಲೆಯಲ್ಲಿ ಈಗ 4, 270 ಚದರ ಕಿ.ಮೀ. ಅರಣ್ಯವಿದೆ. ಆದರೂ, ಒಟ್ಟಾರೆ ಭೂಭಾಗದ ಶೇ.50 ರಷ್ಟು ಅರಣ್ಯ ಪ್ರದೇಶ ಶಿವಮೊಗ್ಗದಲ್ಲಿದ್ದು, ಆರನೇ ಸ್ಥಾನದಲ್ಲಿದೆ.
ಹಚ್ಚ ಹಸಿರ ಕೊಡಗು: ಕೊಡಗಿನ ಒಟ್ಟಾರೆ ಭೂಭಾಗದ ಶೇ.79.56 ಅರಣ್ಯದಿಂದ ಆವೃತವಾಗಿದ್ದು, ರಾಜ್ಯದಲ್ಲೆ ಮೊದಲ ಸ್ಥಾನದಲ್ಲಿದೆ. ಅನಂತರ ಸ್ಥಾನಗಳಲ್ಲಿ ಉತ್ತರ ಕನ್ನಡ(ಶೇ.79.04), ಉಡುಪಿ(63.75), ದಕ್ಷಿಣ ಕನ್ನಡ(63.05), ಚಿಕ್ಕಮಗಳೂರು(54.87) ಸ್ಥಾನ ಪಡೆದಿವೆ. ರಾಯಚೂರು, ಕೊಪ್ಪಳ, ಬೀದರ್ ಹಾಗೂ ಕಲಬುರಗಿಯಲ್ಲಿ ಅತಿ ಕಡಿಮೆ ಅರಣ್ಯವಿದೆ ಎಂದು ಹೇಳಲಾಗಿದೆ.