ಹಿಂದೂರಾಷ್ಟ್ರ ಕಟ್ಟಲು ಹೊರಟವರ ಆಡಳಿತ ಕೊನೆಗಾಣಿಸಬೇಕಿದೆ: ಪ್ರೊ.ರವಿವರ್ಮ ಕುಮಾರ್

Update: 2020-01-01 17:29 GMT

ಮೈಸೂರು,ಜ.1: ಅಂದು ಅಸ್ಪೃಶ್ಯತೆ ದಬ್ಬಾಳಿಕೆಗೆ ಒಳಗಾಗಿದ್ದ ದಲಿತರು ಮಹಾರಾಷ್ಟ್ರದ ಕೋರೆಂಗಾವ್ ಯುದ್ಧಭೂಮಿಯಲ್ಲಿ ಪೇಶ್ವೆಗಳ ಆಡಳಿತವನ್ನು ಕೊನೆಗಾಣಿಸಿದ ಮಾದರಿಯಲ್ಲೇ ಇಂದು ಹಿಂದೂರಾಷ್ಟ್ರ ಕಟ್ಟಲು ಹೊರಟಿರುವವರ ಆಡಳಿತವನ್ನು ಕೊನೆಗಾಣಿಸಬೇಕಿದೆ ಎಂದು ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಕರೆ ನೀಡಿದರು.

ಜೈ ಬೀಮ್ ಕೋರೆಂಗಾವ್ ವಿಜಯೋತ್ಸವ ಸಮಿತಿ ಅಶೋಕಪುರಂ, ಮೈಸೂರು ವತಿಯಿಂದ ಜಯನಗರದ ರೈಲ್ವೇ ಗೇಟ್ ಹತ್ತಿರ ಇರುವ ಕೋರೆಂಗಾವ್ ಸ್ಥಂಭದ ಬಳಿ ಬುಧವಾರ ಭೀಮಾ ಕೋರೆಂಗಾವ್ 202ನೇ ಸಂಭ್ರಮಾಚರಣೆ ಹಾಗೂ ವಾರ್ಷಿಕೋತ್ಸವವನ್ನು ಉದ್ಘಾಟಸಿ ಅವರು ಮಾತನಾಡಿದರು. ಧರ್ಮದ ಹೆಸರಿನಲ್ಲಿ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಬಳಿಯಲಾಗುತಿದ್ದು, ಭಾರತದ ಪ್ರಜ್ಞಾವಂತ ನಾಗರಿಕರೆಲ್ಲರೂ ಇದನ್ನು ವಿರೋಧಿಸದಿದ್ದರೆ ಮುಂದೊಂದು ದಿನ ದೊಡ್ಡ ದುರಂತವೇ ಕಾದಿದೆ. ಸಿಎಎ, ಎನ್‍ಪಿಆರ್ ಮತ್ತು ಎನ್‍ಆರ್‍ಸಿ ಅತ್ಯಂತ ಅಮಾನವೀಯ ಗುಣಹೊಂದಿದೆ ಎಂದು ಹೇಳಿದರು. 

ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ ಧರ್ಮದ ಹೆಸರಿನ ಆಡಳತದ ಯಾವ ಕಾನೂನುಗಳು ಇಲ್ಲ. ಆದರೆ ಇಂದು ನಮ್ಮನ್ನು ಆಳುತ್ತಿರುವವರು ಅದನ್ನೆಲ್ಲಾ ಧಿಕ್ಕರಿಸಿ ಸಿಎಎ, ಎನ್‍ಪಿಆರ್ ಮತ್ತು ಎನ್‍ಆರ್‍ಸಿ ಜಾರಿಗೆ ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದಿದೆ. ಅಂಬೇಡ್ಕರ್ ಅವರ ಕನಸಿನ ಸಂವಿಧಾನದ ಆಶಯಗಳನ್ನು ನುಚ್ಚುನೂರು ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಜಾಗೃತರಾಗಬೇಕಿದೆ ಎಂದು ಹೇಳಿದರು.

ಪೌರತ್ವ ತಿದ್ದುಪಡಿ ಹೆಸರಿನಲ್ಲಿ ಬಾಂಗ್ಲಾದೇಶದಲ್ಲಿ ತುಳಿತಕ್ಕೊಳಗಾದ ಹಿಂದೂಗಳಿಗೆ ನಮ್ಮ ದೇಶದಲ್ಲಿ ಪೌರತ್ವ ನೀಡುವುದಾಗಿ ಹೇಳುತ್ತಿದ್ದಾರೆ. ಆದರೆ ಬಾಂಗ್ಲಾದೇಶವು 'ನಮ್ಮ ದೇಶದಲ್ಲಿ ತೊಂದರೆಗೊಳಗಾಗಿ ಬಂದವರ ಹೆಸರನ್ನು ಕೊಡಿ' ಎಂದು ಕೇಳಿದ್ದಕ್ಕೆ ನಿಮ್ಮಿಂದ ತೊಂದರೆಯಲ್ಲ ನಿಮಗಿನ ಮುಂಚೆಯ ಮಿಲಿಟರಿ ಆಡಳಿತದಲ್ಲಿ ತೊಂದರೆಯಾಗಿರುವವರು ಎಂಬ ಸುಳ್ಳನ್ನು ಭಾರತ ಹೇಳಿದೆ. ಸಿಎಎ, ಎನ್‍ಆರ್‍ಸಿ ಮತ್ತು ಎನ್‍ಪಿಆರ್ ಕಾಯ್ದೆ ಕುರಿತು ಯೂರೊಪ್ ಸಂಯುಕ್ತ ರಾಷ್ಟ್ರಗಳು ಭಾರತ ಸರ್ಕಾರಕ್ಕೆ ಚೀಮಾರಿ ಹಾಕಿವೆ. ಜೊತೆಗೆ ಅಮೆರಿಕಾ ಕೂಡ ಈ ಕಾಯ್ದೆಯನ್ನು ವಿರೋಧಿಸಿದೆ ಎಂದು ಹೇಳಿದರು.

ನಮ್ಮ ಮಿತ್ರರಾಗಿದ್ದ ಬಾಂಗ್ಲಾ, ಆಫ್ಘಾನಿಸ್ಥಾನ, ಪಾಕಿಸ್ತಾನ ರಾಷ್ಟ್ರಗಳು ನಮಗೆ ಸ್ವಾತಂತ್ರ್ಯ ಬಂದಾಗ ಶತ್ರುಗಳಾದರು. ಅಂತಹ ವಾತಾವರಣ ಈಗ ನಿರ್ಮಾಣವಾಗಿದೆ. ಆ ದೇಶಗಳ ಅಕ್ಕಪಕ್ಕದಲ್ಲಿರುವ ರಾಜ್ಯಗಳಿಗೆ ತೊಂದರೆ ಎಂಬ ಭಾವನೆ ನಿಮ್ಮಲ್ಲಿದ್ದರೆ ಅದನ್ನು ತೊಡೆದು ಹಾಕಿ. ಏಕೆಂದರೆ ಮುಂದೊಂದು ದಿನ ನಿಮ್ಮ ಬುಡಕ್ಕೆ ಅದು ಬಂದು ನಿಲ್ಲಲಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ಚಾಮರಾಜನಗರದ ನಳಂದ ಬೌದ್ಧ ವಿಶ್ವವಿದ್ಯಾನಿಲಯದ ಭೋದಿ ದತ್ತ ಬಂತೇಜಿ ವಹಿಸಿದ್ದರು. ಮೈಸೂರಿನ ಗಾಂಧಿನಗರದ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತರ ಡಿ.ಉಮಾಪತಿ ಮುಖ್ಯಭಾಷಣ ಮಾಡಿದರು.

ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಪುರುಷೋತ್ತಮ್, ಪ್ರಗತಿಪರ ಚಿಂತಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ವಕೀಲ ಎಸ್.ಉಮೇಶ್, ಎಪಿಎಂಸಿ ಉಪಾಧ್ಯಕ್ಷ ಚಿಕ್ಕ ಜವರಪ್ಪ, ಪತ್ರಕರ್ತ ದೀಪಕ್, ಅರಕ್ಷಕ ನೀರಿಕ್ಷಕ ಸಿದ್ದರಾಜು, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಜಯರಾಜ್ ಹೆಗ್ಡೆ ಸ್ವಾಗತಿಸಿದರು. ಖ್ಯಾತ ಗಾಯಕ ಹಿರಿಯ ರಂಗಕರ್ಮಿ ಎಚ್.ಜನಾರ್ಧನ್(ಜನ್ನಿ) ಮತ್ತು ಅವರ ತಂಡದಿಂದ ಪರಿವರ್ತನಾ ಗೀತೆಗಳನ್ನು ಹಾಡಲಾಯಿತು.

ದಲಿತ ವೆಲ್‍ಫೇರ್ ಟ್ರಸ್ಟ್ ಅಧ್ಯಕ್ಷ ಶಾಂತರಾಜು, ಕರ್ನಾಟಕ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ನಿವೃತ್ತ ಐಜಿಪಿ ಅರ್ಕೇಶ್, ಉಪವಿಭಾಗಾಧಿಕಾರಿ ವೆಂಕಟರಾಜು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್.ಚನ್ನಪ್ಪ, ಪತ್ರಕರ್ತ ಸೋಮಯ್ಯ ಮೆಲಯೂರು, ಪ್ರಗತಿಪರ ಚಿಂತಕರಾದ ದಿಲೀಪ್ ನರಸಯ್ಯ, ಮಹೇಶ್ ಸೋಸ್ಲೆ, ಮರಿದೇವಯ್ಯ, ವಕೀಲ ಪುನೀತ್ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೂ ಮುನ್ನ ನಗರದ ಟೌನ್‍ಹಾಲ್‍ನಿಂದ ಭೀಮಾ ಕೋರೆಂಗಾವ್ ಸ್ಥಂಭದವರೆಗೆ ಡಾ.ಬಿ.ಆರ್.ಅಂಬೇಡ್ಕರ್ ಸ್ಥಬ್ದಚಿತ್ರದ ಮೆರವಣಿಗೆಯನ್ನು ವಿವಿಧ ಕಲಾ ತಂಡಗಳ ಮೂಲಕ ನಡೆಸಲಾಯತು.

ಹಿಟ್ಲರ್ ಆಡಳಿತದ ಮಾದರಿಯಲ್ಲೇ ಭಾರತದ ಆಡಳಿತ

ಹಿಟ್ಲರ್ ಆಡಳಿತದ ಮಾದರಿಯಲ್ಲೇ ಭಾರತದ ಆಡಳಿತ ನಡೆಯುತ್ತಿದೆ. ನಮ್ಮನ್ನು ಆಳುತ್ತಿರುವವರು ಹಿಟ್ಲರ್ ಹಾಕಿದ ಸ್ಕ್ರಿಪ್ಟ್ ಮಾದರಿಯಲ್ಲೇ ಆಡಳಿತ ನಡೆಸುತ್ತಿದ್ದಾರೆ. ಈಗಿನ ಆಡಳಿತಕ್ಕೂ ಹಿಟ್ಲರ್ ಆಡಳಿತಕ್ಕೂ ಯಾವ ವ್ಯತ್ಯಾಸವೂ ಇಲ್ಲ, ಅಂದು ಹಿಟ್ಲರ್ ಯಹೂದಿಗಳನ್ನು ಟಾರ್ಗೆಟ್ ಮಾಡಿದ್ದ, ಇಂದು ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಮ್ಮ ದೇಶದ ಪ್ರಧಾನಿ ವಿದೇಶಗಳಿಗೆ ಹೋದಾಗ ಬುದ್ಧನ ನಾಡಿನಿಂದ ಬಂದವನು ಎಂದು ಹೇಳುತ್ತಾರೆ. ನಮ್ಮ ದೇಶಕ್ಕೆ ಬಂದಾಗ ಹಿಂದುತ್ವದ ಹಿಂದೂರಾಷ್ಟ್ರದ ಪರಿಕಲ್ಪನೆಯ ಮನುವಾದಿಗಳಾಗುತ್ತಾರೆ.

ಪ್ರೊ.ರವಿವರ್ಮ ಕುಮಾರ್, ಮಾಜಿ ಅಡ್ವೊಕೇಟ್ ಜನರಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News