ತುಮಕೂರು: ಪ್ರಧಾನಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ರೈತರು ಪೊಲೀಸ್ ವಶಕ್ಕೆ
ತುಮಕೂರು, ಜ.2: ನಗರದಲ್ಲಿ ಇಂದು ಕೇಂದ್ರದ ಕೃಷಿ ಇಲಾಖೆ ರಾಜ್ಯ ಸರಕಾರದ ಸಹಕಾರದಲ್ಲಿ ಆಯೋಜಿಸಿರುವ ಕೃಷಿ ಕರ್ಮಣ್ಯೆ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಾಲ್ಕನೇ ಸುತ್ತಿನ ಕೃಷಿ ಸನ್ಮಾನ ಕಂತು ಬಿಡುಗಡೆ ಕಾರ್ಯಕ್ರಮಕ್ಕೆ ಆಗಮಿಸುವ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆಗೆ ಮುಂದಾಗಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಪ್ಪುಬಟ್ಟೆ ಪ್ರದರ್ಶನಕ್ಕೆ ಮುಂದಾಗಿದ್ದ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರನ್ನು ಬಂಧಿಸಿರುವ ಪೊಲೀಸರು ಕೊರಟಗೆರೆ ಯ ಪೊಲೀಸ್ ತರಬೇತಿ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ
ಕೇಂದ್ರ ಸರಕಾರ ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದ್ದು, ಕಳೆದ ಆರು ವರ್ಷಗಳಿಂದ ರೈತರ ಗೋಳು ಕೇಳುವವರೇ ಇಲ್ಲ.ರೈತರ ಹೆಸರಿನಲ್ಲಿ ಉದ್ದಿಮೆ ದಾರರ ಪರವಾದ ಕಾನೂನುಗಳನ್ನು ಜಾರಿಗೆ ತಂದು ಅದಾನಿ,ಅಂಬಾನಿ ಗ್ರೂಪ್ ಗೆ ಅನುಕೂಲು ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿ ಪ್ರಧಾನಿ ಸಮಾವೇಶದಲ್ಲಿ ಕಪ್ಪುಬಾವುಟ ಪ್ರರ್ದಶನಕ್ಕೆ ಮುಂದಾಗಿದ್ದ ರೈತರನ್ನು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ವಶಕ್ಕೆ ಪಡೆದ ಪೊಲೀಸರು ಕೊರಟಗೆರೆ ಯಲ್ಲಿರುವ ಶಸ್ತ್ರಾಸ್ತ್ರ ಮೀಸಲು ಪಡೆ ತರಬೇತಿ ಕೇಂದ್ರ ಕ್ಕೆ ಕರೆದೊಯ್ದರು.
ಪ್ರಧಾನಿ ನರೇಂದ್ರ ಮೋದಿ ಇಂದು ಅಪರಾಹ್ನ 2:10ಕ್ಕೆ ತುಮಕೂರಿಗೆ ಆಗಮಿಸಲಿದ್ದಾರೆ.