ಪಾಕ್ ವಿರುದ್ಧ ಪ್ರತಿಭಟಿಸಬೇಕಿದ್ದ ಕಾಂಗ್ರೆಸ್ ಸಂಸತ್ ವಿರುದ್ಧವೇ ಮಾತನಾಡುತ್ತಿದೆ: ನರೇಂದ್ರ ಮೋದಿ

Update: 2020-01-02 15:48 GMT

ತುಮಕೂರು, ಜ.2: ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸಿದೆ. 370ನೇ ಕಲಂ ರದ್ದುಪಡಿಸಿ ಶಾಂತಿಯನ್ನು ಸ್ಥಾಪಿಸಿದ್ದೇವೆ. ಸದಾ ಆತಂಕವಾದಿಗಳ ಗೂಡಾಗಿದ್ದ ಜಮ್ಮು-ಕಾಶ್ಮೀರದಲ್ಲಿ ಇಂದು ಆತಂಕ ದೂರವಾಗಿದೆ. ಜನ ನೆಮ್ಮದಿಯಿಂದ ಜೀವನ ನಡೆಸಲು ಅವಕಾಶ ಮಾಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಮಾತನಾಡಿದ ಪ್ರಧಾನಿ, ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಹೋರಾಟ ಮಾಡುತ್ತಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು.

ಬಹುಕಾಲದ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ವಿವಾದವನ್ನು ಬಗೆಹರಿಸಿದ್ದೇವೆ. ಇನ್ನು ರಾಮಮಂದಿರವನ್ನು ನಿರ್ಮಿಸುತ್ತೇವೆ ಎಂದ ಅವರು, ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಸಂಸತ್ ನಲ್ಲಿ ಅಂಗೀಕರಿಸಿದ್ದೇವೆ. ಅದನ್ನು ಜಾರಿಗೊಳಿಸಲು ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿ ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿವೆ. ಕಾಂಗ್ರೆಸ್ ಪಾಕಿಸ್ತಾನದ ವಿರುದ್ಧ ಪ್ರತಿಭಟನೆ ಮಾಡುವುದು ಬಿಟ್ಟು ಸಂಸತ್ ವಿರುದ್ಧವೇ ಮಾತನಾಡುತ್ತಿದೆ ಎಂದು ಆರೋಪಿಸಿದರು.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾದ ಹಿಂದೂಗಳು, ಸಿಖ್ಖರು, ಬೌದ್ಧರು, ಪಾರ್ಸಿಗಳು, ಕ್ರೈಸ್ತರು, ಜೈನರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಅತ್ಯಾಚಾರ ನಡೆಯುತ್ತಿದೆ. ಹಿಂಸೆ ನೀಡಲಾಗುತ್ತಿದೆ. ಅವರಿಗೆ ಭಾರತದ ಪೌರತ್ವ ನೀಡುತ್ತೇವೆ ಎಂದರೆ, ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ. 
ದ್ವೇಷದ ವಾತಾವರಣವನ್ನು ವಿರೋಧ ಪಕ್ಷಗಳು ಹುಟ್ಟುಹಾಕುತ್ತಿವೆ ಎಂದು ಕಿಡಿಕಾರಿದರು.

ಪಾಕಿಸ್ತಾನದಲ್ಲಿ ದಲಿತರು, ಶೋಷಿತರ ಮೇಲೆ ಕ್ರೌರ್ಯ ನಡೆಯುತ್ತಿದ್ದರೂ ಕಾಂಗ್ರೆಸ್ 70 ವರ್ಷಗಳಿಂದ ಸುಮ್ಮನೆ ಕುಳಿತಿದೆ. ಹೋರಾಟವನ್ನೇ
ಮಾಡುತ್ತಿಲ್ಲ. ಪಾಕಿಸ್ತಾನದ ಕರಾಳತನಕ್ಕೆ ಬೀಗ ಬಿದ್ದಿದೆ. ಕಾಂಗ್ರೆಸ್ ಮತ್ತು ಇತರರು ಪಾಕಿಸ್ತಾನದ ಹಿಂದೂಗಳಿಗೆ ಪೌರತ್ವ ನೀಡುವುದನ್ನು ವಿರೋಧಿಸುತ್ತಿದ್ದಾರೆ ಎಂದು ಆರೋಪಿಸಿದರು. 

'ಸಿದ್ದಗಂಗಾ ಮಠದಲ್ಲಿ ಧಾರ್ಮಿಕ ವಿಷಯಗಳನ್ನು ಪ್ರಸ್ತಾಪಿಸುವುದನ್ನು ಬಿಟ್ಟು ಮೋದಿ ರಾಜಕಾರಣ ಮಾತನಾಡಲು ಬಳಸಿಕೊಂಡರು. ಮಕ್ಕಳಿಗೆ ರಾಜಕೀಯ ಭಾಷಣ ಮಾಡಿದರು. ಮಕ್ಕಳು ಭವಿಷ್ಯದ ಪ್ರಜೆಗಳು ಎಂಬುದನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಪ್ರಧಾನಿ ಮಕ್ಕಳು ಚೆನ್ನಾಗಿ ಓದಬೇಕು. ಉತ್ತಮ ಹುದ್ದೆಗಳನ್ನು ಹಿಡಿಯಬೇಕು. ದೇಶಕ್ಕೆ ಜಿಲ್ಲೆಗೆ ಕೀರ್ತಿ ತರಬೇಕು ಎಂಬಂತಹ ಒಂದೇ ಒಂದು ಮಾತನ್ನು ಹೇಳದೆ ಭಾಷಣ ಮುಗಿಸಿದರು ಎಂಬ ಆರೋಪ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News