ಕುವೆಂಪು ವಿವಿ ಕುಲಸಚಿವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು

Update: 2020-01-02 15:50 GMT

ಶಿವಮೊಗ್ಗ, ಜ. 2: ಕುವೆಂಪು ವಿಶ್ವ ವಿದ್ಯಾನಿಲಯ ಕುಲ ಸಚಿವರೋರ್ವರ ವಿರುದ್ಧ ವಿದ್ಯಾರ್ಥಿ ಸಂಘಟನೆಯೊಂದರ ಸದಸ್ಯರೋರ್ವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿರುವ ಸಂಗತಿ ಬೆಳಕಿಗೆ ಬಂದಿದೆ.

ವಿವಿ ಆಡಳಿತ ವಿಭಾಗದ ಕುಲ ಸಚಿವ ಪ್ರೊ.ಎಸ್.ಎಸ್.ಪಾಟೀಲ್‍ರವರ ಎಂಬುವರ ವಿರುದ್ಧ ಈ ದೂರು ದಾಖಲಾಗಿದೆ. ವಿದ್ಯಾರ್ಥಿ ಸಂಘದ ಸದಸ್ಯ ಕೆ.ಸಿ.ಪವನ್ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಕುಲ ಸಚಿವರ ವಿರುದ್ಧ ಪರಿಶಿಷ್ಟ ಜಾತಿ-ಪಂಗಡ ದೌರ್ಜನ್ಯ ಕಾಯ್ದೆಯಡಿ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಘಟನೆ ಹಿನ್ನೆಲೆ: ವಿವಿಯ ಹಾಸ್ಟೆಲ್‍ನಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ, ಡಿಸೆಂಬರ್ 31 ರಂದು ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಪ್ರೊ. ಎಸ್.ಎಸ್.ಪಾಟೀಲ್ ಅವರಿಗೆ ಮನವಿ ಅರ್ಪಿಸಲು ಸಂಘದ ಸದಸ್ಯರು ತೆರಳಿದ್ದರು. ಈ ತಂಡದಲ್ಲಿ ದೂರುದಾರ ಕೆ.ಸಿ.ಪವನ್‍ರವರು ಇದ್ದರು.

'ಗಡ್ಡ ಬಿಟ್ಟಿದ್ದಿಯಾ. ನೋಡಲು ರೌಡಿ ತರಹ ಇದ್ದಿಯಾ. ಗಡ್ಡ ತೆಗೆಸಲು ಹಣ ಬೇಕಾ?' ಎಂದು ತನ್ನನ್ನು ಪ್ರಶ್ನಿಸಿ, ಜಾತಿ ಹೆಸರು ಕೇಳಿ ನಂತರ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರುದಾರ ಕೆ.ಸಿ.ಪವನ್‍ರವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News