ರೈತರ ಸಮಸ್ಯೆ ಆಲಿಸದಿದ್ದರೆ ಸಚಿವ ಸೋಮಣ್ಣ ಸಭೆಗೆ ಮುತ್ತಿಗೆ: ಬಡಗಲಪುರ ನಾಗೇಂದ್ರ ಎಚ್ಚರಿಕೆ

Update: 2020-01-02 17:17 GMT

ಮೈಸೂರು,ಜ.2: ಪವರ್ ಗ್ರಿಡ್ ಮಾರ್ಗ ಬದಲಾಯಿಸುವಂತೆ ಒತ್ತಾಯಿಸಿ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿರುವ ಪ್ರತಿಭಟನಾ ಧರಣಿ ಸ್ಥಳಕ್ಕೆ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜ.3ರ ಶುಕ್ರವಾರ ಆಗಮಿಸಿ ಸಮಸ್ಯೆ ಆಲಿಸಬೆಕು. ಇಲ್ಲದಿದ್ದರೆ ಜಿ.ಪಂ.ನಲ್ಲಿ ಅವರು ನಡೆಸುವ ಕೆಡಿಪಿ ಸಭೆಗೆ ರೈತರು ಮುತ್ತಿಗೆ ಹಾಕುವುದಾಗಿ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ನಡೆಸುತ್ತಿರುವ “ಪವರ್ ಗ್ರಿಡ್ ಬದಲಾಯಿಸಿ ಇಲ್ಲವೇ ನಮಗೆ ವಿಷ ಕೊಡಿ” ಎಂದು ನಡೆಸುತ್ತಿರುವ ಧರಣಿ ಸ್ಥಳದಲ್ಲೇ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ರೈತರ ಜಮೀನು ಮತ್ತು ಮನೆಗಳ ಮೇಲೆ ಪವರ್ ಗ್ರಿಡ್ ಲೈನ್‍ಗಳನ್ನು ಎಳೆಯಲಾಗಿದೆ. ಇದು ಅವೈಜ್ಞಾನಿಕ ಮತ್ತು ಅನಾನೂಕೂಲದಿಂದ ಕೂಡಿದೆ. ಮೊದಲು ನಿರ್ಧಾರ ಮಾಡಿದ್ದ ಕಡೆ ಪವರ್ ಲೈನ್ ಹಾಕಬಹುದಿತ್ತು. ಆದರೆ ರಿಯಲ್ ಎಸ್ಟೇಟ್ ಮಾಫಿಯಾಗಳ ಒತ್ತಡಕ್ಕೆ ಮಣಿದು ಅಧಿಕಾರಿಗಳು ರೈತರ ಜಮೀನು ಮತ್ತು ಮನೆಗಳ ಮೇಲೆ ಹಾಕುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿದರು.

ಪವರ್ ಗ್ರಿಡ್ ಯೋಜನೆ ಕೈಬಿಡಬೇಕು ಎಂದು ಒಂದು ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ಆದರೆ ಇದುವರೆಗೂ ಯಾವೊಬ್ಬ ಜನಪ್ರತಿನಿಧಿಯೂ ನಮ್ಮ ಸಮಸ್ಯೆ ಕೇಳಲು ಆಗಮಿಸಿಲ್ಲ, ನಮ್ಮನ್ನು ಪ್ರತಿನಿಧಿಸುವ ಸಂಸತ್ ಸದಸ್ಯರುಗಳು ಮತ್ತು ಜನಪ್ರತಿನಿಧಿಗಳಿಗೆ ಪಂಚೇಂದ್ರಿಯಗಳು ಇಲ್ಲವಾಗಿದೆ ಎಂದು ಕಿಡಿಕಾರಿದರು.

ರೈತರು ದಿನನಿತ್ಯ ಒಂದಿಲ್ಲೊಂದು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಭತ್ತ ಕೇಂದ್ರಗಳು ಪ್ರಾರಂಭವಾಗಿದ್ದರೂ ಖರೀದಿ ಮಾಡಲು ಮಿತಿ ವಿಧಿಸಿರುವುದು ಸರಿಯಲ್ಲ. ಭತ್ತ ಕಟಾವಿಗೆ ಬಂದಿದ್ದು, ಕೃಷಿ ಇಲಾಖೆಯವರು ಕಟಾವು ಯಂತ್ರಗಳನ್ನು ಸಮಯಕ್ಕೆ ಪೂರೈಸುತ್ತಿಲ್ಲ. ಕಾಡಾನೆ ಹಾವಳಿಯಿಂದ ಫಸಲು ನಷ್ಟವಾಗುವುದರ ಜೊತೆಗೆ ಮಾನವ ಹತ್ಯೆ ನಡೆಯುತ್ತಿದೆ. ಕಲ್ಲೂರು ನಾಗನಹಳ್ಳಿಯಲ್ಲಿ ನಿರ್ಮಾಣವಾಗಿರುವ ಗೃಹ ನಿರ್ಮಾಣ ಮಂಡಳಿಯ ಬಡಾವಣೆಗೆ ಜಮೀನು ಕಳೆದುಕೊಂಡ ರೈತರಿಗೆ ನಿವೇಶನ ನೀಡಲು ಸರ್ಕಾರ ತೀರ್ಮಾನಿಸಿದೆ. ಅದೇ ರೀತಿ ಕೆಂಚಲಗೂಡು ಗ್ರಾಮದಲ್ಲಿ ಗೃಹ ಮಂಗಳಿಗೆ ಭೂಮಿ ಕೊಟ್ಟ ರೈತರಿಗೂ ನಿವೇಶನ ನೀಡಬೇಕು ಎಂದು ಒತ್ತಾಯಿಸಿದರು.

ರೈತರ ಎಲ್ಲಾ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಆಗಮಿಸಬೇಕು ಇಲ್ಲದಿದ್ದರೆ ಅವರು ನಡೆಸುವ ಸಭೆಗೆ ಸಾವಿರಾರು ರೈತರು ಮುತ್ತಿಗೆ ಹಾಕುವುದಾಗಿ ಬೆದರಿಕೆ ಹಾಕಿದರು.

ಪತ್ರಿಕಾಗೋಷ್ಠಿಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ರೈತಮುಖಂಡರುಗಳಾದ ಲೊಕೇಶ್‍ರಾಜೇ ಅರಸ್, ಆಲನಹಳ್ಳೀ ವಿಜಯೇಂದ್ರ, ಪಿ.ಮರಂಕಯ್ಯ, ಶಿವಣ್ಣ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News