×
Ad

ಸಿಎಎ-ಎನ್‌ಆರ್‌ಸಿ ವಿರುದ್ಧ ಪ್ರತಿಭಟಿಸುತ್ತಿದ್ದ ಸಿಎಫ್ಐ ಕಾರ್ಯಕರ್ತರ ಬಂಧನ: ಲಘು ಲಾಠಿ ಪ್ರಹಾರ

Update: 2020-01-02 23:21 IST

ಶಿವಮೊಗ್ಗ, ಜ.2: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಸದಸ್ಯರು ಗುರುವಾರ ನಗರದ ಮಾರ್ಡನ್ ಚಿತ್ರಮಂದಿರ ಸಮೀಪದ ಬಿ.ಹೆಚ್.ರಸ್ತೆಯಲ್ಲಿ ದಿಢೀರ್ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರದ ಘೋಷಣೆ ಕೂಗಿದರು.

ಈ ವೇಳೆ ಪೊಲೀಸರು ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆಸಿದರು. ನಂತರ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದರು. ಇದರಿಂದ ಸ್ಥಳದಲ್ಲಿ ಕೆಲ ಸಮಯ ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ, ಬಿ.ಹೆಚ್.ರಸ್ತೆಯಲ್ಲಿ ಕೆಲ ಸಮಯ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವಂತಾಗಿತ್ತು.

ಎಎ ವೃತ್ತದ ಬಳಿ ಪ್ರತಿಭಟನೆ ನಡೆಸಲು ಕಾರ್ಯಕರ್ತರು ನಿರ್ಧರಿಸಿದ್ದರು. ಆದರೆ ಆ ಸ್ಥಳದಲ್ಲಿ ಪ್ರತಿಭಟನೆಗೆ ಪೊಲೀಸರು ಅನುಮತಿ ನಿರಾಕರಣೆ ಸಾಧ್ಯತೆ ಹಿನ್ನೆಲೆಯಲ್ಲಿ, ಮಾರ್ಡನ್ ಚಿತ್ರಮಂದಿರದ ಎದುರು ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಲು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಪೌರತ್ವ ಕಾಯ್ದೆ ಜಾರಿಗೊಳಿಸಬಾರದು ಎಂದು ಒತ್ತಾಯಿಸಿದರು. 

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮುಖಂಡ ಆರೀಫ್ ನೇತೃತ್ವದಲ್ಲಿ ಸುಮಾರು 15 ಜನ ಯುವಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News