ಪೌರತ್ವ ಕಾಯ್ದೆಯನ್ನು ಸರಕಾರ ತಕ್ಷಣ ಹಿಂಪಡೆಯಲಿ: ಚೆನ್ನವೀರ ಕಣವಿ
ಬೆಂಗಳೂರು, ಜ.3: ದೇಶ ಎದುರಿಸುತ್ತಿರುವ ಭೀಕರ ಪರಿಸ್ಥಿತಿಯನ್ನು ಎದುರಿಸುವ ಬದಲಿಗೆ ಪೌರತ್ವ(ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಜಾಗೂ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಜನರ ಮೇಲೆ ಹೇರುವುದು ಸರಿಯಲ್ಲ ಎಂದು ವಿದ್ವಾಂಸ ಮತ್ತು ಹಿರಿಯ ಕವಿ ಚೆನ್ನವೀರ ಕಣವಿ ಹೇಳಿದ್ದಾರೆ.
ಸಾಮಾಜಿಕ ಸಾಮರಸ್ಯವನ್ನು ಕಾಪಾಡುವ ದೃಷ್ಟಿಯಿಂದ ಕೇಂದ್ರ ಸರಕಾರ ಜಾರಿ ಮಾಡಲು ಮುಂದಾಗಿರುವ ಸಿಎಎ ಮತ್ತು ಎನ್‌ಸಿಆರ್ ಅನ್ನು ಕೂಡಲೇ ವಾಪಸ್ಸು ಪಡೆಯಬೇಕು ಎಂದು ಅವರು ಮನವಿ ಮಾಡಿದ್ದಾರೆ. ಇದೇ ವೇಳೆ ಇದನ್ನು ವಿರೋಧಿಸಿ ನಡೆದ ಪ್ರತಿಭಟನೆಗಳ ವೇಳೆ ಆಡಳಿತ ಯಂತ್ರಾಂಗದಿಂದ ಆಗಿರುವ ದೌರ್ಜನ್ಯಗಳನ್ನು ಸಾರ್ವಜನಿಕ ದೂರು ವಿಚಾರಣೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ದೇಶದಲ್ಲಿ ನಿರುದ್ಯೋಗ, ಅಸಮಾನತೆ, ಅಸಹನೆಯಂತಹ ಭೀಕರವಾದ ಸವಾಲುಗಳನ್ನು ಮುಂದಿಟ್ಟುಕೊಂಡಿದೆ. ಈ ವೇಳೆ ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಮಾಜಿಕ ಸೌಹಾರ್ದ ಅಗತ್ಯ. ಆದರೆ, ಈ ವೇಳೆ ಅಶಾಂತಿ, ಕೋಮುದ್ವೇಷ, ಭವಿಷ್ಯದ ಬಗ್ಗೆ ಚಿಂತೆಯನ್ನುಂಟು ಮಾಡುವ ಕಾನೂನುಗಳು ದೇಶಕ್ಕೆ ಅಷ್ಟು ಒಳ್ಳೆಯದಲ್ಲ. ಇವನ್ನು ಜನವಿರೋಧಿ ಎಂದೇ ಭಾವಿಸಬಹುದಾಗಿದೆ ಎಂದು ಹೇಳಿದ್ದಾರೆ.
ಭಾರತೀಯ ಸಂಸ್ಕೃತಿ ಎಂದರೆ ನಾನಾ ನದಿಗಳು ಸೇರಿದ ಸಾಗರವಿದ್ದಂತೆ. ಅನೇಕ ಬಗೆಯ ಧಾರ್ಮಿಕ ನಂಬಿಕೆಗಳು, ಸಾಹಿತ್ಯ, ಸಂಸ್ಕೃತಿ, ಭಾಷೆಗಳಿಂದ ಪಕ್ವವಾದ ಸಂಸ್ಕೃತಿ ನಮ್ಮದು. ಪರಸ್ಪರ ಸಾಮರಸ್ಯದಿಂದ ಸಮನ್ವಯಗೊಂಡು ಅನೇಕ ಮುತ್ತು-ರತ್ನಗಳನ್ನು ಈ ಸಾಗರ ಕೊಟ್ಟಿದೆ. ಇದೇ ನಮ್ಮ ಶಕ್ತಿ ಮತ್ತು ಸತ್ವ. ನಮ್ಮ ಬಹುತ್ವದಲ್ಲಿರುವ ಸೌಹಾರ್ದತೆಯಿಂದ ಜಗತ್ತೇ ಬೆರಗಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಎಲ್ಲ ಧರ್ಮ, ಜಾತಿಯವರು ಹೋರಾಡಿದ್ದಾರೆ. ಎಲ್ಲರ ತ್ಯಾಗ, ಬಲಿದಾನದ ಮೂಲಕವೇ ನಾವಿಂದು ಸ್ವತಂತ್ರ ದೇಶ ಎಂದು ಕರೆಸಿಕೊಳ್ಳಲು ಸಾಧ್ಯವಾಗಿದೆ. ಬ್ರಿಟಿಷರ ಒಡೆದು ಆಳುವ ನೀತಿಯನ್ನು ಮೆಟ್ಟಿ ನಿಂತು, ಸೌಹಾರ್ದ ದೇಶ ಕಟ್ಟಿದ್ದೇವೆ. ಆದರೆ, ಇದೀಗ ಕೆಲವೊಂದಿಷ್ಟು ಶಕ್ತಿಗಳು ನಮ್ಮ ಒಗ್ಗಟ್ಟನ್ನು ಮುರಿಯಲು ಯತ್ನಿಸುತ್ತಿರುವುದು ಸಲ್ಲ ಎಂದು ನುಡಿದಿದ್ದಾರೆ.
ದೇಶದ ಪ್ರಜಾಪ್ರಭುತ್ವ, ಸಾರ್ವಭೌಮತ್ವ ಅಪಾಯದ ಸ್ಥಿತಿಯಲ್ಲಿದೆ. ಇದು ದೇಶಕ್ಕಾಗಿ ತ್ಯಾಗ ಮಾಡಿದ ಹುತಾತ್ಮರಿಗೆ, ಸ್ವಾತಂತ್ರ ಸೇನಾನಿಗಳಿಗೆ, ವೀರರಿಗೆ ಮಾಡುತ್ತಿರುವ ಅಪಮಾನವಾಗಿದೆ. ಇದೀಗ ಇಲ್ಲಿ ಅಶಾಂತಿ ಉಂಟಾಗಿದೆ. ಪೌರತ್ವ ಸಂಬಂಧಿಸಿದ ಎಲ್ಲ ಕಾನೂನು, ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ಕೈಬಿಡಬೇಕು. ಸಾಮಾಜಿಕ ಸಾಮರಸ್ಯ ಸ್ಥಾಪಿಸಲು ಮುಂದಾಗಬೇಕು ಎಂದು ಮನವಿ ಮಾಡಿದ್ದಾರೆ.