ಮುಖ್ಯಮಂತ್ರಿಯನ್ನು ಪ್ರಧಾನಿ ನಿರ್ಲಕ್ಷಿಸಿದ್ದು ರಾಜ್ಯದ ಜನತೆಗೆ ಮಾಡಿದ ಅವಮಾನ: ಸಿದ್ದರಾಮಯ್ಯ

Update: 2020-01-03 14:32 GMT

ಬೆಂಗಳೂರು, ಜ. 3: ‘ನೆರೆ ಪರಿಹಾರ ಕೊಡಿ’ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮನವಿ ಮಾಡಿದ್ದರೂ, ಪ್ರಧಾನಿ ಮೋದಿ ಮೌನ ವಹಿಸಿದ್ದೇಕೆ? ಎಂದು ಪ್ರಶ್ನಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಪ್ರಧಾನಿ ಕರ್ನಾಟಕ ರಾಜ್ಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಶುಕ್ರವಾರ ತಮ್ಮ ನಿವಾಸ ಕಾವೇರಿಯಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 22 ಜಿಲ್ಲೆಗಳ 103 ತಾಲೂಕುಗಳಲ್ಲಿ ಪ್ರವಾಹದ ಸಂದರ್ಭದಲ್ಲೂ ಮೋದಿ ಕರ್ನಾಟಕ ರಾಜ್ಯಕ್ಕೆ ಬಂದಿಲ್ಲ. ಸಣ್ಣಪುಟ್ಟ ವಿಚಾರಗಳಿಗೆ ಟ್ವಿಟ್ ಮಾಡುವ ಅವರು ಜನರಿಗೆ ಕನಿಷ್ಠ ಸಾಂತ್ವನವನ್ನೂ ಹೇಳಲಿಲ್ಲ ಎಂದು ವಾಗ್ದಾಳಿ ನಡೆಸಿದರು.

‘ಯಡಿಯೂರಪ್ಪನವರು ಯಾವುದೇ ಪಕ್ಷದಿಂದ ಆರಿಸಿ ಬಂದು ಸಿಎಂ ಆಗಿರಬಹುದು, ಆದರೆ ಒಬ್ಬ ಮುಖ್ಯಮಂತ್ರಿಯನ್ನು ವೇದಿಕೆ ಮೇಲೆಯೇ ನಿರ್ಲಕ್ಷಿಸಿ, ಅವಮಾನಿಸಿರುವುದು ರಾಜ್ಯದ ಆರೂವರೆ ಕೋಟಿ ಜನತೆಗೆ ಮಾಡಿರುವ ಅವಮಾನ ಎನ್ನವುದು ನನ್ನ ಅಭಿಪ್ರಾಯ’ ಎಂದು ಸಿದ್ದರಾಮಯ್ಯ ಹೇಳಿದರು.

ದೇಶದ ಪ್ರಧಾನಿ: ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ ನೀಡುವುದನ್ನು ಒಂದು ಜವಾಬ್ದಾರಿಯುತ ವಿಪಕ್ಷವಾಗಿ ಸ್ವಾಗತಿಸುತ್ತೇವೆ. ಪ್ರಧಾನಿ ಪದವಿ ಒಂದು ಪಕ್ಷಕ್ಕೆ ಸೇರಿದ್ದಲ್ಲ, ಅವರು ದೇಶದ 130 ಕೋಟಿ ಜನರಿಗೂ ಪ್ರಧಾನಿ. ಆದರೆ ನಮಗಿದ್ದ ಈ ತಿಳುವಳಿಕೆ ಪ್ರಧಾನಿಯವರಿಗೂ ಇರಬೇಕಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಸಾಕಷ್ಟು ಗಂಭೀರ ಸಮಸ್ಯೆಗಳು ದೇಶದ ಮುಂದಿದೆ, ಜನ ಕಂಗಾಲಾಗಿದ್ದಾರೆ, ಭವಿಷ್ಯದ ಬಗ್ಗೆ ಆತಂಕಕ್ಕೀಡಾಗಿದ್ದಾರೆ. ಇದನ್ನು ಎದುರಿಸುವ ಮಾರ್ಗೋಪಾಯಗಳ ಬಗ್ಗೆ ಯೋಚನೆ ಮಾಡುವ ಬದಲಿಗೆ ಪ್ರಧಾನಿ ಪಾಕಿಸ್ತಾನ, ಕಾಶ್ಮೀರ, ರಾಮಮಂದಿರದ ಬಗ್ಗೆ ಮಾತ್ರ ಮಾತನಾಡುತ್ತಾರೆ’ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದರು.

‘ಡಾ.ಶಿವಕುಮಾರ ಸ್ವಾಮೀಜಿಯವರು ಬದುಕಿದ್ದಾಗ ಅವರಿಗೆ ಭಾರತ ರತ್ನ ನೀಡಿ ಎಂದು ಸಿಎಂ ಆಗಿದ್ದ ನಾನು ಪತ್ರದ ಮೇಲೆ ಪತ್ರ ಬರೆದಿದ್ದೆ. ಅದಕ್ಕೆ ಪ್ರಧಾನಿ ಪ್ರತಿಕ್ರಿಯಿಸಲಿಲ್ಲ. ಈಗ ಅವರು ಲಿಂಗೈಕ್ಯರಾದ ನಂತರ ಗೌರವ ಸಲ್ಲಿಸಲು ಬಂದಿದ್ದಾರೆ. ಈಗಲಾದರೂ ಶ್ರೀಗಳಿಗೆ ಭಾರತರತ್ನ ಪ್ರಶಸ್ತಿ ನೀಡುತ್ತೇವೆಂದು ಹೇಳಬಹುದಿತ್ತು’ ಎಂದು ಸಿದ್ದರಾಮಯಯ್ಯ ಆಗ್ರಹಿಸಿದರು.

‘ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರಹಳ್ಳ ಕಾವಲ್ನಲ್ಲಿ ಎಚ್‌ಎಎಲ್ ಲಘು ಯುದ್ಧ ಹೆಲಿಕಾಪ್ಟರ್ ತಯಾರಿಕಾ ಘಟಕಕ್ಕೆ ಶಂಕು ಸ್ಥಾಪನೆ ಮಾಡಿ, 2018ರಲ್ಲಿ ಮೊದಲ ಸ್ವದೇಶಿ ಹೆಲಿಕಾಪ್ಟರ್ ಹಾರಲಿದೆ ಎಂದು ಮೋದಿ ಹೇಳಿದ್ದರು. ಮೂರು ವರ್ಷ ಕಳೆದರೂ ಹೆಲಿಕಾಪ್ಟರ್ ಇನ್ನೂ ತಯಾರಾಗಿಲ್ಲ’ ಎಂದು ಪ್ರಶ್ನಿಸಿದರು.

‘ತುಮಕೂರಿನ ವಸಂತ ನರಸಾಪುರದಲ್ಲಿ ದೇಶದ ಮೊದಲ ಫುಡ್‌ಪಾರ್ಕ್‌ನ್ನು ನನ್ನ ಸಮ್ಮುಖದಲ್ಲಿಯೇ ಪ್ರಧಾನಿ ಮೋದಿ ಉದ್ಘಾಟಿಸಿ 6 ವರ್ಷಗಳಾಗಿವೆ. ಇದರಿಂದ 10 ಸಾವಿರ ನೇರ ಮತ್ತು 25 ಸಾವಿರ ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ ಎಂದು ನನ್ನ ಎದುರೇ ಭಾಷಣ ಮಾಡಿದ್ದರು. ಎಲ್ಲಿದೆ ಉದ್ಯೋಗ?’ ಎಂದು ಸಿದ್ದರಾಮಯ್ಯ ಕೇಳಿದರು.

‘ಈ ಹಿಂದೆ ತುಮಕೂರಿಗೆ ಭೇಟಿ ನೀಡಿ ಹೇಮಾವತಿ-ನೇತ್ರಾವತಿ ನದಿ ಜೋಡಣೆ ಮಾಡಿ ಎಂಟು ಜಿಲ್ಲೆಗಳಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸುವುದಾಗಿ ಮೋದಿ ಹೇಳಿದ್ದರು. ಅದು ಈಗ ಯಾವ ಹಂತದಲ್ಲಿದೆ? ಆ ಯೋಜನೆಗೆ ಕೇಂದ್ರ ಸರಕಾರದಿಂದ ಎಷ್ಟು ದುಡ್ಡು ಕೊಟ್ಟಿದ್ದಾರೆಂದು ನಿನ್ನೆ ಮೋದಿ ತಮ್ಮ ಭಾಷಣದಲ್ಲಿ ಹೇಳಿದರೇ?’ ಎಂದು ಸಿದ್ದರಾಮಯ್ಯ ಟೀಕಿಸಿದರು.

‘ಮಾತನಾಡಲು ಇಷ್ಟೆಲ್ಲ ಪ್ರಮುಖ ವಿಚಾರಗಳಿದ್ದು ಕೂಡ ಪ್ರಧಾನಿ ಮೋದಿ ನಿನ್ನೆಯ ಭಾಷಣಗಳು ಕಾಂಗ್ರೆಸ್ ಮೇಲೆ ಟೀಕೆ ಹಾಗೂ ಇನ್ನಷ್ಟು ಹೊಸ ಸುಳ್ಳು ಹೇಳುವುದಕ್ಕಷ್ಟೇ ಸೀಮಿತವಾಯಿತು’ ಎಂದು ಸಿದ್ದರಾಮಯ್ಯ ಇದೇ ಸಂದರ್ಭದಲ್ಲಿ ದೂರಿದರು.

‘ಮಕ್ಕಳ ಜೊತೆಗೆ ವಿದ್ಯೆ, ಅವರ ಭವಿಷ್ಯಕ್ಕೆ ಸಂಬಂಧಿಸಿದ ಭಾಷಣ ಮಾಡಬೇಕು. ಆದರೆ ಪ್ರಧಾನಿ ಮೋದಿ ಅಲ್ಲಿ ಹೋಗಿ ರಾಜಕೀಯ ಭಾಷಣ ಮಾಡಿದ್ದು, ಮಕ್ಕಳ ಮುಂದೆ ಪಾಕಿಸ್ತಾನ, ಸಿಎಎ, ಎನ್‌ಆರ್‌ಸಿ ಬಗ್ಗೆ ಮಾತನಾಡುವುದು ಎಷ್ಟು ಸಮರ್ಪಕ. ಹೀಗಾಗಿ ಮೋದಿ ಮಾತು ಕೊಳಕು ರಾಜಕೀಯ ಭಾಷಣ ಎಂದು ಆಕ್ಷೇಪಿಸಿದ್ದೇನೆ ಎಂದು ಹೇಳಿದರು.

‘ಯಡಿಯೂರಪ್ಪ ಸಿಎಂ ಆಗಿರುವುದು ಅವರದ್ದೇ ಪಕ್ಷದಲ್ಲಿರುವ ಒಂದು ಗುಂಪಿಗೆ ಇಷ್ಟವಿಲ್ಲ ಎನ್ನುವ ಮಾಧ್ಯಮ ವರದಿಗಳು ನಿಜವಿರಬಹುದು ಎಂದು ನನಗನಿಸುತ್ತಿದೆ. ಯಡಿಯೂರಪ್ಪನವರನ್ನು ದುರ್ಬಲಗೊಳಿಸಿ, ಅಸಹಾಯಕಗೊಳಿಸಿ, ಪದಚ್ಯುತಿ ಮಾಡುವ ಯೋಜನೆಯೇನಾದರೂ ಮೋದಿ-ಶಾ ಜೋಡಿಗೆ ಇರಬಹುದೇನೋ?’

-ಸಿದ್ದರಾಮಯ್ಯ ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News