ಪತ್ನಿಗೆ ಚೂರಿ ಇರಿದು, ಪೊಲೀಸ್ ಠಾಣೆಗೆ ತೆರಳಿ ಶರಣಾದ ಪತಿ

Update: 2020-01-03 15:10 GMT

ಶಿವಮೊಗ್ಗ, ಜ.3: ಪತಿಯು ಪತ್ನಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿ, ನಂತರ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾದ ಘಟನೆ ಶುಕ್ರವಾರ ಶಿವಮೊಗ್ಗ ನಗರದಲ್ಲಿ ನಡೆದಿದೆ. 

ಮಿಳಘಟ್ಟ ಬಡಾವಣೆ ನಿವಾಸಿ ಆರ್ಮುಗಂ ಪೊಲೀಸರಿಗೆ ಶರಣಾದ ಪತಿ ಎಂದು ಗುರುತಿಸಲಾಗಿದೆ. ಪತ್ನಿ ಅಂಜಲಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ: ಆರೋಪಿ ಆರ್ಮುಗಂ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ಸಮೀಪದ ಹೋಟೆಲ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಕಳೆದ ಕೆಲ ದಿನಗಳ ಹಿಂದೆ ತಮಿಳುನಾಡಿಗೆ ತೆರಳಿದ್ದು, ಇಂದು ಮನೆಗೆ ವಾಪಾಸ್ಸಾಗಿದ್ದ. 

ಈ ವೇಳೆ ಪತ್ನಿಯ ಜೊತೆ ಗಲಾಟೆ ನಡೆಸಿ ಪತ್ನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ನಂತರ ಪೊಲೀಸ್ ಠಾಣೆಗೆ ಆಗಮಿಸಿ ಶರಣಾಗಿದ್ದಾನೆ. ನೆರೆಹೊರೆಯವರು ಅಂಜಲಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಪೊಲೀಸರ ತನಿಖೆಯ ನಂತರವಷ್ಟೆ ಸ್ಪಷ್ಟ ಕಾರಣ ತಿಳಿದುಬರಬೇಕಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News