ಅಕ್ಷಯ್‌ ಕುಮಾರ್ ಸಿನಿಮಾ ಪ್ರದರ್ಶನಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2020-01-03 16:30 GMT

ಬೆಂಗಳೂರು, ಜ.3: ಬಾಲಿವುಡ್ ನಟ ಅಕ್ಷಯ್‌ ಕುಮಾರ್ ಮತ್ತು ಕರೀನಾ ಕಪೂರ್ ನಟಿಸಿರುವ ಗುಡ್ ನ್ಯೂಸ್ ಹಿಂದಿ ಚಲನಚಿತ್ರದ ಪ್ರದರ್ಶನಕ್ಕೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸಮೀಮ್ ರಝಾ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಗುಡ್ ನ್ಯೂಸ್ ಸಿನಿಮಾ ನೋಡಿದ ತಕ್ಷಣ ದಂಪತಿಗಳು ಕೃತಕ ಗರ್ಭಧಾರಣೆ ಚಿಕಿತ್ಸೆಗಾಗಿ ಇಂದಿರಾ ಆಸ್ಪತ್ರೆಗೆ ಹೋಗುತ್ತಾರೆ ಎಂದು ಹೇಳಲು ಆಗಲ್ಲ. ಆದರೆ, ದಂಪತಿಗಳು ತಮಗಿಷ್ಟವಾದ ಆಸ್ಪತ್ರೆಗೆ ಹೋಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸಿತು.

ಪ್ರಕರಣವೇನು: ಗುಡ್ ನ್ಯೂಸ್ ಚಿತ್ರದ ಕಥಾವಸ್ತು ಕೃತಕ ಗರ್ಭಧಾರಣೆ ಚಿಕಿತ್ಸೆ ಕುರಿತಾಗಿದೆ. ಚಿತ್ರದ ಸಂಭಾಷಣೆಯೊಂದರಲ್ಲಿ ಇಂದಿರಾ ಐವಿಎಫ್ ಸಂಸ್ಥೆ ಹೊರತುಪಡಿಸಿ ಉಳಿದ ಸಂಸ್ಥೆಗಳಲ್ಲಿ ಉತ್ತಮ ಚಿಕಿತ್ಸೆ ದೊರೆಯುವುದಿಲ್ಲ ಎಂಬ ಅರ್ಥ ಬರುವ ಮಾತುಕತೆ ಇದೆ. ಇದರಿಂದ ಬೇರೆ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದ ಪೋಷಕರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅರ್ಜಿ ಸಲ್ಲಿಸಲಾಗಿತ್ತು. ಹೀಗಾಗಿ ಈ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕೆಂದು ದೂರುದಾರರು ಕೋರಿದರು.

ಅರ್ಜಿಯನ್ನು ಪರಿಶೀಲಿಸಿದ ಪೀಠ, ಐವಿಎಫ್ ಚಿಕಿತ್ಸೆ ಬಗ್ಗೆ ಎಲ್ಲರಿಗೂ ಮಾಹಿತಿ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿಯನ್ನು ವಜಾಗೊಳಿಸಿತು. ಚಿತ್ರದಲ್ಲಿ ಇಂದಿರಾ ಐವಿಎಫ್ ಕೇಂದ್ರವನ್ನು ಮಾತ್ರ ಉತ್ತೇಜಿಸುವಂತಿದೆ, ಜೊತೆಗೆ ಅದು ಈಗಾಗಲೇ ಕೃತಕ ಗರ್ಭಧಾರಣೆ ಮಾಡಿಸಿಕೊಂಡಿರುವವರಲ್ಲಿ ಸಾಕಷ್ಟು ಗೊಂದಲ ಮೂಡಿಸಲಿದೆ ಎಂದು ಅರ್ಜಿದಾರರ ವಾದವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News