ಸರ್ಕಾರಿ ಶಾಲೆ ಕಾಮಗಾರಿಯಲ್ಲಿ ಅಕ್ರಮ ಆರೋಪ: ಸಿಇಓ ವಿರುದ್ಧ ಗ್ರಾ.ಪಂ ಸದಸ್ಯ ಏಕಾಂಗಿ ಧರಣಿ

Update: 2020-01-03 17:21 GMT

ಶಿವಮೊಗ್ಗ, ಜ. 3: ಸರ್ಕಾರಿ ಶಾಲೆ ಕಾಮಗಾರಿಯಲ್ಲಿ ಅಕ್ರಮ ಎಸಗಿದವರ ವಿರುದ್ಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ವೈಶಾಲಿಯವರು ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿ ಗ್ರಾಮ ಪಂಚಾಯತ್ ಸದಸ್ಯರೋರ್ವರು ಶುಕ್ರವಾರ ನಗರದ ಡಿಸಿ ಕಚೇರಿ ಎದುರು ಬಾಯಿಗೆ ಬಟ್ಟೆ ಕಟ್ಟಿಕೊಂಡು ಧರಣಿ ನಡೆಸಿದರು. 

ಜಿಲ್ಲೆಯ ಸಾಗರ ತಾಲೂಕು ತಾಳಗುಪ್ಪದ ಗ್ರಾ.ಪಂ. ಸದಸ್ಯ ಎಸ್.ವಿ.ಓಂಕಾರ್ ಎಂಬುವರೇ ಧರಣಿ ನಡೆಸಿದ ವ್ಯಕ್ತಿಯಾಗಿದ್ದಾರೆ. ಅಕ್ರಮ ಎಸಗಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಜಿಲ್ಲಾಡಳಿತಕ್ಕೆ ಮನವಿ ಪತ್ರ ಅರ್ಪಿಸಿದ್ದಾರೆ. 

ಗೋಲ್‍ಮಾಲ್: ತಾಳಗುಪ್ಪದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡದ ಮೇಲ್ಛಾವಣಿ ದುರಸ್ತಿಗೆಂದು, ತಾಲೂಕು ಪಂಚಾಯತ್ ವತಿಯಿಂದ 1.5 ಲಕ್ಷ ರೂ. ಮಂಜೂರಾಗಿತ್ತು. ಆದರೆ ಕಿಂಚಿತ್ತೂ ದುರಸ್ತಿ ಕಾಮಗಾರಿಯೂ ನಡೆದಿಲ್ಲ ಎಂದು ಎಸ್.ವಿ.ಓಂಕಾರ್ ಆರೋಪಿಸಿದ್ದಾರೆ. 

ಆದಾಗ್ಯೂ 1.5 ಲಕ್ಷ ರೂ.ಗಳನ್ನು ಗುತ್ತಿಗೆದಾರನಿಗೆ ಬಿಡುಗಡೆ ಮಾಡಲಾಗಿದೆ. ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಈ ಕುರಿತಂತೆ ಜಿಲ್ಲಾ ಪಂಚಾಯತ್ ಸಿಇಓರವರಿಗೆ ದೂರು ನೀಡಲಾಗಿದ್ದು, ಅವರ ಸೂಚನೆಯಂತೆ ತನಿಖಾಧಿಕಾರಿಗಳು ತಪಾಸಣೆ ನಡೆಸಿ, ಅಕ್ರಮ ಎಸಗಿರುವ ಕುರಿತಂತೆ ವರದಿ ಸಲ್ಲಿಸಿದ್ದರು. 
ಆದರೆ ಇಲ್ಲಿಯವರೆಗೂ ಅಕ್ರಮ ಎಸಗಿದ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮವನ್ನು ಜಿ.ಪಂ. ಸಿಇಓ ವೈಶಾಲಿಯವರು ಕೈಗೊಂಡಿಲ್ಲ. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದ್ದಾರೆ. 

ಈ ಕೂಡಲೇ ಜಿಲ್ಲಾಡಳಿತವು ಅಕ್ರಮ ಎಸಗಿದವರ ವಿರುದ್ಧ ಕಾನೂನು ರೀತಿಯ ಸೂಕ್ತ ಕ್ರಮ ಜರುಗಿಸುವಂತೆ ಸಿಇಓಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಎಸ್.ವಿ.ಓಂಕಾರ್ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News