ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಹರಳು ಕಲ್ಲು ದಂಧೆ: ಇಬ್ಬರ ಬಂಧನ

Update: 2020-01-03 17:59 GMT

ಮಡಿಕೇರಿ, ಜ.3: ಭಾಗಮಂಡಲ ಸಮೀಪದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಸದ್ದಿಲ್ಲದೇ ಮ್ತತೆ ಅಕ್ರಮವಾಗಿ ಹರಳು ಕಲ್ಲು ಹೊರ ತೆಗೆಯುವ ದಂಧೆ ನಡೆಯುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಂಧಿಸಿದ್ದಾರೆ. 

ಪ್ರಕರಣದ ರೂವಾರಿ, ಮೇಕೇರಿಯ ಎಂ.ಕೆ. ಸಲೀಂ ಮತ್ತು ಮಡಿಕೇರಿ ತ್ಯಾಗರಾಜ ಕಾಲೋನಿ ನಿವಾಸಿ ಎಂ.ಡಿ. ಶರೀಫ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ ಒಟ್ಟು 25 ಕೆ.ಜಿ ಹರಳು ಕಲ್ಲುಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನು ಮೂವರು ಆರೋಪಿಗಳು ಶಾಮೀಲಾಗಿದ್ದು, ತಲೆ ಮರೆಸಿಕೊಂಡಿರುವ ಮಡಿಕೇರಿ ಗೌಡ ಸಮಾಜದ ಬಳಿಯ ನಿವಾಸಿ ಅನಿಲ್, ತ್ಯಾಗರಾಜ ಕಾಲೋನಿ ನಿವಾಸಿ ಮಹಮದ್ ಆಲಿ, ಬೆಟ್ಟಗೇರಿಯ ರಾಶೀದ್ ಅವರುಗಳ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ. 

ಭಾಗಮಂಡಲದ ಪಶ್ವಿಮಘಟ್ಟ ಸಾಲಿನಲ್ಲಿ ಬರುವ ಪಟ್ಟಿಘಾಟ್ ಎಂಬ ದಟ್ಟ ಅರಣ್ಯ ಪ್ರದೇಶ ಮೀಸಲು ಅರಣ್ಯ ಪ್ರದೇಶವಾಗಿದ್ದು, ಇಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಸಂಪೂರ್ಣ ನಿಷೇಧವಿದೆ. ಸುಮಾರು ಹತ್ತು ವರ್ಷಗಳ ಹಿಂದೆ ಈ ಪಟ್ಟಿಘಾಟ್ ಮೀಸಲು ಅರಣ್ಯದ ಆಯ್ದ ಭಾಗಗಳಲ್ಲಿ ಭಾರೀ ಆಳದ ಸುರಂಗಗಳನ್ನು ಕೊರೆದು ಬೆಲೆ ಬಾಳುವ ಹರಳು ಕಲ್ಲುಗಳನ್ನು ತೆಗೆಯುವ ಕೆಲಸ ಕದ್ದುಮುಚ್ಚಿ ನಡೆಯುತ್ತಿತ್ತು. ನಂತರದ ದಿನಗಳಲ್ಲಿ ಸ್ಥಗಿತಗೊಂಡಿದ್ದ ಹರಳು ಕಲ್ಲು ದಂಧೆ ಕಳೆದ 4 ತಿಂಗಳ ಹಿಂದೆ ಮತ್ತೆ ಆರಂಭವಾಯಿತು. ಪಟ್ಟಿಘಾಟ್ ಅರಣ್ಯದಲ್ಲಿ ಹರಳು ಕಲ್ಲುಗಳನ್ನು ತೆಗೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಡಿಕೇರಿ ಡಿ.ಎಫ್.ಓ ಪ್ರಭಾಕರನ್ ಅವರಿಗೆ ಖಚಿತ ಮಾಹಿತಿ ಕೆಲವು ದಿನಗಳ ಹಿಂದೆ ದೊರೆತಿತ್ತು. ಅರಣ್ಯ ಅಧಿಕಾರಿಗಳು ಆರೋಪಿಗಳ ಮನೆಗಳ ಮೇಲೆ ದಾಳಿ ನಡೆಸಿದಾಗ ಸಲೀಂ ಹಾಗೂ ಅನಿಲ್ ಸಂಗ್ರಹಿಸಿದ ಹರಳು ಕಲ್ಲಿನ ಚೀಲಗಳು ಪತ್ತೆಯಾಗಿದೆ. ಮಾತ್ರವಲ್ಲದೇ ಪಟ್ಟಿಘಾಟ್ ಮೀಸಲು ಅರಣ್ಯದಿಂದ ಸಾಗಾಟ ಮಾಡಲು ಸಿದ್ದಪಡಿಸಿ, ಅವಿತಿಟ್ಟಿದ್ದ ಹರಳು ಕಲ್ಲಿನ ಚೀಲಗಳು ಪತ್ತೆಯಾಗಿವೆ. ಈ ಅಕ್ರಮ ಹರಳು ಕಲ್ಲು ಹೊರತೆಗೆಯುವ ದಂಧೆಯಲ್ಲಿ ಇನ್ನಷ್ಟು ಮಂದಿ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆಯನ್ನು ಮುಂದುವರಿಸಲಾಗಿದೆ.

ಮಡಿಕೇರಿ ವೃತ್ತ ಮತ್ತು ಭಾಗಮಂಡಲ ಅರಣ್ಯ ವಲಯ ವಿಭಾಗದಿಂದ ಜಂಟಿ ಕಾರ್ಯಾಚರಣೆ ನಡೆಸಲಾಗಿದ್ದು, ಎಸಿಎಫ್ ಶಿಂಧೆ, ಆರ್.ಎಫ್.ಓ ಜಗದೀಶ್, ದೇವರಾಜ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಮೃತೇಶ್, ದೇವಯ್ಯ, ಸಂಪಾಜೆ ವೃತ್ತದ ರಾಘವ, ಕುಶಾಲನಗರ ವೃತ್ತದ ವಿಲಾಸ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News