ಜನಪ್ರತಿನಿಧಿಗಳ ಆಸ್ತಿಯಲ್ಲಿ ಗಣನೀಯ ಹೆಚ್ಚಳ: ಎಸಿಬಿಗೆ ದೂರು ನೀಡಲು ಹೈಕೋರ್ಟ್ ಆದೇಶ

Update: 2020-01-03 18:22 GMT

ಬೆಂಗಳೂರು, ಜ.3: ಜನಪ್ರತಿನಿಧಿಗಳ ಆಸ್ತಿಯಲ್ಲಿ ಬೆರಗು ಮೂಡಿಸುವಷ್ಟು ಹೆಚ್ಚಳವಾಗಿರುವ ಬಗ್ಗೆ ಹಾಗೂ ಅವರು ಸಲ್ಲಿಸಿರುವ ಆಸ್ತಿ ಬಗ್ಗೆ ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಅರ್ಜಿದಾರರಿಗೆ ಎಸಿಬಿಗೆ ದೂರು ನೀಡಲು ಆದೇಶಿಸಿ, ಅರ್ಜಿಯನ್ನು ವಿಲೇವಾರಿ ಮಾಡಿದೆ.

ಈ ಕುರಿತು ವಕೀಲ ಗುರುನಾಥ್ ವಡ್ಡೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಓಕಾ ಹಾಗೂ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರಿದ್ದ ವಿಭಾಗೀಯ ನ್ಯಾಯಪೀಠ, ಎಸಿಬಿಗೆ ದೂರು ನೀಡಲು ಆದೇಶಿಸಿತು. ಅರ್ಜಿದಾರರ ಪರ ವಾದಿಸಿದ ವಕೀಲರು, ಜನಪ್ರತಿನಿಧಿಗಳ ಆಸ್ತಿಯಲ್ಲಿ ಗಣನೀಯ ಹೆಚ್ಚಳವಾಗಿದೆ ಹಾಗೂ ಅವರು ಸಲ್ಲಿಸಿರುವ ಆಸ್ತಿ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ನೀಡಬೇಕೆಂದು ಕೋರಿ ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲಾಗಿದೆ. ಆದರೆ, ಇದಕ್ಕೆ ಮುಖ್ಯ ಕಾರ್ಯದರ್ಶಿಗಳು ಸ್ಪಂದಿಸಿಲ್ಲ ಎಂದು ಪೀಠಕ್ಕೆ ತಿಳಿಸಿದರು.

ಜನಸೇವೆಗಾಗಿ ಜನರಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳು ಇಂದು ಅಕ್ರಮ ಆಸ್ತಿ ಹಾಗೂ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಜೈಲಿಗೆ ಹೋಗುತ್ತಿರುವುದು, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತಿರುವುದು ನೋಡಿದರೆ ವಿಧಾನಸೌಧ ಹಣ ಸಂಪಾದಿಸುವ ಉದ್ದಿಮೆಯಾಗುತ್ತಿರುವುದು ಕಂಡು ಬರುತ್ತಿದೆ. ಹೀಗಾಗಿ, ಆಸ್ತಿ ಬಗ್ಗೆ ತನಿಖೆ ನಡೆಸಲು ಸಿಬಿಐಗೆ ನೀಡಬೇಕೆಂದು ಪೀಠಕ್ಕೆ ಮನವಿ ಮಾಡಿದರು. ನ್ಯಾಯಪೀಠವು ವಕೀಲರ ವಾದ ಆಲಿಸಿ ಅರ್ಜಿದಾರರಿಗೆ ಎಸಿಬಿಗೆ ದೂರು ನೀಡಲು ಆದೇಶಿಸಿ ಅರ್ಜಿಯನ್ನು ವಿಲೇವಾರಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News