ಶಿವಮೊಗ್ಗ: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ

Update: 2020-01-04 18:39 GMT

ಶಿವಮೊಗ್ಗ, ಜ. 4: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಪಕ್ಷವು ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಅರ್ಪಿಸಿತು. 

ಈ ಕಾಯ್ದೆಯು ಪ್ರಶ್ನಾರ್ಹವಾಗಿದೆ. ಮೇಲ್ನೋಟಕ್ಕೆ ದೌರ್ಜನ್ಯಕ್ಕೊಳಗಾದವರಿಗೆ ಅನುಕೂಲ ಮಾಡಿಕೊಡುವಂತೆ ಗೋಚರವಾಗುತ್ತದೆ. ಆದರೆ ದೌರ್ಜನ್ಯಕ್ಕೊಳಗಾದವರ ನಡುವೆ ನಂಬಿಕೆ ಮತ್ತು ಮೂಲ ದೇಶದ ಆಧಾರದಲ್ಲಿ ತಾರತಮ್ಯ ಮಾಡುತ್ತದೆ. ಪಾಕಿಸ್ತಾನ, ಅಫ್ಗಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ವಲಸೆ ಹಾಗೂ ನಿರಾಶ್ರಿತರಾಗಿ ಬಂದ ಹಿಂದೂ, ಸಿಕ್ಖ್, ಜೈನ, ಕ್ರಿಶ್ಚಿಯನ್, ಪಾರ್ಸಿ, ಬೌದ್ದರಿಗೆ ಅಕ್ರಮ ವಲಸಿಗರೆಂಬ ಕಾರಣಕ್ಕೆ ಕಾನೂನು ಕ್ರಮದಿಂದ ಮುಕ್ತಿ ನೀಡಿ ದೇಶದ ಪೌರತ್ವ ನೀಡುವುದು ಪ್ರಶ್ನಾರ್ಹವಾಗುತ್ತದೆ ಎಂದು ಮನವಿಯಲ್ಲಿ ದೂರಲಾಗಿದೆ. 

ಈ ಕಾಯ್ದೆಯು ಅನ್ಯಾಯವಾದ ತಾರತಮ್ಯ, ಸಕಾರಣವಿಲ್ಲದೆ ಸಮಾನ ಗೌರವ ಮತ್ತು ಕಳಕಳಿಗಳನ್ನು ನಿರಾಕರಿಸಿದಂತಾಗುತ್ತದೆ. ಜೊತೆಗೆ ಸಮಾನತೆ ಹಾಗೂ ಸಮಾನ ಪರಿಗಣನೆಯ ಎಲ್ಲ ತತ್ವಗಳನ್ನು ಉಲ್ಲಂಘಿಸುತ್ತದೆ. ಭಾರತದ ಸಂವಿಧಾನ ಮೂಲ ಲಕ್ಷಣವಾದ ಜಾತ್ಯತೀತತೆಯ ಹಾನಿ ಮತ್ತು ನಾಶಕ್ಕೆ ಕಾರಣವಾಗುತ್ತದೆ ಎಂದು ಮನವಿಯಲ್ಲಿ ಹೇಳಲಾಗಿದೆ. 

ಈ ಪ್ರಶ್ನಾರ್ಹ ಕಾಯ್ದೆಯು ಅಸಂವಿಧಾನಿಕ ಮಾತ್ರವಲ್ಲ, ಭಾರತ ಗಣರಾಜ್ಯದ ತಳಹದಿಯಲ್ಲಿರುವ ತತ್ವಾದರ್ಶಗಳಿಗೂ ಇದು ತದ್ವಿರುದ್ದವಾಗಿದೆ. ಈ ಎಲ್ಲ ಕಾರಣಗಳಿಂದ ತಿದ್ದುಪಡಿ ಕಾಯ್ದೆಯನ್ನು ಕೈಬಿಡಬೇಕು ಎಂದು ರಾಷ್ಟ್ರಪತಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷ ಮನವಿ ಮಾಡಿದೆ. 
ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಕಾಗೋಡು ತಿಮ್ಮಪ್ಪ, ಕಿಮ್ಮನೆ ರತ್ನಾಕರ್, ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 

'ದೇಶ ಪಗಡೆಯಾಟದವರ ಕೈಗೆ ಸಿಲುಕಿ ಹಾಳಾಗಿದೆ' 
ಭಾರತಕ್ಕೆ ಸ್ವಾತಂತ್ರ್ಯ ದೊರೆತಿರುವುದು ಪಗಡೆ ಆಟದಿಂದ ಅಲ್ಲ ಎಂಬುವುದನ್ನು ಅರಿತುಕೊಳ್ಳಬೇಕಾಗಿದೆ. ಆದರೆ ಪ್ರಸ್ತುತ ಪಗಡೆಯಾಟದವರ ಕೈಗೆ ಸಿಲುಕಿ ದೇಶ ಹಾಳಾಗಿದೆ' ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಆರೋಪಿಸಿದರು. 

ಮಾಜಿ  ಸಚಿವ ಕಿಮ್ಮನೆ ರತ್ನಾಕರ್ ಅವರು ಮಾತನಾಡಿ, 'ಈ ಕಾಯ್ದೆಯ ಮೂಲಕ ದೇಶದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣ ನಿರ್ಮಿಸಲಾಗಿದೆ. ನಾವು ಪಾರ್ಟಿ ಆಫೀಸ್‍ಗೆ ಬಂದರೆ ಪೊಲೀಸನವರು ಪ್ರಶ್ನೆ ಹಾಕುತ್ತಾರೆ. ನಮ್ಮ ದೇವಸ್ಥಾನಕ್ಕೆ ಬಂದರೆ ನಮಗೆ ಪ್ರಶ್ನೆ ಮಾಡಲು ಅಧಿಕಾರ ನೀಡಿದವರು ಯಾರು' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ಪೌರತ್ವ ವಿರೋಧಿಸಿ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ವತಿಯಿಂದ ಹೋರಾಟ ನಡೆಸುತ್ತೇನೆ. ಪೊಲೀಸರಿಗೆ ತಾಕತ್ತಿದ್ದರೆ ನನ್ನನ್ನ ಬಂಧಿಸಲಿ ಎಂದು ಸವಾಲು ಹಾಕಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News