ಸಂಸದೀಯ ಕಾರ್ಯದರ್ಶಿಗಳನ್ನು ನೇಮಿಸುವ ಅಧಿಕಾರ ಸಿಎಂಗೆ ಇಲ್ಲ: ಹೈಕೋರ್ಟ್ ಆದೇಶ
ಬೆಂಗಳೂರು, ಜ.5: ಸಂಸದೀಯ ಕಾರ್ಯದರ್ಶಿ ಹುದ್ದೆಗೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು ನೇಮಿಸುವ ಅಧಿಕಾರ ಮುಖ್ಯಮಂತ್ರಿಗೆ ಇಲ್ಲ ಎಂದು ಆದೇಶಿಸಿರುವ ಹೈಕೋರ್ಟ್, ಸಂಸದೀಯ ಕಾರ್ಯದರ್ಶಿ ಹುದ್ದೆಯನ್ನು ರದ್ದುಗೊಳಿಸಿದೆ.
ಸಂಸದೀಯ ಕಾರ್ಯದರ್ಶಿಗಳ ನೇಮಕಾತಿ ಪ್ರಶ್ನಿಸಿ ವಿಜಯನಗರದ ನಿವಾಸಿ ಎಂ.ಬಿ.ಆದಿನಾರಾಯಣ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವ ವಿಭಾಗೀಯ ನ್ಯಾಯಪೀಠ ಪ್ರಕಟಿಸಿದೆ.
ಸಂಸದೀಯ ಕಾರ್ಯದರ್ಶಿಗಳ ನೇಮಕ ಮಾಡಲು ಸಿಎಂಗೆ ಅಧಿಕಾರ ಇಲ್ಲ. ಒಟ್ಟು ಶಾಸಕರ ಪೈಕಿ ಶೇ.15ರಷ್ಟು ಶಾಸಕರನ್ನು ಮಾತ್ರ ಸಚಿವ ಸಂಪುಟದ ಸದಸ್ಯರಾಗಿ ನಿಯೋಜಿಸಲು ಅವಕಾಶ ಇದೆ. ಸಂಸದೀಯ ಕಾರ್ಯದರ್ಶಿಗಳು ಸಚಿವ ಸಂಪುಟ ಸ್ಥಾನಮಾನ ಹೊಂದಿದ್ದು, ಭತ್ಯೆ ಪಡೆಯುತ್ತಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಂಸದೀಯ ಕಾರ್ಯದರ್ಶಿಗಳ ವೇತನ ಹಾಗೂ ಭತ್ಯೆ ಕಾಯ್ದೆಯು ಕಾನೂನಿಗೆ ವ್ಯತಿರಿಕ್ತವಾಗಿದೆ ಎಂದು ನ್ಯಾಯಪೀಠ ಘೋಷಿಸಿದೆ.
ಡಾ.ಅಂಜಲಿ ನಿಂಬಾಳ್ಕರ್, ಮಹಾಂತೇಶ ಕೌಜಲಗಿ, ರೂಪಕಲಾ ಎಂ.ಶಶಿಧರ್, ರಾಘವೇಂದ್ರ ಹಿಟ್ನಾಳ್, ಡಿ.ಎಸ್.ಹೂಲಗೇರಿ, ವಿಧಾನ ಪರಿಷತ್ ಸದಸ್ಯರಾದ ಕೆ.ಅಬ್ದುಲ್ ಜಬ್ಬಾರ್, ಐವನ್ ಡಿಸೋಜ ಮತ್ತು ಕೆ.ಗೋವಿಂದರಾಜ್ ಅವರನ್ನು ಸಂಸದೀಯ ಕಾರ್ಯದರ್ಶಿಗಳನ್ನಾಗಿ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನೇಮಕ ಮಾಡಿದ್ದರು.
ಈ ಕ್ರಮವನ್ನು ಪ್ರಶ್ನಿಸಿದ್ದ ಅರ್ಜಿದಾರರು, ಸಂಸದೀಯ ಕಾರ್ಯದರ್ಶಿಗಳ ನೇಮಕಾತಿ ಸಂವಿಧಾನದ 164 (1-ಎ) ವಿಧಿಗೆ ವಿರುದ್ಧವಾಗಿದೆ. ಹೀಗಾಗಿ, ಐವನ್ ಡಿಸೋಜ ಹಾಗೂ ಇತರರನ್ನು ಸಂಸದೀಯ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.
ಬಿಎಸ್‌ವೈ ನೇಮಿಸಿದ ಸಂಸದೀಯ ಕಾರ್ಯದರ್ಶಿಗಳು: ಸಂಸದೀಯ ಕಾರ್ಯದರ್ಶಿ ನೇಮಕದ ಅಧಿಕಾರ ಮುಖ್ಯಮಂತ್ರಿಗೆ ಇಲ್ಲ ಎಂದು ಹೈಕೋರ್ಟ್ ಹೇಳಿರುವುದರಿಂದಾಗಿ ಬಿಎಸ್‌ವೈ ಮುಖ್ಯಮಂತ್ರಿಯಾದ ಬಳಿಕ ಎಸ್.ಆರ್.ವಿಶ್ವನಾಥ್, ಎಂ.ಪಿ.ರೇಣುಕಾಚಾರ್ಯ ಹಾಗೂ ಶಂಕರಗೌಡ ಪಾಟೀಲ ಅವರನ್ನು ರಾಜಕೀಯ ಕಾರ್ಯದರ್ಶಿಗಳಾಗಿ ನೇಮಿಸಿದ್ದಾರೆ.