‘ರಾಮನಗರ ಹೆಸರು ಬದಲಾವಣೆ’ಯಿಂದ ಹಿಂದೆ ಸರಿಯದಿದ್ದರೆ ಹೋರಾಟ: ಕುಮಾರಸ್ವಾಮಿ ಎಚ್ಚರಿಕೆ

Update: 2020-01-05 12:04 GMT

ಬೆಂಗಳೂರು, ಜ. 5: ‘ರಾಮನಗರ ಜಿಲ್ಲೆಯ ಹೆಸರು ಬದಲಿಸುವ ನಿರ್ಧಾರದಿಂದ ರಾಜ್ಯ ಸರಕಾರ ಕೂಡಲೇ ಹಿಂದೆ ಸರಿಯಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಎಚ್ಚರಿಸಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ರಾಮನಗರ ಜಿಲ್ಲೆಯ ಸುತ್ತ ಸಪ್ತ ಬೆಟ್ಟಗಳಿವೆ. ಏಳು ಬೆಟ್ಟಗಳ ನಡುವೆ ಇರುವುದೆ ರಾಮದೇವರ ಬೆಟ್ಟ. ಅದಕ್ಕಾಗಿಯೇ ರಾಮನಗರ ತಾಲೂಕು ಆಗಿದೆ. ರಾಮನ ಹೆಸರನ್ನೇ ಜಿಲ್ಲೆಗೂ ಇಟ್ಟಿದ್ದೇನೆ. ಇದನ್ನು ಮೀರಿ ಹೆಸರು ಬದಲಿಸಿದರೆ ಅದು ಬಿಜೆಪಿಯೇ ಪ್ರತಿಪಾದಿಸುವ ಸಿದ್ಧಾಂತಗಳಿಗೆ ಮಾಡಿದ ಅಪಚಾರ. ರಾಮನ ಹೆಸರಿಗೆ ಆಗುವ ಅಪಮಾನ’ ಎಂದು ಟೀಕಿಸಿದ್ದಾರೆ.

‘ಈ ಜಿಲ್ಲೆ ಗಂಗರು ಆಳಿದ ನಾಡು. ಬಾಲಗಂಗಾಧರನಾಥರ, ಶಿವಕುಮಾರ ಶ್ರಿಗಳ ಜನ್ಮಭೂಮಿ. ರಾಜ್ಯಕ್ಕೆ ನಾಲ್ಕು ಮುಖ್ಯಮಂತ್ರಿಗಳನ್ನು ಕೊಟ್ಟ ಶಕ್ತಿಸ್ಥಳ. ಇದೆ ಹೆಸರನ್ನು ಬೆಂಗಳೂರು ಎಂದು ಬದಲಿಸಿದರೆ ಜಿಲ್ಲೆಯ ಐತಿಹ್ಯ ಅಳಿಯಲಿದೆ’ ಎಂದು ಕುಮಾರಸ್ವಾಮಿ ಸಲಹೆ ಮಾಡಿದ್ದಾರೆ.

‘ರಾಮನಗರ ತಾಲೂಕು ಮೊದಲು ‘ಕ್ಲೋಸ್ ಪೇಟೆ’ ಎಂದು ಇತ್ತು. ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರು ರಾಮನಗರ ತಾಲೂಕು ಮಾಡಿದರು. ಅದೇ ಹೆಸರನ್ನು ನಾನು ಇಡೀ ಜಿಲ್ಲೆಗೆ ಇಟ್ಟಿದ್ದೇನೆ. ಅದನ್ನು ಬದಲಾಯಿಸುವುದು ಅವರಿಗೆ ಮಾಡುವ ಅಪಮಾನ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೂಗಳ್ಳರಿಗೆ ಅನುಕೂಲ: ‘ಬೆಂಗಳೂರಿನಿಂದ 100 ಕಿ.ಮೀ ವ್ಯಾಪ್ತಿಯಲ್ಲಿ ಜಮೀನು ಹೊಂದಬೇಕೆಂಬುದು ಇಂದಿನ ಹಣವಂತರ ಬಯಕೆ. ಇದರಲ್ಲಿ ಉತ್ತರ ಭಾರತೀಯರೇ ಹೆಚ್ಚು. ಹಾಗಾಗಿಯೇ ಸಾಕಷ್ಟು ಭೂಮಿ ಫಾರಂ ಹೌಸ್‌ಗಳಿಗೆ ಬಲಿಯಾಗಿವೆ. ಕೃಷಿಯಿಂದ ಹಿಮ್ಮುಖವಾಗಿವೆ. ರಾಮನಗರದ ಹೆಸರು ಬದಲಾವಣೆ ಇಂಥವರಿಗಾಗಿಯೇ ಹೊರತು ರೈತರಿಗೆ ಅಲ್ಲ’ ಎಂದು ಆಕ್ಷೇಪಿಸಿದ್ದಾರೆ.

ದಕ್ಷಿಣ ಕನ್ನಡಕ್ಕೂ ಇಡ್ತೀರಾ: ‘ಅಷ್ಟಕ್ಕೂ ಹೆಸರಲ್ಲಿ ಏನಿದೆ. ಬೆಂಗಳೂರು ಎಂದ ಮಾತ್ರಕ್ಕೆ ಅಭಿವೃದ್ಧಿ ಸಾಧ್ಯವೇ? ಹಾಗಿದ್ದರೆ ರಾಜ್ಯದ ಬೇರೆ ಜಿಲ್ಲೆಗಳಿಗೆ ಇದೇ ಹೆಸರಿಡಬಹುದಲ್ಲವೇ? ಅದು ನಿಮಗೆ ಸಾಧ್ಯವೇ? ರಾಮನಗರದ ಹೆಸರು ಬದಲಾಯಿಸಲು ಬರುವ ಬಿಎಸ್‌ವೈ ಅವರು ಶಿವಮೊಗ್ಗಕ್ಕೆ ಬೆಂಗಳೂರು ಎಂದು ಹೆಸರಿಡಬಲ್ಲರೇ? ದಕ್ಷಿಣ ಕನ್ನಡಕ್ಕೆ?’ ಎಂದು ವಾಗ್ದಾಳಿ ನಡೆಸಿದ್ದಾರೆ.

ಭೂಮಿ ಲೂಟಿ ಬೇಡ: ‘ಅಭಿವೃದ್ಧಿಯ ಹೆಸರಲ್ಲಿ ಇದೇ ಸಮಸ್ಯೆಗಳನ್ನು ರಾಮನಗರಕ್ಕೆ ವಿಸ್ತರಿಸುವುದು ಬೇಡ. ಇಲ್ಲಿಗೆ ಕೋಟಿ ಕುಳಗಳು ಬರದಿದ್ದರೂ ಬೇಡ. ಭೂಮಿ ಲೂಟಿಯಾಗದೇ ಇರಲಿ. ಕೆರೆಗಳು ಮುಚ್ಚದೇ ಇರಲಿ. ಸಮೃದ್ಧ ಜನಪದ ಸಂಸ್ಕೃತಿ ಅಳಿಯದಿರಲಿ. ಜನರ ಮುಗ್ಧತೆ ಬಲಿಯಾಗದೇ ಇರಲಿ’ ಎಂದು ಅವರು ಆಗ್ರಹಿಸಿದ್ದಾರೆ.

ಮಸ್ಯೆಗಳ ಕೂಪ ಆಗಬೇಕೇ?: ‘ಕೆಂಪೇಗೌಡರು ಬೆಂಗಳೂರು ಕಟ್ಟಿದಾಗ ಊರು ಇನ್ನೂ ಮುಂದೆ ಹೋಗಬಾರದು ಎಂದು ನಾಲ್ಕು ದಿಕ್ಕುಗಳಿಗೆ ಗಡಿ ಗೋಪುರ ಕಟ್ಟಿದ್ದರು. ಆದರೆ ನಾವು ಅದನ್ನೆಲ್ಲ ಎಂದೋ ದಾಟಿದೆವು. ಕೆಂಪೇಗೌಡರ ಇಚ್ಛೆ ಮೀರಿದೆವು. ಕೆರೆ ಕಾಲುವೆ ಮುಚ್ಚಿದೆವು ಪರಿಣಾಮ ಬೆಂಗಳೂರು ಇಂದು ಸಮಸ್ಯೆಗಳ ಕೂಪ’ ಎಂದು ಅವರು ಎಚ್ಚರಿಸಿದ್ದಾರೆ.

ಅಸ್ಮಿತೆಗೆ ಬೆಂಕಿ ಇಡಬೇಡಿ: ‘ಬಿಎಸ್‌ವೈ ಅವರೇ, ರಾಮನಗರದ ಅಭಿವೃದ್ಧಿ ಮಾಡುವ ಇಚ್ಛೆ ನಿಮಗಿದ್ದರೆ, ಜಿಲ್ಲೆಗೆ ನಾನು ನನ್ನ ಬಜೆಟ್‌ನಲ್ಲಿ ಮೀಸಲಿಟ್ಟ ಹಣವನ್ನು ಪ್ರಾಮಾಣಿಕವಾಗಿ ಬಿಡುಗಡೆ ಮಾಡಿ ಸಾಕು. ಅದನ್ನೂ ಮೀರಿದ ಅಭಿವೃದ್ಧಿ ಮಾಡುವ ಮನಸ್ಸಿದ್ದರೆ ನಿಮಗೆ ನನ್ನ, ನನ್ನ ಜನರ ಸಹಕಾರ ಸದಾ ಇರಲಿದೆ. ಆದರೆ ಹೆಸರು ಬದಲಿಸಿ ಜಿಲ್ಲೆ ಸಂಸ್ಕೃತಿ, ಅಸ್ಮಿತೆಗೆ ಬೆಂಕಿ ಇಡಬೇಡಿ’ ಎಂದು ಅವರು ಒತ್ತಾಯಿಸಿದ್ದಾರೆ.

‘ಪಕ್ಕದಲ್ಲೇ ಕಾವೇರಿ ನದಿ ಇದೆ, ಇಗ್ಗಲೂರಿನಲ್ಲಿ ‘ದೇವೇಗೌಡ ಬ್ಯಾರೇಜ್’ ಇದೆ. ಮಾಗಡಿಗೆ ಹೇಮೆ ಹರಿಯಲಿದ್ದಾಳೆ, ಚಿನ್ನದಂಥ ಭೂಮಿ ಇದೆ, ಮುಗ್ಧ ಜನರಿದ್ದಾರೆ. ಬೆಂಗಳೂರಿಗೆ ಪಕ್ಕದಲ್ಲೇ ಇರುವ ಈ ಸಂಪದ್ಭರಿತ ಭೂಮಿಯನ್ನು ಕಿತ್ತುಕೊಂಡು ಬಂಡವಾಳಶಾಹಿಗಳಿಗೆ ಹಂಚಲು ಹೆಸರೊಂದು ಅಡ್ಡಿ ಇದೆ. ನನ್ನ ಮೇಲಿನ ರಾಜಕೀಯ ವೈಷಮ್ಯವೂ ಇದೆ’
-ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News