×
Ad

ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ತಡೆ ಹಿಡಿಯಲು ಸೂಚನೆ: ಸಚಿವ ಸಿ.ಟಿ.ರವಿ

Update: 2020-01-05 19:15 IST

ಚಿಕ್ಕಮಗಳೂರು, ಜ.5: ಶೃಂಗೇರಿಯಲ್ಲಿ ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಿಲ್ಲ. ಸಮ್ಮೇಳನಕ್ಕೆ ಅನುದಾನ ತಡೆ ಹಿಡಿಯುವಂತೆಯೂ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸ್ಪಷ್ಟಪಡಿಸಿದ್ದಾರೆ.

ರವಿವಾರ ತಾಲೂಕಿನ ಅತ್ತಿಗುಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಯ ಬಗ್ಗೆ ಸಾಕಷ್ಟು ವಿವಾದಗಳು ಆರಂಭವಾಗಿದ್ದವು. ಈ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆಯೆ ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷರೊಂದಿಗೆ ಚರ್ಚಿಸಿದ್ದೆ. ಸಮ್ಮೇಳನಾಧ್ಯಕ್ಷರ ಆಯ್ಕೆಯ ವಿಚಾರವನ್ನು ಪುನರ್ ಪರಿಶೀಲಿಸಿ ಯಾವುದೇ ವಿವಾದವಿಲ್ಲದ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡುವಂತೆ ತಿಳಿಸಿದ್ದೆ ಎಂದರು.

ಜಿಲ್ಲೆಯಲ್ಲಿ ಸಮ್ಮೇಳನಾಧ್ಯಕ್ಷರಾಗಲು ಅರ್ಹರಿರುವ ಹಲವರು ಇದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿರುವವರೂ ಇದ್ದಾರೆ. ಎಡಪಂಥೀಯರಾಗಲಿ, ಬಲಪಂಥೀಯರಾಗಲಿ, ಮಧ್ಯದವರಾಗಲಿ, ಯಾವುದೇ ಧರ್ಮ, ಜಾತಿಗೆ ಸೇರಿದವರಾಗಿರಲಿ. ಆದರೆ ವಿವಾದಾತ್ಮಕವಲ್ಲದ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ. ಇಲ್ಲವಾದಲ್ಲಿ ನಾನು ಸಮ್ಮೇಳನಕ್ಕೆ ಬರುವುದೂ ಇಲ್ಲ, ನನ್ನಿಂದ ಯಾವುದೇ ಸಹಕಾರವೂ ದೊರೆಯುವುದಿಲ್ಲವೆಂದು ತಿಳಿಸಿದ್ದೆ. ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಂತೆಯೂ ತಿಳಿಸಿದ್ದೆ. ಆದರೂ ಅವರು ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿದ್ದಾರೆ. ಆಹ್ವಾನ ಪತ್ರಿಕೆಯನ್ನು ಕೊಡಲು ಬಂದಾಗಲೂ ಆ ವಿಚಾರವನ್ನು ತಿಳಿಸಿದ್ದೇನೆ. ಸಮ್ಮೇಳನಾಧ್ಯಕ್ಷರ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಯಾವುದೇ ಬದಲಾವಣೆ ಕೈಗೊಂಡಿಲ್ಲ. ಹಾಗಾಗಿ ತಾವು ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಿಲ್ಲವೆಂದು ತಿಳಿಸಿದರು.

ಅನುದಾನ ತಡೆಗೆ ಸೂಚನೆ: ಸಾಹಿತ್ಯ ಸಮ್ಮೇಳನಗಳನ್ನು ನಡೆಸಲು ರಾಜ್ಯ ಸರಕಾರ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್‍ಗೆ ಅನುದಾನ ಬಿಡುಗಡೆ ಮಾಡುತ್ತದೆ. ಜಿಲ್ಲೆಯಲ್ಲಿ ಆಡಳಿತಾತ್ಮಕವಾಗಿ ಗೊಂದಲಗಳಿವೆ. ಸಮ್ಮೇಳನದ ಕುರಿತು ಪರ ವಿರೋಧ ಚರ್ಚೆಗಳಾಗುತ್ತಿವೆ. ಹಾಗಾಗಿ ಸಮ್ಮೇಳನವನ್ನು ಮುಂದೂಡುವಂತೆ ತಿಳಿಸಲಾಗಿದೆ. ಅನುದಾನವನ್ನು ತಡೆ ಹಿಡಿಯುವಂತೆ ಸೂಚಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News