ಸಮ್ಮೇಳನದ ಅಧ್ಯಕ್ಷರಾಗಿ ಕಲ್ಕುಳಿ ವಿಠಲ್ ಹೆಗ್ಡೆ ಆಯ್ಕೆ ಬೆಂಬಲಿಸಿ ಸಾಹಿತಿಗಳು, ಪ್ರಗತಿಪರರಿಂದ ಪತ್ರ
ಚಿಕ್ಕಮಗಳೂರು, ಜ.5: ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಜ.10-11ರಂದು ಕಸಾಪ ಹಮ್ಮಿಕೊಂಡಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಪ್ರಗತಿಪರ ಚಿಂತಕ ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಆಯ್ಕೆ ಮಾಡಿರುವ ಸಂಬಂಧ ಸಂಘಪರಿವಾರ ಅಪಸ್ವರ ಎತ್ತಿದ್ದು, ಪಟ್ಟಣದಲ್ಲಿ ಇತ್ತೀಚೆಗೆ ಪ್ರತಿಭಟನೆಗಳನ್ನು ಮಾಡಿವೆ. ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಸಮ್ಮೇಳನಕ್ಕೆ ಸರಕಾರ ನೀಡುವ 5 ಲಕ್ಷ ರೂ. ಅನುದಾನವನ್ನೂ ಬಿಡುಗಡೆ ಮಾಡದಂತೆ ಸೂಚಿಸಿದ್ದೇನೆಂದೂ ರವಿವಾರ ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಕಲ್ಕುಳಿ ಅವರ ಆಯ್ಕೆ ಬೆಂಬಲಿಸಿ ಹಲವಾರು ಸಾಹಿತಿ, ಪ್ರಗತಿಪರರು ಬಹಿರಂಗ ಪತ್ರ ಬರೆದಿದ್ದಾರೆ.
ಚಂದ್ರಶೇಖರ್ ಪಾಟೀಲ್, ಡಾ.ಕೆ.ಮರುಳಸಿದ್ದಪ್ಪ, ಜಿ.ರಾಜಶೇಖರ್, ದಿನೇಶ್ ಅಮೀನ್ ಮಟ್ಟು, ಬಿ.ಟಿ.ಲಲಿತ ನಾಯಕ್, ಡಾ.ಕಾಳೇಗೌಡ ನಾಗರವರ, ಜಗದೀಶ್ ಕೊಪ್ಪ, ಯೋಗೇಶ್ ಮಾಸ್ಟರ್, ಪ್ರೊ.ಶ್ರೀಕಂಠಕೂಡಿಗೆ, ಸುರೇಶ್ ಭಟ್ ಬಾಕ್ರಬೈಲ್, ಬಂಜಗೆರೆ ಜಯಪ್ರಕಾಶ್, ಕಡಿದಾಳು ಶಾಮಣ್ಣ, ಡಾ.ವಿಜಯಮ್ಮ, ಪ್ರೊ.ಚಂದ್ರಶೇಖರಯ್ಯ, ಡಾ.ರಹಮತ್ ತರಿಕೆರೆ, ಪ್ರೊ.ಕೆ. ಫಣಿರಾಜ್, ಡಾ.ಉಮಾಶಂಕರ್ ಮತ್ತಿತರ ಸಾಹಿತಿಗಳು ಸಹಿ ಹಾಕಿರುವ ಪತ್ರವನ್ನು ಕೇಂದ್ರ ಕಸಾಪ ಹಾಗೂ ಸರಕಾರಕ್ಕೆ ಕಳಿಸಲಾಗಿದೆ ಎಂದು ತಿಳಿದು ಬಂದಿದೆ.
"ಮಲೆನಾಡಿನ ಖ್ಯಾತ ಪರಿಸರವಾದಿ ಮತ್ತು ಸಮಾಜಮುಖಿ ಚಿಂತಕರಾದ ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸದ ವಿಷಯವಾಗಿದೆ. ಕಳೆದ ನಾಲ್ಕು ದಶಕಗಳಿಂದ ಪಶ್ಚಿಮಘಟ್ಟ ಉಳಿಸಲು ಅಲ್ಲಿನ ಜನರ ಬದುಕನ್ನು ಹಸನಾಗಿಸಲು ಕಲ್ಕುಳಿ ವಿಠಲ್ ಹೆಗ್ಡೆ ಹೋರಾಟ ಮಾಡುತ್ತಿರುವುದನ್ನು ಹಾಗೂ ಅವರಿಗೆ ಪರಿಸರದ ಮೇಲಿರುವ ಅಪಾರ ಕಾಳಜಿಯನ್ನೂ ಗಮನಿಸಿದ್ದೇವೆ. ಅವರ ಈ ಕಳಕಳಿ ನಾಡು, ನುಡಿಗೆ ನೀಡಿದ ಕೊಡುಗೆಯಾಗಿದೆ. ಮಲೆನಾಡಿನ ಆದಿವಾಸಿಗಳು, ಅಲ್ಲಿನ ಜನರ ಬದುಕು ಮತ್ತು ಪರಿಸರದೊಳಗಿನ ಸಂಬಂಧಗಳ ಒಳನೋಟಗಳನ್ನೂ ಕೇಳಿದ್ದೇವೆ. ಅದರ ಮುಂದುವರಿದ ಭಾಗವಾಗಿ 'ಮಂಗನಬ್ಯಾಟೆ' ಎನ್ನುವ ವಿಶಿಷ್ಟ ಮತ್ತು ಅನನ್ಯ ಪುಸಕ್ತವನ್ನು ಅವರು ಹೊರತಂದಿದ್ದಾರೆ. ಈ ಪುಸಕ್ತವನ್ನು ಗುರುತಿಸಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಅವರಿಗೆ ಲಭಿಸಿದೆ. ಇಂತಹ ಹೋರಾಟಗಾರರು ಸಮಾಜಕ್ಕೆ ಅತ್ಯಗತ್ಯ. ಇಂತಹ ಹೋರಾಟಗಾರರನ್ನು, ವಿಶಿಷ್ಟ ಸಾಹಿತಯನ್ನು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡಿರುವುದನ್ನು ಸಾಹಿತ್ಯ ಪ್ರಿಯರು, ಸಾಹಿತಿಗಳು ಹಾಗೂ ನಾಡಿನ ಎಲ್ಲರೂ ಸ್ವಾಗತಿಸಬೇಕಾದ ವಿಷಯ. ಆದರೆ ಬಲಪಂಥೀಯ ಪಟ್ಟಭದ್ರ ಹಿತಾಸಕ್ತಿಗಳು, ಜಾತಿವಾದಿಗಳು ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ನಕ್ಸಲೀಯ ಬೆಂಬಲಿಗ ಎಂಬಂತೆ ಚಿತ್ರಿಸಿ ಆಕ್ಷೇಪ ಮಾಡಿರುವುದು ವಿಪರ್ಯಾಸ. ಸರಕಾರ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಇಂತಹ ಅಪಸ್ವರಗಳಿಗೆ ಕಿವಿಗೊಡಬಾರದು" ಎಂದು ಸಾಹಿತಿಗಳು ಬರೆದಿರುವ ಪತ್ರದ ಸಾರಾಂಶವಾಗಿದೆ.