ಮೋದಿ ಮತ್ತೊಮ್ಮೆ ರಾಜ್ಯಕ್ಕೆ ಬಂದರೆ ಕರ್ನಾಟಕ ಬಂದ್: ವಾಟಾಳ್ ನಾಗರಾಜ್ ಎಚ್ಚರಿಕೆ

Update: 2020-01-05 16:43 GMT

ಮೈಸೂರು,ಜ.5: ಪ್ರಧಾನಿ ನರೇಂದ್ರ ಮೋದಿ ಅವರು ನೆರೆ ಪರಿಹಾರ ಘೋಷಣೆ ಮಾಡದೆ ಮುಂದೆ ಯಾವಾಗಲಾದರು ರಾಜ್ಯಕ್ಕೆ ಬಂದರೆ ಕರ್ನಾಟಕ ಬಂದ್ ಮಾಡಲು ಕರೆ ನೀಡುತ್ತೇವೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು.

ಕನಾಟಕವನ್ನು ಪ್ರಧಾನಿ ಮೋದಿ ಅವರು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ರವಿವಾರ ನಗರದ ರೈಲ್ವೆ ನಿಲ್ದಾಣದ ಮುಂಭಾಗ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರಧಾನಿ ಮೋದಿ ವಿರುದ್ಧ ಧಿಕಾರದ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ರಾಜ್ಯದಲ್ಲಿ ಜನರು ನೆರೆಯಿಂದ ತತ್ತರಿಸಿದ್ದಾರೆ. ರಾಜ್ಯಕ್ಕೆ ಪ್ರಧಾನಿ ಬಂದರೂ ಯಾವುದೇ ಅನುದಾನ ನೀಡದೆ ತೆರಳಿದ್ದಾರೆ. ಇದು ರಾಜ್ಯದ ಮೇಲೆ ಅವರಿಗೆ ಇರುವ ತಾತ್ಸಾರ ಮನೋಭಾವ ತೋರಿಸುತ್ತದೆ. ರಾಜ್ಯದ ಮುಖ್ಯಮಂತ್ರಿಗಳು ಬಹಿರಂಗವಾಗಿ ಬೇಡಿಕೆ ಇಟ್ಟರೂ ಅದರ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಲಿಲ್ಲ, ರಾಜ್ಯದ ಸಂಸದರು ಕೋಮ ಸ್ಥಿತಿಯಲ್ಲಿದ್ದಾರೆ. ಯಾರೂ ಕೂಡ ರಾಜ್ಯದ ಪರವಾಗಿ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು.

ಬಿಜೆಪಿ ಅಂದರೆ ಯಡಿಯೂರಪ್ಪ, ಆದರೆ ಈಗ ಯಡಿಯೂರಪ್ಪ ಅವರ ಧ್ವನಿ ಕಡಿಮೆಯಾಗಿದೆ. ಮೊದಲ ಯಡಿಯೂರಪ್ಪ ಈಗ ಕಾಣಿಸುತ್ತಿಲ್ಲ, ಅವರಲ್ಲಿ ಮೊದಲಿನ ವೇಗ ಕಡಿಮೆಯಾಗಿದೆ. ಸಿದ್ದಗಂಗೆಗೆ ಬಂದಾಗಲೂ ಪ್ರಧಾನಿ ರಾಜಕೀಯ ಭಾಷಣ ಮಾಡಿದ್ದಾರೆ. ಅವರು ಕೇವಲ ಮಾತುಗಾರ ಅಷ್ಟೆ. ಶ್ರೀಗಳಿಗೆ ಭಾರತ ರತ್ನ ನೀಡುತ್ತಾರೆ ಎಂದು ಜನ ಭಾವಿಸಿದ್ದರು. ಪ್ರಧಾನ ಮಂತ್ರಿಗಳು ತುಮಕೂರಿನ ಸಿದ್ದಗಂಗಾ ಮಠಕ್ಕೆ ಬಂದು ವಿಭೂತಿ, ರುದ್ರಾಕ್ಷಿ ಹಾಕಿಕೊಂಡರು ಆದರೆ ಭಾರತ ರತ್ನದ ಬಗ್ಗೆ ಮಾತನಾಡಲಿಲ್ಲ, ಈ ಬಗ್ಗೆ ಮುಖ್ಯಮಂತ್ರಿಗಳೂ ಹಾಗೂ ಇತರೆ ಸಚಿವರು ಒತ್ತಾಯ ಮಾಡಲಿಲ್ಲ. ರಾಜ್ಯದ ವಿರುದ್ಧ ಧೋರಣೆ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿಗಳೂ ಕರ್ನಾಟಕ್ಕೆ ಏಕೆ ಬಂದರು ಎಂದು ತಿಳಿಯುತಿಲ್ಲ, ಬರುವ ಮುಂಚೆ ನಮ್ಮ ಬೇಡಿಕೆಯ ಬಗ್ಗೆ ಗಮನವಿಲ್ಲ. ಉತ್ತರ ಕರ್ನಾಟಕ ಪ್ರವಾಹದಿಂದ ಮುಳುಗಿದೆ. ಪರಿಹಾರಕ್ಕೆ ಒತ್ತಾಯ ಮಾಡಿದ್ದರೂ ಅವರು ಗಮನಹರಿಸಿಲ್ಲ, 50 ಸಾವಿರ ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದ್ದರೂ ಒಂದು ನಯಾ ಪೈಸೆ ಬಿಡುಗಡೆ ಮಾಡಲಿಲ್ಲ. ಕರ್ನಾಟಕ ಕಂಡರೆ ಪ್ರಧಾನಿಗೆ ಭಯ ಇಲ್ಲ, ಅದೆ ಪಕ್ಕದ ತಮಿಳುನಾಡು, ಕೇರಳ ಕಂಡರೆ ಹೆಚ್ಚು ಪ್ರೀತಿ. ಭಾರತ ದೇಶದಲ್ಲಿ ಕರ್ನಾಟಕವೂ ಇದೆ ಎಂದು ಭಾವಿಸಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಕನ್ನಡ ಪರ ಹೋರಾಟಗಾರ ಮೂಗೂರು ನಂಜುಂಡಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News