​ಅಣ್ವಸ್ತ್ರ ಒಪ್ಪಂದದಿಂದ ಹಿಂದೆ ಸರಿದ ಇರಾನ್

Update: 2020-01-06 04:31 GMT

ದುಬೈ, ಜ.6: ಇರಾನ್ ಮತ್ತು ಅಮೆರಿಕ ನಡುವಿನ ಸಂಘರ್ಷ ಮುಂದುವರಿದಿರುವ ನಡುವೆಯೇ ಅಂತಾರಾಷ್ಟ್ರೀಯ ಅಣ್ವಸ್ತ್ರ ಒಪ್ಪಂದದಿಂದ ಹಿಂದೆ ಸರಿಯುವ ನಿರ್ಧಾರವನ್ನು ಇರಾನ್ ಪ್ರಕಟಿಸಿದೆ.

2015ರ ಅಂತಾರಾಷ್ಟ್ರೀಯ ಅಣ್ವಸ್ತ್ರ ಒಪ್ಪಂದದ ಅನುಸಾರ ತನ್ನ ಸೆಂಟರ್‌ಫ್ಯೂಜ್ (ಗಿರಗಿಣಿ) ಸಂಖ್ಯೆಯನ್ನು ಸೀಮಿತಗೊಳಿಸುವ ಬದ್ಧತೆಯಿಂದ ಹಿಂದೆ ಸರಿಯುವುದಾಗಿ ಇರಾನ್ ಸರ್ಕಾರ ಘೋಷಿಸಿದೆ. ಈ ಮಧ್ಯೆ ಅಮೆರಿಕದಿಂದ ಹತ್ಯೆಗೀಡಾದ ಇರಾನ್ ಸೇನಾಧಿಕಾರಿ ಸುಲೈಮಾನಿಯವರ ಮೃತದೇಹವನ್ನು ಸ್ವಗೃಹಕ್ಕೆ ತಂದಾಗ ಸಾವಿರಾರು ಮಂದಿ, ಇರಾನ್‌ನ ಎರಡನೇ ದೊಡ್ಡ ನಗರವಾದ ಮಶದ್‌ನಲ್ಲಿ ಸೇರಿದ್ದರು. ಇರಾಕ್ ಸಂಸತ್ತು ನಿರ್ಣಯ ಅಂಗೀಕರಿಸಿ, ಅಮೆರಿಕ ಪಡೆಗಳು ತಕ್ಷಣ ಹಿಂದೆ ಸರಿಯುವಂತೆ ಆಗ್ರಹಿಸಿದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ದೇಶಗಳಾದ ಬ್ರಿಟನ್, ಚೀನ, ಫ್ರಾನ್ಸ್, ರಶ್ಯ ಮತ್ತು ಅಮೆರಿಕ ಜತೆ ಮಾಡಿಕೊಂಡ ಅಣ್ವಸ್ತ್ರ ಒಪ್ಪಂದ, ಎರಡು ವರ್ಷಗಳ ಹಿಂದೆ ಅಮೆರಿಕ ಇದರಿಂದ ಏಕಪಕ್ಷೀಯವಾಗಿ ಹೊರಬಂದ ಬಳಿಕ ತೂಗುಯ್ಯಾಲೆಯಾಗಿದೆ. ಯುರೋಪಿಯನ್ ಒಕ್ಕೂಟದ ದೇಶಗಳು ಒಪ್ಪಂದ ಉಳಿಸಿಕೊಳ್ಳುವ ಸಂಬಂಧ ಮಾತುಕತೆ ನಡೆಸುವಂತೆ ಇರಾನ್ ಮೇಲೆ ಒತ್ತಡ ತಂದಿದ್ದವು. ಆದರೆ ಸರ್ಕಾರದ ಸದ್ಯದ ಈ ಹೇಳಿಕೆಯಿಂದ ಒಪ್ಪಂದ ಮುರಿದು ಬೀಳುವುದು ಖಚಿತವಾದಂತಾಗಿದೆ.

"ಇರಾನ್‌ನ ಅಣು ಯೋಜನೆಗಳಿಗೆ ಕಾರ್ಯಾಚರಣೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನು ಯಾವುದೇ ಮಿತಿ ಇರುವುದಿಲ್ಲ" ಎಂದು ಇರಾನ್ ಸ್ಪಷ್ಟಪಡಿಸಿದೆ. ಇದರಿಂದಾಗಿ ಯುರೇನಿಯಂ ಪುಷ್ಟೀಕರಣ, ಪುಷ್ಟೀಕರಣದ ಮಟ್ಟ, ಪುಷ್ಟೀಕರಣ ಪ್ರಮಾಣ ಮತ್ತು ಇತರ ಸಂಶೋಧನೆ ಹಾಗೂ ಅಭಿವೃದ್ಧಿಯ ಸಾಮರ್ಥ್ಯ ವಿಸ್ತರಿಸಲಿದೆ. ಇನ್ನು ಮೇಲೆ ಇರಾನ್‌ನ ಅಣು ಯೋಜನೆ ಕೇವಲ ಯಾಂತ್ರಿಕ ಅಗತ್ಯತೆಗೆ ಅನುಸಾರವಾಗಿರುವುದಿಲ್ಲ ಎಂದು ಇರಾನ್ ಸ್ಪಷ್ಟವಾಗಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News