ಜೆಎನ್‍ಯು ಗೂಂಡಾ ದಾಳಿ ಖಂಡಿಸಿ ಮಳವಳ್ಳಿಯಲ್ಲಿ ಪ್ರತಿಭಟನೆ

Update: 2020-01-06 13:02 GMT

ಮಂಡ್ಯ, ಜ.6: ಜವಹರ್ ನೆಹರು ವಿವಿ(ಜೆಎನ್‍ಯು) ಕ್ಯಾಂಪಸ್‍ನಲ್ಲಿ ಮುಸುಕುದಾರಿಗಳು ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಾಗೂ ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‍ಎಫ್‍ಐ) ಕಾರ್ಯಕರ್ತರು ಸೋಮವಾರ ಮಳವಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು.

ಶುಲ್ಕ ಏರಿಕೆ, ಇತರ ಸೌಲಭ್ಯ ಕಡಿತದಂತಹ ವಿದ್ಯಾರ್ಥಿ ವಿರೋಧಿ ನಿಲುವುಗಳ ವಿರುದ್ಧ ಜೆಎನ್‍ಯು ವಿದ್ಯಾರ್ಥಿಗಳು ನಡೆಸುತ್ತಿದ್ದ ಶಾಂತಿಯುತ ಹೋರಾಟವನ್ನು ದಮನ ಮಾಡಲು ಎಬಿವಿಪಿ ಮತ್ತು ಬಿಜೆಪಿಯ ಗೂಂಡಗಳು ಮುಸುಕು ಹಾಕಿಕೊಂಡು ಈ ದಾಂದಲೆ ನಡೆಸಿದ್ದಾರೆ ಎಂದು ಅವರು ಆರೋಪಿಸಿದರು.

ದೆಹಲಿಯ ಕಾನೂನು ಸುವ್ಯವಸ್ಥೆಯ ಜವಾಬ್ದಾರಿ ಹೊಂದಿರುವ ಕೇಂದ್ರ ಗೃಹ ಇಲಾಖೆ ಇದಕ್ಕೆ ಉತ್ತರ ಕೊಡಬೇಕು. ಗೃಹಮಂತ್ರಿಗಳೇ ಇದರ ನೇರ ಹೊಣೆಗಾರರು. ಇಂಥಹ ಹೇಯ ಕೃತ್ಯ ನಡೆಯಲು ಸಹಕಾರ ನೀಡಿದ ಪೊಲೀಸ್ ಅಧಿಕಾರಿಗಳ ಮೇಲೂ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ದೇಶದ ಪ್ರಜಾತಂತ್ರ ವ್ಯವಸ್ಥೆ ಅಪಾಯದಲ್ಲಿದೆ. ನಾಗರಿಕರು ಎದ್ದು ನಿಂತು ಮಾತನಾಡದಿದ್ದರೆ ಫ್ಯಾಸಿಸ್ಟ್ ಶಕ್ತಿಗಳ ತಾಂಡವ ನೃತ್ಯಕ್ಕೆ ಇಡೀ ದೇಶ ಬಲಿಯಾಗುತ್ತದೆ. ಇದನ್ನು ವಿರೋಧಿಸಿ ಮಂಗಳವಾರ ದೇಶದಾದ್ಯಂತ ನಡೆಯಲಿರುವ ಪ್ರತಿಭಟನೆಯಲ್ಲಿ ನಾಗರಿಕ ಸಮಾಜ ಬಯಸುವ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಜನವಾದಿ ಸಂಘಟನೆಯ ರಾಜ್ಯಾಧ್ಯಕ್ಷೆ ದೇವಿ, ಸುಶೀಲ, ಮಂಜುಳ, ಸುನೀತ, ನಿವೇದಿತಾ ಗಿರೀಶ, ತಿಮ್ಮೇಗೌಡ, ಚಂದ್ರ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News