ತಾತ್ಕಾಲಿಕ ವಿದ್ಯುತ್ ದರ ತಗ್ಗಿಸಲು ಕೆಇಆರ್‌ಸಿ ಚಿಂತನೆ

Update: 2020-01-06 17:55 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜ.6: ರಾಜ್ಯದ ಜನರಿಗೆ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ(ಕೆಇಆರ್‌ಸಿ) ಹೊಸ ವರ್ಷದ ಕಿರುಕಾಣಿಕೆ ನೀಡಿದ್ದು, ಇಂಧನ ವೆಚ್ಚ ಹೊಂದಾಣಿಕೆ ಶುಲ್ಕವನ್ನು ಅಲ್ಪ ಪ್ರಮಾಣದಲ್ಲಿ ತಗ್ಗಿಸಲು ಮುಂದಾಗಿದೆ.

ರಾಜ್ಯದ ವಿದ್ಯುತ್ ಸರಬರಾಜು(ಎಸ್ಕಾಂ) ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕವನ್ನು ಕೆಇಆರ್‌ಸಿ ಶೇ.60 ರಷ್ಟು ಕಡಿತ ಮಾಡಿದೆ. 2020 ರ ಜನವರಿಯಿಂದ ಮಾರ್ಚ್‌ವರೆಗೆ ಈ ದರ ಅನ್ವಯವಾಗಲಿದೆ ಎಂದು ಕೆಎಆರ್‌ಸಿ ಹೇಳಿದೆ.

ಕೆಎಆರ್‌ಸಿ ಆದೇಶದನ್ವಯ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ(ಬೆಸ್ಕಾಂ) ಈ ಶುಲ್ಕ ಪ್ರತಿ ಯೂನಿಟ್‌ಗೆ 12 ಪೈಸೆಗೆ ನಿಗದಿಯಾಗಿದೆ. ಅದೇ ರೀತಿ ಚೆಸ್ಕಾಂ-9, ಹೆಸ್ಕಾಂ-5, ಮೆಸ್ಕಾಂ ಹಾಗೂ ಜೆಸ್ಕಾಂ ತಲಾ ಏಳು ಪೈಸೆ ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕವನ್ನು ಗ್ರಾಹಕರಿಂದ ಪಡೆಯಬಹುದಾಗಿದೆ.

ಜೂನ್‌ನಲ್ಲಿ ಹೆಚ್ಚಳವಾಗಿತ್ತು: ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕವನ್ನು ಕೆಇಆರ್‌ಸಿ ಜೂನ್‌ನಲಿ ಹೆಚ್ಚಳ ಮಾಡಲಾಗಿತ್ತು. ಬೆಸ್ಕಾಂ ವ್ಯಾಪ್ತಿ ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 29 ಪೈಸೆ ನಿಗದಿಯಾಗಿತ್ತು. ಏರಿಕೆ ಮಾಡಿದ್ದ ಶುಲ್ಕವನ್ನು ಮತ್ತೆ ಇಳಿಕೆ ಮಾಡಿದ್ದರಿಂದ ಬೆಸ್ಕಾಂನ ಪ್ರತಿ ಯೂನಿಟ್ ಶುಲ್ಕ 12 ಪೈಸೆಗೆ ಇಳಿದಿದೆ. ಹಾಗೆಯೇ ಎಲ್ಲ ಎಸ್ಕಾಂ ವ್ಯಾಪ್ತಿ ಗ್ರಾಹಕರಿಗೂ ತಾತ್ಕಾಲಿಕ ಇಳಿಕೆಯ ಲಾಭ ಸಿಗಲಿದೆ.

ಶುಲ್ಕ ಕಡಿತ ಹೇಗೆ?: ವಿದ್ಯುತ್ ಉತ್ಪಾದಿಸಿ ಪೂರೈಕೆ ಮಾಡುವ ನಿಗಮಗಳು ವಿಧಿಸುವ ದರ, ವಿದ್ಯುತ್ ಖರೀದಿಗೆ ಮಾಡಿದ ವೆಚ್ಚವನ್ನು ಎಸ್ಕಾಂಗಳು ತುಲನೆ ಮಾಡುತ್ತವೆ. ಅನಂತರ ಗ್ರಾಹಕರಿಗೆ ವಿಧಿಸಬೇಕಾದ ಇಂಧನ ವೆಚ್ಚದ ಹೊಂದಾಣಿಕೆ ಶುಲ್ಕದ ಪ್ರಸ್ತಾವನೆಯನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಕೆಇಆರ್‌ಸಿಗೆ ಸಲ್ಲಿಸಲಾಗುತ್ತದೆ.

ಕೆಇಆರ್‌ಇ ಸಭೆ ಸೇರಿದ ಬಳಿಕ, ಅಲ್ಲಿ ಪ್ರಸ್ತಾವನೆಯನ್ನು ವಿಸ್ತೃತವಾಗಿ ಚರ್ಚಿಸಲಾಗುತ್ತದೆ. ಅನಂತರ ಆಯೋಗರೀತ್ಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅಂತಿಮವಾಗಿ ಪ್ರತಿ ಯೂನಿಟ್‌ಗೆ ಗ್ರಾಹಕರಿಂದ ಎಸ್ಕಾಂಗಳು ಸಂಗ್ರಹಿಸಬೇಕಾದ ಶುಲ್ಕ ನಿಗದಿ ಮಾಡಲಿವೆ. ಗ್ರಾಹಕರು ಮತ್ತು ಎಸ್ಕಾಂಗಳ ಹಿತ ಗಮನಿಸಿಯೇ ಆಯೋಗ ತೀರ್ಮಾನ ಕೈಗೊಳ್ಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News