...

Update: 2020-01-06 17:57 GMT


ದಿಲ್ಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿಗೆ ರವಿವಾರ ಮುಸುಕುಧಾರಿ ಗೂಂಡಾಗಳ ಗುಂಪೊಂದು ಪ್ರವೇಶಿಸಿ ಹಿಂಸಾಚಾರ ನಡೆಸಿದೆ. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರನ್ನು ಗುರಿಯಾಗಿರಿಸಿ ಹಲ್ಲೆ ನಡೆಸಿದೆ. ಸೊತ್ತುಗಳಿಗೆ ಹಾನಿ ಉಂಟು ಮಾಡಿದೆ. ಘಟನೆಯಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟದ ಅಧ್ಯಕ್ಷೆ ಹಾಗೂ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾದ ನಾಯಕಿ ಐಶೆ ಘೋಷ್, ಅಧ್ಯಾಪಕಿ ಸುಚರಿತಾ ಸೇನ್ ಸೇರಿದಂತೆ 20 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅವರನ್ನು ಏಮ್ಸ್‌ಗೆ ದಾಖಲಿಸಲಾಗಿದೆ. ಇಷ್ಟೆಲ್ಲಾ ನಡೆದರೂ ವಿ.ವಿ. ಕ್ಯಾಂಪಸ್‌ನಲ್ಲಿದ್ದ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಜೆಎನ್‌ಯುಎಸ್‌ಯು ಉಪಾಧ್ಯಕ್ಷ ಸಾಕೇತ್ ಮೂನ್ ಆರೋಪಿಸಿದ್ದಾರೆ. ಈ ದಾಳಿಯ ಹಿಂದೆ ಎಬಿವಿಪಿಯ ಕೈವಾಡ ಇದೆ ಎಂದು ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ ಆರೋಪಿಸಿದೆ. ತಮ್ಮ ಸದಸ್ಯರಿಗೆ ಎಡಪಂಥೀಯ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದಾರೆ ಎಂದು ಎಬಿವಿಪಿ ಆರೋಪಿಸಿದೆ. ಸುಮಾರು 50ಕ್ಕೂ ಅಧಿಕ ಸಂಖ್ಯೆಯಲ್ಲಿ ಗೂಂಡಾಗಳು ಸಂಜೆ 6:30ಕ್ಕೆ ಕ್ಯಾಂಪಸ್ ಪ್ರವೇಶಿಸಿದರು. ಭೀತಿಗೊಂಡ ವಿದ್ಯಾರ್ಥಿಗಳು ನೆರವು ಕೋರಿ ಅಧ್ಯಾಪಕರಿಗೆ ಕರೆ ಮಾಡಿದರು ಎಂದು ಅಧ್ಯಾಪಕರೊಬ್ಬರು ತಿಳಿಸಿದ್ದಾರೆ. ಗುಂಪು ಕಲ್ಲು ತೂರಾಟ ನಡೆಸಿತು ಹಾಗೂ ಹಾಸ್ಟೆಲ್‌ಗೆ ಪ್ರವೇಶಿಸಿತು ಎಂದು ಅಧ್ಯಾಪಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor