×
Ad

ಜ.18ರಂದು ಮೈಸೂರು ಮನಪಾ ಮೇಯರ್, ಉಪಮೇಯರ್ ಆಯ್ಕೆ

Update: 2020-01-06 23:43 IST

ಮೈಸೂರು,ಜ.6: ಮೈಸೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಆಯ್ಕೆಗೆ ದಿನಾಂಕ ನಿಗದಿಯಾಗಿದ್ದು, ಜ.18ರಂದು ಚುನಾವಣೆ ನಡೆಯಲಿದೆ.

ಪ್ರಾದೇಶಿಕ ಆಯುಕ್ತರೂ ಆಗಿರುವ ಚುನಾವಣಾಧಿಕಾರಿ ಯಶವಂತ್ ಅವರು ದಿನಾಂಕ ಪ್ರಕಟಿಸಿ, ಸದಸ್ಯರಿಗೆ ವಿಶೇಷ ಸಭೆಯ ಸಭಾಸೂಚನಾ ಪತ್ರ ಕಳುಹಿಸಿದ್ದು, ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಚುರುಕಾಗಿದೆ. ನಗರಪಾಲಿಕೆಯ ಮೇಯರ್ ಸ್ಥಾನ ಹಿಂದುಳಿದ ವರ್ಗಕ್ಕೆ(ಮಹಿಳೆ), ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ. ಕಾಂಗ್ರೆಸ್-ಜೆಡಿಎಸ್ ಮೊದಲ ಅವಧಿಯ ಮೈತ್ರಿ ಮುಂದುವರಿಯುವುದು ಬಹುತೇಕ ಖಚಿತವಾಗಿದ್ದು, ಮೇಯರ್ ಸ್ಥಾನ ಜೆಡಿಎಸ್‍ಗೆ ಸಿಗಲಿದೆ. ಜೆಡಿಎಸ್‍ನ ರೇಷ್ಮಭಾನು, ನಮ್ರತಾ ರಮೇಶ್, ನಿರ್ಮಲಾ ಹರೀಶ್, ತಸ್ನೀಮ್ ನಡುವೆ ಮೇಯರ್ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. 

ಉಪಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಕಾಂಗ್ರೆಸ್‍ನ ಪ್ರದೀಪ್ ಚಂದ್ರ, ಸತ್ಯರಾಜ್, ಶ್ರೀಧರ್ ಲಾಭಿ ನಡೆಸುತ್ತಿದ್ದಾರೆ. ಈಗಾಗಲೇ ಆಕಾಂಕ್ಷಿಗಳು ನಾಯಕರ ಮನೆಗೆ ಎಡತಾಕುತ್ತಿದ್ದಾರೆ. ತಮ್ಮ ಬೆಂಬಲಿಗ ಮುಖಂಡರು, ಶಾಸಕರು, ರಾಜ್ಯನಾಯಕರ ಮನೆಗೆ ತೆರಳಿ ತಮ್ಮನ್ನೇ ಆಯ್ಕೆ ಮಾಡುವಂತೆ ದುಂಬಾಲು ಬಿದ್ದಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿಗಿಲ್ಲ ಭಂಗ: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವಿನ ದೋಸ್ತಿ ಮುರಿದರೂ ಸ್ಥಳೀಯವಾಗಿ ಮೈತ್ರಿಗೆ ಯಾವ ಭಂಗವಾಗಿಲ್ಲ. ಬಿಜೆಪಿಯೊಂದಿಗೆ ಸ್ನೇಹ ಕಳೆದುಕೊಂಡಿರುವ ಜೆಡಿಎಸ್ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿದೆ. ಮೈತ್ರಿಯ ಒಪ್ಪಂದದಂತೆ ಈ ಬಾರಿ ಜೆಡಿಎಸ್‍ಗೆ ಮೇಯರ್, ಕಾಂಗ್ರೆಸ್‍ಗೆ ಉಪ ಮೇಯರ್ ಸ್ಥಾನ ದೊರೆಯಲಿದೆ. ಹೀಗಾಗಿ, ಜೆಡಿಎಸ್‍ ಯಾವುದೇ ಗೊಂದಲಕ್ಕೆ ಅಸ್ಪದ ಇಲ್ಲದೆ ಮೇಯರ್ ಸ್ಥಾನ ಹಿಡಿಯುವುದಕ್ಕೆ ಮುಂದಾಗಿದೆ. ಉಳಿದಂತೆ ಕಾಂಗ್ರೆಸ್‍ಗೆ ಉಪಮೇಯರ್, ಮೂರು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಒಲಿಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News