×
Ad

ಜೆಎನ್ ಯು ದಾಳಿಯ ಹೊಣೆ ಹೊತ್ತುಕೊಂಡ ಹಿಂದೂ ರಕ್ಷಾ ದಳ

Update: 2020-01-07 13:13 IST

ಹೊಸದಿಲ್ಲಿ, ಜ.7:  ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿಗಳಿಂದ  ಜನವರಿ 5 ರಂದು ನಡೆದ ದಾಳಿಯ ಹೊಣೆಯನ್ನು ಹಿಂದೂ ರಕ್ಷಾ ದಳ ವಹಿಸಿಕೊಂಡಿದೆ.

'ರಾಷ್ಟ್ರ ವಿರೋಧಿ ಮತ್ತು ಹಿಂದೂ ವಿರೋಧಿ ಚಟುವಟಿಕೆಗಳು' ಜೆಎನ್ ಯುನಲ್ಲಿ ನಡೆಯುತ್ತಿರುವುದರಿಂದ ಇದನ್ನು ತಡೆಯಲು ನಮ್ಮ ಕಾರ್ಯಕರ್ತರು ದಾಳಿ ನಡೆಸಿರುವುದಾಗಿ ಹಿಂದೂ ರಕ್ಷಾ ದಳದ ಮುಖಂಡ ಭೂಪೇಂದ್ರ ತೋಮರ್ ಅಲಿಯಾಸ್ ಪಿಂಕಿ ಚೌಧರಿ ಟ್ವಿಟರ್ ನಲ್ಲಿ  ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾನೆ.

“ಜೆಎನ್‌ಯು ಕಮ್ಯುನಿಸ್ಟರ ಕೇಂದ್ರವಾಗಿದೆ ಮತ್ತು ನಾವು ಅಂತಹ ಹಬ್‌ ಗಳನ್ನು ಸಹಿಸುವುದಿಲ್ಲ. ಅವರು ನಮ್ಮ ಧರ್ಮ ಮತ್ತು ನಮ್ಮ ದೇಶವನ್ನು ನಿಂದಿಸುತ್ತಾರೆ. ನಮ್ಮ ಧರ್ಮ ಮತ್ತು ರಾಷ್ಟ್ರ ವಿರೋಧಿಗಳಂತೆ  ವರ್ತಿಸುತ್ತಿದ್ದಾರೆ.  ಭವಿಷ್ಯದಲ್ಲಿ ಇತರ ವಿಶ್ವವಿದ್ಯಾಲಯಗಳಲ್ಲಿಯೂ ಯಾರಾದರೂ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸಿದರೆ ನಾವು ಅದೇ ಕ್ರಮ ತೆಗೆದುಕೊಳ್ಳುತ್ತೇವೆ ”ಎಂದು ತೋಮರ್ 1 ನಿಮಿಷ ಮತ್ತು 59 ಸೆಕೆಂಡ್ ಗಳ ವೀಡಿಯೊದಲ್ಲಿ ಹೇಳಿದ್ದಾನೆ

"ಅವರು ನಮ್ಮ ದೇಶದಲ್ಲಿ ವಾಸಿಸುತ್ತಿದ್ದಾರೆ, ಅವರು ಇಲ್ಲಿ ತಿನ್ನುತ್ತಾರೆ, ಅವರ ಶಿಕ್ಷಣವನ್ನು ಇಲ್ಲಿ ಪಡೆಯುತ್ತಾರೆ ಮತ್ತು ನಂತರ ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ತೊಡಗುತ್ತಾರೆ. ಇವರ ವಿರುದ್ಧ ಜೆಎನ್‌ಯುನಲ್ಲಿ ನಡೆದ   ದಾಳಿಯಲ್ಲಿ ಭಾಗಿಯಾಗಿರುವವರೆಲ್ಲರೂ ನಮ್ಮ ಕಾರ್ಯಕರ್ತರು.  ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಲು ನಾವು ಯಾವಾಗಲೂ ಸಿದ್ಧರಿದ್ದೇವೆ” ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News