ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ತಡೆ ಹಿಡಿದಿರುವುದು ಸರಿಯಾದ ಕ್ರಮ: ಸಂಸದೆ ಶೋಭಾ

Update: 2020-01-07 12:51 GMT

ಚಿಕ್ಕಮಗಳೂರು, ಜ.7: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಯ ಕುರಿತು ಸಾಕಷ್ಟು ಗೊಂದಲ, ಅಸಮಾಧಾನ ಎದ್ದಿದೆ. ಈ ಕಾರಣಕ್ಕೆ ಸಾಹಿತ್ಯ ಸಮ್ಮೇಳನವನ್ನು ಮುಂದೂಡುವುದು ಒಳ್ಳೆಯದು ಎಂದು ಸಂಸದೆ ಶೋಭಕರಂದ್ಲಾಜೆ ಅಭಿಪ್ರಾಯಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ ಒಂದು ಸ್ವಾಯತ್ತ ಸಂಸ್ಥೆ. ಅದರ ಮೇಲೆ ಸರಕಾರಕ್ಕೆ ನಿಯಂತ್ರಣ ಇರುವುದಿಲ್ಲ. ಆದರೆ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವವರು ನಕ್ಸಲ್ ಬೆಂಬಲಿಗರು ಎಂದು ಪೊಲೀಸ್ ದಾಖಲೆಗಳಲ್ಲೇ ನಮೂದಾಗಿದೆ. ಇಂತಹ ವ್ಯಕ್ತಿಯನ್ನು ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ ಮಾಡಿರುವುದರಿಂದ ಹಲವರು ಬೇಸರಗೊಂಡಿದ್ದು, ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.

ಸಮ್ಮೇಳನಾಧ್ಯಕ್ಷರನ್ನು ಬದಲಿಸಲೇಬೇಕು. ಅವರ ಅಧ್ಯಕ್ಷತೆಯಲ್ಲಿಯೇ ಸಮ್ಮೇಳನ ನಡೆದಲ್ಲಿ ತಾವು ಸಮ್ಮೇಳನದಲ್ಲಿ ಭಾಗಿಯಾಗುವುದಿಲ್ಲ. ನಕ್ಸಲ್ ಬೆಂಬಲಿಗರು ಪಾಲ್ಗೊಳ್ಳುವ ಸಮ್ಮೇಳನದಲ್ಲಿ ತಾವು ಹೇಗೆ ಭಾಗವಹಿಸಲು ಸಾಧ್ಯ ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಅನುದಾನ ತಡೆ ಹಿಡಿದಿರುವುದು ಸರಿಯಾಗಿದೆ: ಸಮ್ಮೇಳನಕ್ಕೆ ಅನುದಾನ ತಡೆ ಹಿಡಿಯುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಸೂಚಿಸಿರುವ ಕುರಿತು ಪ್ರತಿಕ್ರಿಯಿಸಿದ ಶೋಭಾ, ಅದು ಸರಿಯಾದ ಕ್ರಮ. ನಕ್ಸಲ್ ಚಟುವಟಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕೆಂಬುದು ಸರಕಾರದ ಉದ್ದೇಶವಾಗಿದೆ. ಪರಿಸ್ಥಿತಿ ಹೀಗಿರುವಾಗ ನಕ್ಸಲ್ ಬೆಂಬಲಿಗರು ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಸರಕಾರ ಹೇಗೆ ಅನುದಾನ ಕೊಡಲು ಸಾಧ್ಯ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News