ಕೈಗಾರಿಕೆಗಳು ಬಂದ್ ಆಗಲು, ನಿರುದ್ಯೋಗಕ್ಕೆ ಕಾರ್ಮಿಕ ಸಂಘಟನೆಗಳೇ ಕಾರಣ: ಶೋಭಾ ಕರಂದ್ಲಾಜೆ ವಿವಾದಾತ್ಮಕ ಹೇಳಿಕೆ

Update: 2020-01-07 14:45 GMT

ಚಿಕ್ಕಮಗಳೂರು, ಜ.7: ಭಾರತ್ ಬಂದ್‍ ಗೆ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವುದರಲ್ಲಿ ಅರ್ಥವಿಲ್ಲ. ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲ ಕಾರ್ಮಿಕರ ವೇತನ ಹೆಚ್ಚಳ ಮಾಡಲಾಗಿದೆ. ಕನಿಷ್ಠ ವೇತನ ಕಾಯ್ದೆ ಸೇರಿದಂತೆ ಉದ್ಯೋಗ ರಕ್ಷಣೆ, ಇಎಸ್‍ಐ ಕಾನೂನನ್ನು ಜಾರಿ ಮಾಡಲಾಗಿದೆ. ದೇಶದಲ್ಲಿ ಕೈಗಾರಿಕೆಗಳು ಬಂದ್ ಆಗಲು ಕಾರ್ಮಿಕ ಸಂಘಟನೆಗಳೇ ಕಾರಣವಾಗಿದೆ. ಇಂತಹ ಬಂದ್‍ ಗಳಿಗೆ ಕರೆ ನೀಡಿರುವ ಸಂಘಟನೆಗಳು 'ತುಕಡೆ ಗ್ಯಾಂಗ್‍ ಗಳು' ಎಂದು ಸಂಸದೆ ಶೋಭಾ ಕರಂದ್ಲಾಜೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಕೈಗಾರಿಕೆಗಳು ಬಂದ್ ಆಗುತ್ತಿವೆ ಎನ್ನುವ ಮೂಲಕ ಕೈಗಾರಿಕೆಗಳು ಬಾಗಿಲು ಮುಚ್ಚುತ್ತಿರುವುದನ್ನು ಒಪ್ಪಿಕೊಂಡ ಅವರು, ಇದಕ್ಕೆ ಕಾರಣ ಕಾರ್ಮಿಕ ಸಂಘಟನೆಗಳೇ ಆಗಿವೆ ಎಂದು ನೀಡಿದರು.

ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ನಷ್ಟ ಮಾಡುವುದು, ಕಾರ್ಮಿಕರಿಗೆ, ಸಾರ್ವಜನಿಕರಿಗೆ, ಕೈಗಾರಿಕೆಗಳ ಮಾಲಕರಿಗೆ ತೊಂದರೆ ಮಾಡುವುದು ಕಾರ್ಮಿಕ ಸಂಘಟನೆಗಳ ಕಾಯಕವಾಗಿದೆ. ಈ ಸಂಘಟನೆಗಳಿಗೆ ಬೆಂಬಲ ನೀಡುವ ಸಿಪಿಐ, ಸಿಪಿಎಂ ಪಕ್ಷಗಳಿಗೆ ದೇಶದ ಯಾವ ರಾಜ್ಯಗಳಲ್ಲೂ ಅಸ್ತಿತ್ವವಿಲ್ಲ. ಕಳೆದ ಚುನಾವಣೆಯಲ್ಲಿ ಒಂದೇ ಒಂದು ಲೋಕಸಭೆ ಸ್ಥಾನವನ್ನೂ ಆ ಪಕ್ಷಗಳಿಗೆ ಗೆಲ್ಲಲು ಸಾಧ್ಯವಾಗದಿರುವುದೂ ಇದೇ ಕಾರಣಕ್ಕೆ ಎಂದ ಅವರು, ಪಶ್ಚಿಮಬಂಗಾಳದಲ್ಲಿ 25 ವರ್ಷಗಳ ಕಾಲ ಓರ್ವ ಮುಖ್ಯಮಂತ್ರಿ ಅಧಿಕಾರದಲ್ಲಿದ್ದರು. ಆದರೆ ಅಲ್ಲೂ ಕಮ್ಯೂನಿಷ್ಟರಿಗೆ ಅಸ್ತಿತ್ವವಿಲ್ಲ. ಕಮ್ಯೂನಿಷ್ಟರ ಈ ಸ್ಥಿತಿಗೆ ಅವರು ಕಾರ್ಮಿಕರಿಗೆ ಮಾಡಿದ ಅನ್ಯಾಯವೇ ಕಾರಣ. ಕಾರ್ಮಿಕರಿಗೆ ಕಮ್ಯುನಿಷ್ಟರಷ್ಟು ಅನ್ಯಾಯವನ್ನು ಬೇರೆ ಯಾರೂ ಮಾಡಿಲ್ಲ ಎಂದು ಶೋಭಾ ಹೇಳಿದರು.

ದೇಶದಲ್ಲಿರುವ ಎಲ್ಲ ಕೈಗಾರಿಕೆ, ಕಾರ್ಖಾನೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಇದಕ್ಕೆ ಮುಖ್ಯ ಕಾರಣ ಕೈಗಾರಿಕೆಗಳ ಕಾರ್ಮಿಕ ಸಂಘಟನೆಗಳು ಕಮ್ಯುನಿಷ್ಟರೊಂದಿಗೆ ಸೇರಿ ಮಾಡಿದ ಅನ್ಯಾಯ. ಈ ಅನ್ಯಾಯದಿಂದಲೇ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ಜ.8ಕ್ಕೆ ಕಾರ್ಮಿಕ ಸಂಘಟನೆಗಳು, ಕಮ್ಯೂನಿಷ್ಟರು ಬಂದ್‍ ಗೆ ಕರೆ ನೀಡಿದ್ದಾರೆ. ಈ ಮೂಲಕ ಗೊಂದಲ, ಆಸ್ತಿಪಾಸ್ತಿ ನಷ್ಟ ಹಾಗೂ ದೇಶದ ಆರ್ಥಿಕ ಪರಿಸ್ಥಿತಿಯನ್ನು ಹಾಳು ಮಾಡಲು ವ್ಯವಸ್ಥಿತ ಹುನ್ನಾರ ಮಾಡಿದ್ದಾರೆ. ಇದಕ್ಕೆ ಸಾರ್ವಜನಿಕರು ಬೆಂಬಲ ನೀಡಬಾರದು. ಮೋದಿ ನೇತೃತ್ವದಲ್ಲಿ ದೇಶ ಪ್ರಗತಿಪಥದಲ್ಲಿ ಸಾಗಲು ಎಲ್ಲರೂ ಸಹಕಾರ ನೀಡಬೇಕು ಎಂದು ಸಂಸದೆ ಶೋಭಾ ಹೇಳಿದರು.

ಕಾರ್ಮಿಕರು ಈ ಸಂಘಟನೆಗಳ ಬಂದ್‍ ಗೆ ಸಹಕಾರ ನೀಡಬಾರದು, ಕೇಂದ್ರ ಸರಕಾರ ಕಾರ್ಮಿಕರೊಂದಿಗಿದೆ. ಭವಿಷ್ಯದಲ್ಲಿ ಕಾರ್ಮಿಕರ ಕಲ್ಯಾಣಕ್ಕೆ ಕೇಂದ್ರ ಸರಕಾರ ಅಗತ್ಯ ಕಾನೂನು ರೂಪಿಸಲಿದೆ ಎಂಬ ಭರವಸೆಯನ್ನು ತಾನು ಕೊಡುವುದಾಗಿ ಇದೇ ವೇಳೆ ಅವರು ಹೇಳಿದರು.

'ಜೆಎನ್‍ಯು ವಿವಿಯಲ್ಲಿ ದೇಶದ್ರೋಹಿಗಳು ಸೇರಿಕೊಂಡಿದ್ದಾರೆ'

ಜೆಎನ್‍ ಯು ವಿವಿ ವಿದ್ಯಾರ್ಥಿಗಳ ಮೇಲೆ ಗೂಂಡಾದಾಳಿಯ ಹೊಣೆಯನ್ನು ಹಿಂದೂ ರಕ್ಷಾ ದಳ ಹೊತ್ತುಕೊಂಡಿದೆ ಎಂದು ಪತ್ರಕರ್ತರು ಹೇಳಿದಾಗ ಪ್ರತಿಕ್ರಿಯಿಸಿದ ಅವರು, ಘಟನೆಗೆ ಯಾವ ದಳದವರು ಹೊಣೆ ಹೊತ್ತುಕೊಂಡಿದೆ ಎಂದು ನನಗೆ ಗೊತ್ತಿಲ್ಲ. ಜೆಎನ್‍ ಯು ವಿವಿಯಲ್ಲಿರುವವರು ದೇಶದ್ರೋಹಿಗಳು. ಭಯೋತ್ಪಾದಕರು ಅಲ್ಲಿ ಸೇರಿಕೊಂಡಿದ್ದಾರೆ. ಅಲ್ಲಿ ದೇಶದ್ರೋಹಿ ಘೋಷಣೆಗಳನ್ನು ಕೂಗಲಾಗುತ್ತಿದೆ. ಪಾಕಿಸ್ತಾನ ಜಿಂದಾಬಾದ್ ಎನ್ನುತ್ತಿದ್ದಾರೆ. ದೇಶ ವಿರೋಧಿ ಚಟುವಟಿಕೆ ನಡೆಯುತ್ತಿದೆ. ಜೆಎನ್‍ ಯು ನಲ್ಲಿ ಅಧ್ಯಯನ ಮುಗಿಸಿದವರು ವಿನಾಕಾರಣ 5-10 ವರ್ಷಗಳ ಕಾಲ ಕಾಲಹರಣ ಮಾಡಿ ಸರಕಾರದ ಹಣ ಪೋಲು ಮಾಡುತ್ತಿದ್ದಾರೆ. ಇಂತಹ ಎಲ್ಲ ಶಕ್ತಿಗಳನ್ನು ದಿಲ್ಲಿ ಸರಕಾರ, ಕೇಂದ್ರ ವಿವಿಯಿಂದ ಹೊರ ಹಾಕಬೇಕು, ಅಲ್ಲಿರುವ ತುಕಡೆ ಗ್ಯಾಂಗ್‍ ಗಳನ್ನು ಹೊರಹಾಕಬೇಕು. ಅವಧಿ ಮೀರಿ ಇರುವವರನ್ನು ಪತ್ತೆ ಹಚ್ಚಿ ಆಚೆ ಹಾಕಿದರೆ ಜೆಎನ್‍ ಯು ಸ್ವಚ್ಛವಾಗುತ್ತದೆ. ವಿವಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದವರನ್ನು ಸರಕಾರಗಳು ಪತ್ತೆ ಮಾಡಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News