ಕಾಂಗ್ರೆಸ್ ಮುಖಂಡರಿಂದ ಸಂಸದೆ ಶೋಭಾ ಕರಂದ್ಲಾಜೆಗೆ ಹಲ್ಲೆ: ಆರೋಪ

Update: 2020-01-07 14:48 GMT

ಚಿಕ್ಕಮಗಳೂರು, ಜ.7: ಜಿಲ್ಲಾ ಪಂಚಾಯತ್ ಕಚೇರಿ ಗೇಟ್ ಎದುರು ಮಂಗಳವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮನವಿ ಸಲ್ಲಿಸಲು ಹೋದಾಗ ಸಂಸದೆ ಶೋಭಾ ಕರಂದ್ಲಾಜೆ ಅವರು ಕಾಂಗ್ರೆಸ್‍ನ ಮಹಿಳೆ ಸದಸ್ಯೆ ನಗೀನಾ ಅವರಿಗೆ ಹಲ್ಲೆ ಮಾಡಿದ್ದಾರೆಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ ಬೆನ್ನಲ್ಲೇ ಬಿಜೆಪಿ ಮುಖಂಡರು ಕಾಂಗ್ರೆಸ್ ಮುಖಂಡರೇ ಸಂಸದೆಗೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಕಾನೂನು ಕ್ರಮಕೈಗೊಳ್ಳುವಂತೆ ಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಂಗಳವಾರ ಸಂಜೆ ಬಿಜೆಪಿ ಮುಖಂಡರು ಎಸ್ಪಿ ಕಚೇರಿಗೆ ತೆರಳಿ ಜಿಲ್ಲಾ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದ ವೇಳೆ ಸಂಸದೆ ಶೋಭಾ ಅವರ ಕಾರನ್ನು ಅಡ್ಡಗಟ್ಟಿದ ಕಾಂಗ್ರೆಸ್ ಮುಖಂಡರು ಸಂಸದೆ ಶೋಭಾ ಅವರಿಗೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಪೊಲೀಸರು ಎಲ್ಲ ಘಟನೆಯನ್ನು ಸುಮ್ಮನೆ ನೋಡುತ್ತಿದ್ದು, ಯಾವುದೇ ಕ್ರಮಕೈಗೊಂಡಿಲ್ಲ. ಕರ್ತವ್ಯ ಪಾಲನೆ ಮಾಡದ ಪೊಲೀಸರ ವಿರುದ್ಧವೂ ಕಾನೂನು ಕ್ರಮಕೈಗೊಂಡು ಬಂಧಿಸಬೇಕೆಂದು ಮುಖಂಡರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿ ಮುಖಂಡರು ಎಸ್ಪಿಗೆ ನೀಡಿರುವ ದೂರಿನಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ಕಾಂಗ್ರೆಸ್ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಎಐಸಿಸಿ ಮುಖಂಡ ಬಿ.ಎಂ.ಸಂದೀಪ್, ಮುಖಂಡರಾದ ಎಚ್.ಪಿ.ಮಂಜೇಗೌಡ, ಪವನ್‍ಕುಮಾರ್ ಅವರ ಹೆಸರುಗಳನ್ನು ಉಲ್ಲೇಖಿಸಿದ್ದು, ಇವರ ತಂಡ ಸಂಸದೆಗೆ ಹಲ್ಲೆ ಮಾಡಿದ್ದು, ಇವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ.

ಸಂಸದೆ ಶೋಭಾ ಅವರು, ಜಿಪಂ ಕಚೇರಿಗೆ ಕಾರಿನಲ್ಲಿ ಬಂದವರೇ ಗೇಟ್‍ನ ಬಳಿ ಕಾರು ನಿಲ್ಲಿಸಿದ್ದಾರೆ. ಈ ವೇಳೆ ಕಾಂಗ್ರೆಸ್‍ನ ಮುಖಂಡರು ಸಂಸದರ ಕಾರಿಗೆ ಮುತ್ತಿಗೆ ಹಾಕಿದ್ದರು. ಧಿಕ್ಕಾರದ ಘೋಷಣೆಗಳನ್ನೂ ಕೂಗಿದರು. ಆಗ ಮಹಿಳಾ ಕಾಂಗ್ರೆಸ್ ಮುಖಂಡರು ಸಂಸದೆ ಮನವಿ ಪತ್ರ ಕೊಡಲು ಮುಂದಾಗಿದ್ದರು. ಈ ವೇಳೆ ನಗೀನಾ ಎಂಬವರು ಈರುಳ್ಳಿಯ ಹಾರವನ್ನು ಸಂಸದೆಯ ಕೊರಳಿಗೆ ಹಾಕಲು ಮುಂದಾದರು. ಆಗ ಸಂಸದೆ ಶೋಭಾ ಅವರು ಹಾರ ಹಾಕುವುದನ್ನು ತಡೆದು ನಗೀನಾ ಅವರತ್ತ ಕೈ ಬೀಸಿದ್ದರು. ಇದರಿಂದ ನಗೀನಾ ಅವರ ತುಟಿಗೆ ಸಣ್ಣ ಪೆಟ್ಟಾಗಿ ರಕ್ತ ಸೋರಿತ್ತು. ಬಿಜೆಪಿ ಮುಖಂಡರು ಸಂಸದೆಗೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಪಟ್ಟಿ ಮಾಡಿರುವ ಕಾಂಗ್ರೆಸ್ ಮುಖಂಡರು ಸ್ಥಳದಲ್ಲಿದ್ದು, ಮಹಿಳೆಯರ ಪ್ರತಿಭಟನೆಗೆ ಬೆಂಬಲ ನೀಡಿದ್ದರೇ ಹೊರತು ದೂರಿನ ಪ್ರತಿಯಲ್ಲಿರುವ ಯಾವ ಕಾಂಗ್ರೆಸ್ ಮುಖಂಡನೂ ಸಂಸದೆ ಶೋಭಾ ಅವರಿಗೆ ಹಲ್ಲೆ ಮಾಡಿಲ್ಲ. ತಮ್ಮ ಪಕ್ಷದ ಸದಸ್ಯೆಗೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಈ ಮುಖಂಡರು ಧಿಕ್ಕಾರದ ಘೋಷಣೆಗಳನ್ನು ಕೂಗಿದರಷ್ಟೆ. ಆದರೆ ಬಿಜೆಪಿ ಮುಖಂಡರು ಕಾಂಗ್ರೆಸ್ ಮುಖಂಡರೇ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿರುವುದು ಸತ್ಯಕ್ಕೆ ದೂರವಾಗಿದೆ. ಇನ್ನು ಸ್ಥಳದಲ್ಲಿದ್ದ ಪೊಲೀಸರು ಕರ್ತವ್ಯ ಪಾಲಿಸಿಲ್ಲ ಎಂದು ದೂರಿನಲ್ಲಿ ಹೇಳಿರುವುದೂ ಸತ್ಯಕ್ಕೆ ದೂರವಾಗಿದ್ದು, ಇಡೀ ಘಟನೆಯನ್ನು ನಿಯಂತ್ರಿಸಿದ್ದೇ ಪೊಲೀಸರು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News