"ಸಚಿವರೆ ನಿಮ್ಮ ಹೇಳಿಕೆಯಿಂದ ನೊಂದು ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದೆ"
ಮೈಸೂರು, ಜ. 7: ಸಚಿವರೆ ನಾನು ಪ್ರಾಮಾಣಿಕ, ತಪ್ಪು ಮಾಡಿಲ್ಲ. ಉಸ್ತುವಾರಿ ಸಚಿವರೇ ಸತ್ಯ ಅರಿತು ಅಧಿಕಾರಿಗಳನ್ನು ಪ್ರಶ್ನೆ ಮಾಡಿ. ನಿಮ್ಮ ಹೇಳಿಕೆಯಿಂದ ನೊಂದು ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದೆ. ನಿಮ್ಮ ಅಸಂವಿಧಾನಿಕ ಮಾತುಗಳಿಂದ ನಾನು ನನ್ನ ಕುಟುಂಬ ನೊಂದಿದ್ದೇವೆ ಎಂದು ಸಚಿವ ವಿ.ಸೋಮಣ್ಣ ಅವರ ವಿರುದ್ಧ ಮೈಸೂರು ಯುವಜನ ಮತ್ತು ಕ್ರೀಡಾ ಇಲಾಖೆ ನಿರ್ದೇಶಕ ಸುರೇಶ್ ಬಾವುಕರಾದರು.
ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜ.3 ರಂದು ನಡೆದ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ವೇದಿಕೆಯಲ್ಲೆ ನನ್ನನ್ನು ಸಚಿವರು ತರಾಟೆಗೆ ತೆಗೆದುಕೊಂಡು ಏಕವಚನದಲ್ಲಿ ಪದಪ್ರಯೋಗ ಮಾಡಿದ್ದರು. ಇದರಿಂದ ನನಗೆ ಬಹಳ ಬೇಸರವಾಗಿದೆ. ಯುವಜನ ಕ್ರೀಡಾ ಇಲಾಖೆಗೆ ಸರ್ಕಾರದಿಂದಲೇ ಅನುದಾನ ಬಿಡುಗಡೆ ಆಗಿರಲಿಲ್ಲ, ಕೆಲ ವ್ಯಕ್ತಿಗಳು ಸಚಿವರಿಗೆ ನನ್ನ ಬಗ್ಗೆ ತಪ್ಪು ಮಾಹಿತಿ ನೀಡಿದ್ದರಾರೆ. ಕ್ರೀಡಾಪಟುಗಳಿಗೆ ಬೆಂಗಳೂರು ಕೇಂದ್ರ ಕಚೇರಿಯಿಂದಲೇ ನೇರವಾಗಿ ಹಣ ಜಮೆ ಆಗಿದೆ. ಆದರೆ ವಿಚಾರ ಅರಿಯದ ಸಚಿವರು ನನ್ನ ವಿರುದ್ಧ ಏಕವಚನದಲ್ಲಿ ಬಳಸಿದ ಭಾಷೆ ನನಗೆ ನೋವುಂಟು ಮಾಡಿದೆ ಎಂದು ಹೇಳಿದರು.
ನೀವು ಆಡಿರುವ ಭಾಷೆಯಿಂದ ನೊಂದಿದಿದ್ದೇನೆ. ನನಗೆ ಜೀವನ ನಡೆಸಲು ಆಗುತ್ತಿಲ್ಲ, ನೀವು ಯಾವುದೇ ತನಿಖೆ ಮಾಡಿಸಿದರು ನಾನು ಸಿದ್ದನಿದ್ದೇನೆ ಎಂದು ಸುರೇಶ್ ಹೇಳಿದರು.