ವಿಜ್ಞಾನದ ಆವಿಷ್ಕಾರಗಳು ಮಕ್ಕಳ ಕಲಿಕೆಗೆ ಪೂರಕ: ಅಧ್ಯಾಪನ ವಿಕಸನ ಕಾರ್ಯಕ್ರಮದಲ್ಲಿ ಪ್ರಮೋದ ನಾಯಕ

Update: 2020-01-07 18:15 GMT

ದಾವಣಗೆರೆ, ಜ.7: ಆಧುನಿಕ ತಂತ್ರಜ್ಞ್ಞಾನ, ವಿಜ್ಞಾನದ ಆವಿಷ್ಕಾರಗಳು ಮಕ್ಕಳ ಕಲಿಕೆಗೆ ಪೂರಕವಾಗಿವೆ. ಅವುಗಳ ಮಹತ್ವ ಮತ್ತು ಅಗತ್ಯವನ್ನು ಗಮನಿಸಿ ಕಲಿಕೆಗೆ ಬಳಸಿದರೆ ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಸಾಧ್ಯವಾಗಲಿದೆ ಎಂದು ಮಧ್ಯ ಕರ್ನಾಟಕದ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಪ್ರಮೋದ ನಾಯಕ ಹೇಳಿದ್ದಾರೆ.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಏರ್ಪಡಿಸಿದ್ದ ಅಧ್ಯಾಪನ ವಿಕಸನ ಕಾರ್ಯಕ್ರಮ 2020 ಉದ್ಘಾಟಿಸಿ ಮಾತನಾಡಿದ ಅವರು, ಕಲಿಸುವುದಷ್ಟೇ ಅಲ್ಲ, ಮಕ್ಕಳಲ್ಲಿ ಭವಿಷ್ಯಕ್ಕೆ ಅಗತ್ಯವಿರುವ ಕೌಶಲ್ಯವನ್ನು ಕಲಿಸಿ, ವೃತ್ತಿಗೆ ಗೌರವ ತಂದುಕೊಳ್ಳುವುದೂ ಅಷ್ಟೇ ಮುಖ್ಯ. ಮಕ್ಕಳಿಗೆ ಕಲಿಸುವುದಷ್ಟೇ ಅಲ್ಲ, ಅವರಿಗೆ ಉತ್ತಮ ತಾರ್ಕಿಕ ಭವಿಷ್ಯ ರೂಪಿಸುವ ಹೊಣೆಗಾರಿಕೆಯೂ ಶಿಕ್ಷಕರ ಮೇಲಿರುತ್ತದೆ.ಮಕ್ಕಳ ಮನೋವಿಕಾಸಕ್ಕೆ ತಕ್ಕಂತೆ ಪಾಠ ಮಾಡಿ, ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿಸಬೇಕು. ವೈಯಕ್ತಿಕ ವಿಚಾರಗಳನ್ನೂ ಸೂಕ್ಷ್ಮವಾಗಿ ಅವಲೋಕಿಸಬೇಕು. ವಿದ್ಯಾರ್ಥಿಗಳಿಗೆ ಪಾಠ ಮಾಡುವ ಜೊತೆಗೆ ಅವರ ಆಸಕ್ತಿಯ ವಿಷಯವನ್ನು ಗಮನಿಸಿ ಪ್ರೋತ್ಸಾಹಿಸಿದರೆ ವಿದ್ಯಾರ್ಥಿಗಳ ವೈಯಕ್ತಿಕ ವಿಕಸನ ಸಾಧ್ಯವಾಗುತ್ತದೆ. ಆ ಮೂಲಕ ಸಮಾಜಕ್ಕೆ, ದೇಶಕ್ಕೆ ಸಂಪನ್ಮೂಲವನ್ನು ಒದಗಿಸಿದಂತಾಗುತ್ತದೆ ಎಂದು ತಿಳಿಸಿದರು.

 ಪರೀಕ್ಷಾಂಗ ಕುಲಸಚಿವೆ ಪ್ರೊ. ಎಚ್.ಎಸ್. ಅನಿತಾ ಮಾತನಾಡಿ, ಬದ್ಧತೆ, ಸಿದ್ಧತೆ, ವೃತ್ತಿ ನಿಷ್ಠೆ ಮತ್ತು ವೃತ್ತಿಪರತೆ ಪ್ರತಿಯೊಬ್ಬ ಶಿಕ್ಷಕನಿಗೆ ಅನಿವಾರ್ಯ. ಶಿಕ್ಷಕ ಕೇವಲ ಬೋಧಕನಾಗಿರದೆ ಸಂಶೋಧಕನಾಗಿ, ಅಧ್ಯಯನಶೀಲನಾಗಿ, ವಿದ್ಯಾರ್ಥಿಗಳಿಗೆ ಮಾದರಿಯ ವ್ಯಕ್ತಿಯಾಗಿ ಕೆಲಸ ಮಾಡಬೇಕು. ಆಗಲೇ ಶಿಕ್ಷಕನಿಗೆ ಗೌರವ ಲಭಿಸುವುದು. ಶಿಕ್ಷಕರೇ ತಪ್ಪು ಮಾಡಿದರೆ ವಿದ್ಯಾರ್ಥಿಗಳೂ ತಪ್ಪು ಮಾಡುವರು. ಕಲಿಸುವ ಧ್ಯೇಯ, ಉತ್ತಮ ಭವಿಷ್ಯ ರೂಪಿಸುವ ಉದ್ದೇಶ, ಕರ್ತವ್ಯ ಪ್ರಜ್ಞೆ, ಕ್ರಿಯಾಶೀಲ ಗುಣಗಳು ವೃತ್ತಿ ಬದುಕಿಗೆ ಸಹಕಾರಿ ಆಗಲಿವೆ. ಆ ಮೂಲಕ ವಿಶ್ವವಿದ್ಯಾನಿಲಯದ ಉನ್ನತಿ ಸಾಧ್ಯ ಎಂದು ಹೇಳಿದರು.

ಕುಲಸಚಿವ ಪ್ರೊ. ಬಸವರಾಜ ಬಣಕಾರ ಮಾತನಾಡಿ, ಮಕ್ಕಳ ಶೈಕ್ಷಣಿಕ ಸಂದರ್ಭದಲ್ಲಿ ಪ್ರತಿ ಹಂತದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ.ಶಿಕ್ಷಕರು ತಾವು ಕಲಿಯುತ್ತಲೇ ಮಕ್ಕಳಿಗೆ ಬೋಧನೆ ಮಾಡಬೇಕು. ಪ್ರತಿದಿನವೂ ಹೊಸತನ್ನು ಕಲಿಯುತ್ತಿದ್ದೇವೆ ಎನ್ನುವ ಭಾವನೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಡೀನ್ ಡಾ. ವೆಂಕಟೇಶ ಮತ್ತು ಪ್ರೊ. ಕೆ.ಆರ್. ರಂಗಪ್ಪ ಇನ್ನಿತರರು ಉಪಸ್ಥಿತರಿದ್ದರು. ವಾಣಿಜ್ಯ ನಿಕಾಯದ ಡೀನ್ ಪ್ರೊ. ಜೆ.ಕೆ.ರಾಜು ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರಾಜಕುಮಾರ ನಿರೂಪಿಸಿದರು.

ಕಾಲಕ್ಕೆ ತಕ್ಕಂತೆ ತಂತ್ರಜ್ಞ್ಞಾನ ಬಳಕೆಯಲ್ಲಿ ಸುಧಾರಣೆ ಕಂಡುಕೊಳ್ಳಬೇಕು. ಪ್ರಸ್ತುತ ಮಾಹಿತಿ ತಂತ್ರಜ್ಞ್ಞಾನದ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೆಚ್ಚು ಕ್ರಿಯಾ ಶೀಲರಾಗಿದ್ದಾರೆ. ಮಾಹಿತಿ ಪ್ರತಿಯೊಬ್ಬರ ಬೆರಳ ತುದಿಯಲ್ಲಿ ಇರುತ್ತದೆ. ಇದನ್ನು ಗಮನದಲ್ಲಿ ಇಟ್ಟುಕೊಂಡು ಶಿಕ್ಷಕರು ಸಿದ್ಧರಾಗಬೇಕು. ಪಾಠ ಬೋಧಿಸುವಾಗ ಪಠ್ಯದಲ್ಲಿ ಪೂರಕ ತಂತ್ರಜ್ಞಾನ, ಕೌಶಲವನ್ನು ಬಳಸಿಕೊಳ್ಳುವುದು ಅನಿವಾರ್ಯ.

ಪ್ರಮೋದ ನಾಯಕ, ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News