ವಸತಿ ಯೋಜನೆ ಅನುದಾನಕ್ಕೆ ತಡೆ: ಸರಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಈಶ್ವರ್ ಖಂಡ್ರೆ

Update: 2020-01-08 12:54 GMT

ಬೆಂಗಳೂರು, ಜ. 8: ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಘೋಷಿಸಿದ್ದ ವಸತಿ ಯೋಜನೆ ಅನುದಾನವನ್ನು ಬಿಜೆಪಿ ತಡೆ ಹಿಡಿದಿದ್ದು, ಹದಿನೈದು ದಿನದೊಳಗೆ ಹಣ ಬಿಡುಗಡೆ ಮಾಡದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಡಿಸಲು ಮುಕ್ತ ರಾಜ್ಯ ನಿರ್ಮಾಣ ನಮ್ಮ ಸರಕಾರದ ಉದ್ದೇಶವಾಗಿತ್ತು. ಕಾಂಗ್ರೆಸ್ ಅವಧಿಯಲ್ಲಿ 16 ಲಕ್ಷ ಮನೆ ನೀಡಿದ್ದು, 13 ಲಕ್ಷ ಮನೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ, ಆ ಮನೆಗಳಿಗೆ ಬಿಜೆಪಿ ಸರಕಾರ ಅನುದಾನ ಸ್ಥಗಿತಗೊಳಿಸಿದೆ ಎಂದು ದೂರಿದರು.

ವಸತಿ ರಹಿತ ಎಸ್ಸಿ-ಎಸ್ಟಿ, ಹಿಂದುಳಿದ ವರ್ಗದವರ ಮನೆ ನಿರ್ಮಾಣಕ್ಕೆ ಅನುದಾನ ಸ್ಥಗಿತಗೊಳಿಸುವ ಮೂಲಕ ಬಿಜೆಪಿ ಸರಕಾರ ಬಡವರ ವಿರೋಧಿ ಧೋರಣೆ ತಾಳಿದೆ ಎಂದು ಆರೋಪಿಸಿದ ಅವರು, ಕೂಡಲೇ ಎಲ್ಲ ಮನೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಪ್ರತಿಯೊಬ್ಬರಿಗೂ ಸೂರು ಕಲ್ಪಿಸಬೇಕಾದುದು ಸರಕಾರದ ಕರ್ತವ್ಯ. ಆದರೆ, ಮನೆ ನಿರ್ಮಾಣಕ್ಕೆ ಎಂಟು ತಿಂಗಳಿಂದ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಾಗಿ ಬಡವರು ಸಂಕಷ್ಟಕ್ಕೆ ಸಿಲುಕಿದ್ದು, ಕೂಡಲೇ ಅನುದಾನ ಬಿಡುಗಡೆ ಮಾಡಬೇಕೆಂದು ಈಶ್ವರ್ ಖಂಡ್ರೆ ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News