ಮುಸ್ಲಿಂ-ಬಿಲ್ಲವ ಸ್ನೇಹ ಸಮ್ಮಿಲನದಲ್ಲಿ ಭಾಗವಹಿಸಿದರೆ ಗುಂಡಿಕ್ಕುವ ಬೆದರಿಕೆ: ದಿನೇಶ್ ಅಮಿನ್ ಮಟ್ಟು

Update: 2020-01-08 14:06 GMT

ಬೆಂಗಳೂರು, ಜ.8: ಬಿಜೆಪಿ ಹಾಗೂ ಆರೆಸ್ಸೆಸ್ ಹಿಂದೂ-ಮುಸ್ಲಿಂ ಐಕ್ಯತೆಯನ್ನು ಒಡೆಯಬೇಕೆಂಬ ಷಡ್ಯಂತ್ರಗಳ ಭಾಗವಾಗಿ ಎನ್‌ಆರ್‌ಪಿ, ಎನ್‌ಆರ್‌ಸಿ ಹಾಗೂ ಸಿಎಎ ಕಾಯ್ದೆಗಳನ್ನು ಜಾರಿ ಮಾಡಲು ಉದ್ದೇಶಿಸಿದೆ. ಆ ಮೂಲಕ ದೇಶದಲ್ಲಿ ಆರೆಸ್ಸೆಸ್‌ನ ಮುಖಂಡರಾದ ಗುರೂಜಿ ಹಾಗೂ ಸಾವರ್ಕರ್ ಪ್ರತಿಪಾದಿಸುವ ಹಿಂದೂರಾಷ್ಟ್ರ ಸ್ಥಾಪನೆಗೆ ಷಡ್ಯಂತ್ರಗಳನ್ನು ನಿರಂತರವಾಗಿ ರೂಪಿಸುತ್ತಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಿಸಿದ್ದಾರೆ. 

ಬುಧವಾರ ದೇಶ ವಿರೋಧಿ ಪೌರತ್ವ ಕಾಯ್ದೆ ವಿರೋಧಿಸಿ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಇನ್ನು 50, 100ವರ್ಷ ಕಳೆದರೂ ದೇಶದಲ್ಲಿ ಎನ್‌ಆರ್‌ಸಿ, ಸಿಎಎಯನ್ನು ಜಾರಿ ಮಾಡಲು ಸಾಧ್ಯವಿಲ್ಲ. ಇದನ್ನು ಜಾರಿ ಮಾಡುವಷ್ಟು ಆರ್ಥಿಕ ಸಂಪತ್ತಾಗಲಿ, ಮೂಲಭೂತ ಸೌಲಭ್ಯಗಳಿಲ್ಲ. ಆದರೆ, ಈ ಹೆಸರಿನಲ್ಲಿ ಬಿಜೆಪಿ ತನ್ನ ಮುಂದಿನ 50 ವರ್ಷಗಳ ಆಡಳಿತಕ್ಕೆ ಬೇಕಾಗುವಷ್ಟು ಓಟ್ ಬ್ಯಾಂಕನ್ನು ಸಂಪಾದಿಸಲು ಹೊರಟಿದೆ ಎಂದು ವಿಶ್ಲೇಷಿಸಿದರು.

ಬಿಜೆಪಿ ಸಿಎಎ, ಎನ್‌ಆರ್‌ಸಿ ಕಾಯ್ದೆಗಳು ಏಕಾಏಕಿ ರೂಪಿಸಿದಲ್ಲ. ಆರೆಸ್ಸೆಸ್ ಸ್ಥಾಪನೆಯಾದ 1925ರಿಂದಲೇ ಇವೆಲ್ಲಾ ಕಾರ್ಯತಂತ್ರಗಳು ರೂಪಿತಗೊಂಡಿವೆ. ಹಂತ, ಹಂತವಾಗಿ ಕಾರ್ಯರೂಪಕ್ಕೆ ಬರುತ್ತಿವೆಯಷ್ಟೆ. 1984ರಲ್ಲಿ ಲೋಕಸಭೆಯಲ್ಲಿ ಕೇವಲ ಎರಡು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ, ರಾಮ ಜನ್ಮಭೂಮಿ ಅಭಿಯಾನಕ್ಕೆ ಚಾಲನೆ ನೀಡುತ್ತಾ ಇಲ್ಲಿಯವರೆಗೂ ತನ್ನ ಗುಪ್ತ ಅಜೆಂಡಾಗಳ ಮೂಲಕ ದೇಶವನ್ನು ಒಡೆದು ಆಳುವ ನೀತಿ ಅನುಸರಿಸಿಕೊಂಡು ಬಂದು ಇವತ್ತು ಕೇಂದ್ರದಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರ ನಡೆಸುತ್ತಿದೆ ಎಂದು ಅವರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ್ದು ಗುಪ್ತ ಆಜೆಂಡಾದ ಭಾಗವಾಗಿದೆ. ಲಿಂಗಾಯತ ಮಠಗಳ ನೇತೃತ್ವದಲ್ಲಿ ಸಿಎಎ, ಎನ್‌ಆರ್‌ಸಿ ಕಾಯ್ದೆಗಳ ಪರವಾಗಿ ಪ್ರಚಾರ ನಡೆಸುವಂತೆ ಮನವೊಲಿಸುವ ಸಭೆಯನ್ನು ನಡೆಸಲಾಗಿದೆ ಎಂದು ಅವರು ಹೇಳಿದರು.

ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಬಿಜೆಪಿ ಬಹುಮತ ಸಿಕ್ಕಿದ ಮಾತ್ರಕ್ಕೆ ಸಂವಿಧಾನ ಮೂಲ ಆಶಯಗಳನ್ನೇ ತಿರುಚುವಂತಹ, ಪ್ರಜಾಪ್ರಭುತ್ವ ವೌಲ್ಯಗಳನ್ನೇ ನಾಶ ಮಾಡುವಂತಹ ಸಿಎಎ, ಎನ್‌ಆರ್‌ಸಿ ಕಾಯ್ದೆಗಳನ್ನು ರೂಪಿಸಲು ಹೊರಟಿದೆ. ಇದನ್ನು ವಿರೋಧಿಸಿ ನಡೆಯುತ್ತಿರುವ ವಿದ್ಯಾರ್ಥಿ ಚಳವಳಿಯಲ್ಲಿ ನಾವೆಲ್ಲರೂ ಭಾಗಿಗಳಾಗಬೇಕಾಗಿದೆ ಎಂದು ತಿಳಿಸಿದರು.

ನನಗೆ ಗುಂಡೇಟಿನ ಬೆದರಿಕೆ

ಹಿಂದೂ-ಮುಸ್ಲಿಂ ಐಕ್ಯತೆಯನ್ನು ಒಡೆಯುವುದರಲ್ಲಿಯೇ ಬಿಜೆಪಿಗೆ ಅಧಿಕಾರವಿದೆ ಎಂದು ಚೆನ್ನಾಗಿ ಮನವರಿಕೆಯಾಗಿದೆ. ಈಗ ಜ.11ರಂದು ಉಡುಪಿಯಲ್ಲಿ ಮುಸ್ಲಿಂ-ಬಿಲ್ಲವ ಸ್ನೇಹ ಸಮ್ಮಿಲನ ಕಾರ್ಯಕ್ರಮಕ್ಕೆ ನಡೆಸುವುದಕ್ಕೆ ಆರೆಸ್ಸೆಸ್ ಅಡ್ಡಿ ಪಡಿಸುತ್ತಿದೆ. ಈ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ನನ್ನನ್ನು ಮುಖ್ಯ ಅತಿಥಿಗಳಾಗಿ ಕರೆದಿದ್ದಾರೆ. ಇದರಲ್ಲಿ ನಾನು ಭಾಗವಹಿಸದಂತೆ ಬೆದರಿಕೆ ಕರೆಗಳು ಬರುತ್ತಿವೆ. ಇತ್ತೀಚಿಗೆ ದೂರದ ಪುಣೆಯಿಂದ ಒಬ್ಬ ದೂರವಾಣಿ ಕರೆಮಾಡಿ, ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ನಿನಗೆ ಆರು ಮಾತ್ರೆ(ಗುಂಡು) ಹಾಕಬೇಕಾಗುತ್ತದೆ ಎಂದು ಬೆದರಿಸಿದ್ದಾನೆ.

-ದಿನೇಶ್ ಅಮಿನ್ ಮಟ್ಟು, ಹಿರಿಯ ಪತ್ರಕರ್ತ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News