×
Ad

ಜೆ‌ಎನ್‌ಯು ವಿದ್ಯಾರ್ಥಿಯ ಗಾಯ ನಕಲಿ ಎಂದು ನಗೆಪಾಟಲಿಗೀಡಾದ ಸಂಸದ ಪ್ರತಾಪ್ ಸಿಂಹ

Update: 2020-01-08 20:39 IST

ಬೆಂಗಳೂರು: ಜವಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರದಲ್ಲಿ ಜೆ‌ಎನ್‌ಯು ವಿದ್ಯಾರ್ಥಿಗೆ ಆದ ಹಲ್ಲೆಯ ಬಗ್ಗೆ ಸಂಸದ ಪ್ರತಾಪ್ ಸಿಂಹ ಫೇಸ್ ಬುಕ್ ನಲ್ಲಿ 'ಫೇಕ್ ನ್ಯೂಸ್' ಒಂದನ್ನು ಹರಿಬಿಟ್ಟು ನಗೆಪಾಟಲೀಗೀಡಾಗಿದ್ದಾರೆ.

ಕಾಮ್ರೇಡ್ ಸೂರಿ ಕೃಷ್ಣನ್ ಗಾಯವಾದಂತೆ ನಟಿಸಿ ಆಸ್ಕರ್ ಲೆವೆಲ್ಲಿಗೆ ಆಕ್ಟಿಂಗ್ ಮಾಡುತ್ತಿದ್ದಾರೆಂದು ಸಂಸದ ಪ್ರತಾಪ್ ಸಿಂಹ ಫೋಟೋ ಒಂದನ್ನು ಪೋಸ್ಟ್ ಹಾಕಿದ್ದು, 'ಎಬಿವಿಪಿಯವರು ಹೊಡೆದಿದ್ದಾರೆಂದು ಮೈತುಂಬಾ ಬ್ಯಾಂಡೇಜ್ ಕಟ್ಟಿಕೊಂಡವನ ಗಾಯಗಳು ಒಂದೇ ದಿನದಲ್ಲಿ ಮಾಯ' ಎಂದು ಕ್ಯಾಪ್ಶನ್ ನೀಡಿದ್ದಾರೆ. ಸಂಸದ ಪ್ರತಾಪ್ ಸಿಂಹ ಮಾತ್ರವಲ್ಲದೇ ಇನ್ನೂ ಹಲವರು ಈ ರೀತಿಯ ಪೋಸ್ಟ್ ಹಾಕಿದ್ದಾರೆ.

ಪ್ರತಾಪ್ ಸಿಂಹ ಹಾಕಿದ ಪೋಸ್ಟ್ ನಲ್ಲಿ ಜೆ‌ಎನ್‌ಯು ವಿದ್ಯಾರ್ಥಿ ಸೂರಿ ಕೃಷ್ಣನ್ ಎಂಬಾತನ ಕೊಲಾಜ್ ಮಾಡಿದ ಚಿತ್ರವಿದ್ದು, ಮೊದಲೆರಡು ಚಿತ್ರದಲ್ಲಿ ಕೈ ಹಾಗೂ ತಲೆಗೆಗೆ ಬ್ಯಾಂಡೇಜ್ ಹಾಕಿದ ದೃಶ್ಯವಿದೆ. ಜೊತೆಗೆ ಜ.5 JNU ಎಂದು ಬರೆದಿದೆ. ಆದರೆ ಅದರ ಕೆಳಗೆ ಸೂರಿ ಕೃಷ್ಣನ್ ಗೆ ಹೂಹಾರ ಹಾಕಿ, ಜೈಕಾರ ಕೂಗಿ ಸ್ವಾಗತಿಸುವ ವಿಡಿಯೋ ದೃಶ್ಯ ಇದ್ದು, ಜ.6 ಕೇರಳ ಎಂದು ಬರೆಯಲಾಗಿದೆ.

ಆದರೆ, altnews.in ನೊಂದಿಗೆ ಹಂಚಿಕೊಂಡ ವೀಡಿಯೊ ಹೇಳಿಕೆಯಲ್ಲಿ ಸೂರಿ ಕೃಷ್ಣನ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ತನಗಾದ ಗಾಯಗಳನ್ನು ತೋರಿಸುತ್ತಾ, ಗಾಯಗಳು ನಿಜವಾದದ್ದಲ್ಲ ಎಂಬ ಸುಳ್ಳು ಹೇಳಿಕೆಯನ್ನು ನಿರಾಕರಿಸುತ್ತಾನೆ. 'ಜೆಎನ್‌ಯುನ ಪೆರಿಯಾರ್ ಹಾಸ್ಟೆಲ್ ಎದುರು ಎಂಟು ಎಬಿವಿಪಿ ಗೂಂಡಾಗಳು ನನ್ನ ಮೇಲೆ ಹಲ್ಲೆ ನಡೆಸಿದರು. ಅವರು ನನ್ನನ್ನು ಕಬ್ಬಿಣದ ಸರಳುಗಳಿಂದ ಹೊಡೆದರು' ಎಂದು ತಲೆಗೆ ಹೊಲಿಗೆ ಹಾಕಿದ್ದನ್ನೂ ಸೂರಿ ಕೃಷ್ಣನ್ ತೋರಿಸುತ್ತಾನೆ. ಹೊಲಿಗೆ ಹಾಕಿದ್ದರಿಂದ ನನ್ನ ತಲೆಯನ್ನು ಮುಚ್ಚುವ ಅಗತ್ಯವಿಲ್ಲ ಎಂದು ವೈದ್ಯರು ಹೇಳಿದ್ದರಿಂದ ಬ್ಯಾಂಡೇಜ್ ತೆಗೆದಿದ್ದೇನೆ ಎಂದು ಸ್ಪಷ್ಟಪಡಿಸುತ್ತಾನೆ. ಜೊತೆಗೆ ತಾನು ಚಿಕಿತ್ಸೆ ಪಡೆದ ಆಸ್ಪತ್ರೆಯ ದಾಖಲೆಗಳನ್ನು ಪ್ರದರ್ಶಿಸುತ್ತಾನೆ.

ಆದರೆ, ಸದಾ ತನ್ನ ವಿವಾದಾತ್ಮಕ ಹೇಳಿಕೆಗಳ ಮೂಲಕ ಟೀಕೆಗೆ ಗುರಿಯಾಗುವ ಸಂಸದ ಪ್ರತಾಪ್ ಸಿಂಹ, ಈ ಬಾರಿ ಜೆ‌ಎನ್‌ಯು ವಿದ್ಯಾರ್ಥಿಯ ಬಗ್ಗೆ 'ನಕಲಿ ಸುದ್ಧಿ' ಒಂದನ್ನು ಹರಿಬಿಟ್ಟು ಸುದ್ದಿಯಾಗಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News