×
Ad

ಚಿಕ್ಕಮಗಳೂರು: ಸಾಹಿತ್ಯ ಸಮ್ಮೇಳನಕ್ಕೆ ಶುಭಕೋರಿ ಹಾಕಿದ್ದ ಬ್ಯಾನರ್ ಗಳನ್ನು ತೆರವುಗೊಳಿಸಿದ ಪ.ಪಂಚಾಯತ್

Update: 2020-01-08 21:07 IST

ಚಿಕ್ಕಮಗಳೂರು, ಜ.8: ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಜ.10-11ರಂದು ಕಸಾಪ ಕಲ್ಕುಳಿ ವಿಠಲ್ ಹೆಗ್ಡೆ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡಿರುವ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಶುಭಾಶಯ ಕೋರಿ ಪಟ್ಟಣದ ವಿವಿಧೆಡೆ ಕಟ್ಟಲಾಗಿದ್ದ ಬ್ಯಾನರ್ ಗಳನ್ನು ತೆರವು ಮಾಡಿರುವ ಘಟನೆ ವರದಿಯಾಗಿದೆ.

ಶೃಂಗೇರಿ ಪಟ್ಟಣದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಶುಭಾಶಯ ಕೋರಿ ಹಲವಾರು ಸಂಘ-ಸಂಸ್ಥೆಗಳು ಬ್ಯಾನರ್ ಗಳನ್ನು ಕಟ್ಟಿದ್ದು, ಈ ಬ್ಯಾನರ್ ಗಳನ್ನು ಪಟ್ಟಣ ಪಂಚಾಯತ್ ಆಡಳಿತ ಬುಧವಾರ ಸಂಜೆ ತೆರವು ಮಾಡಿದೆ ಎಂದು ತಿಳಿದು ಬಂದಿದೆ. ಪಟ್ಟಣ ಪಂಚಾಯತ್‍ನಲ್ಲಿ ಬಿಜೆಪಿ ಪಕ್ಷದ ಸದಸ್ಯರು ಆಡಳಿತದಲ್ಲಿದ್ದು, ಜಿಲ್ಲಾ ಉಸ್ತುವಾರ ಸಚಿವ ಸಿ.ಟಿ.ರವಿ ಸೂಚನೆ ಮೇರೆಗೆ ಬ್ಯಾನರ್ ಗಳನ್ನು ತೆರವು ಮಾಡಲಾಗಿದೆ ಎಂದು ಪಟ್ಟಣದ ನಾಗರಿಕರು ಆರೋಪಿಸಿದ್ದಾರೆ.

ಮತ್ತೊಂದೆಡೆ ಬುಧವಾರ ಕೆಲ ವ್ಯಕ್ತಿಗಳು ಸಮ್ಮೇಳನಕ್ಕೆ ಹೋಗದಿರುವಂತೆ ಕರೆ ಪತ್ರಗಳನ್ನು ಹಂಚಿದ್ದಾರೆಂದು ತಿಳಿದು ಬಂದಿದ್ದು, ಈ ವೇಳೆ ಅವರು ಸಾರ್ವಜನಿಕರಿಗೆ ಬಂದ್‍ಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಬಿಜೆಪಿ ಮತ್ತು ಸಂಘಪರಿವಾರದ ಸಂಘಟನೆಗಳು ವಿಠಲ್ ಹೆಗ್ಡೆ ಸಮ್ಮೇಳನಾಧ್ಯಕ್ಷರಾಗಿರುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಚಿವ ಸಿ.ಟಿ.ರವಿ ಸಮ್ಮೇಳನಕ್ಕೆ ಆರಂಭದಿಂದಲೂ ಅಡ್ಡಗಾಲು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಮ್ಮೇಳನ ನಡೆದಲ್ಲಿ ಪಟ್ಟಣ ಬಂದ್‍ಗೆ ಕರೆ ನೀಡುವುದಾಗಿ ನಕ್ಸಲ್ ವಿರೋಧಿ ಹೋರಾಟ ಸಮಿತಿ ಬುಧವಾರ ಬೆದರಿಕೆಯನ್ನೂ ಹಾಕಿದೆ ಎಂದು ತಿಳಿದು ಬಂದಿದೆ. 

ಸಮ್ಮೇಳನಕ್ಕೆ ಅನುಮತಿ ನೀಡದ ಪೊಲೀಸ್ ಇಲಾಖೆ: ಸಮ್ಮೇಳನದ ವಿಚಾರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಮಾತನಾಡಿಸಿದಾಗ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಸಮ್ಮೇಳನ, ಮೆರವಣಿಗೆಗೆ ಹಾಗೂ ಬಂದ್‍ಗೆ ಅನುಮತಿ ಕೋರಿ ಅರ್ಜಿಗಳು ಬಂದಿವೆ. ಆದರೆ ಇಲಾಖೆಯಿಂದ ಸಮ್ಮೇಳನ ಸೇರಿದಂತೆ, ಮೆರವಣಿಗೆ ಹಾಗೂ ಬಂದ್‍ಗೂ ಅನುಮತಿ ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ನಡೆಯುತ್ತಿರುವ 16ನೇ ಸಾಹಿತ್ಯ ಸಮ್ಮೇಳನ ರಾಜ್ಯದ ಗಮನ ಸೆಳೆದಿದ್ದು, ಭಾರೀ ವಿರೋಧಗಳ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯಾಭಿಮಾನಿಗಳು, ಪ್ರಗತಿಪರರು ಸಮ್ಮೇಳನವನ್ನು ಯಶಸ್ವಿಗೊಳಿಸುವ ಉದ್ದೇಶದಿಂದ ನಾಡಿನ ಮೂಲೆ ಮೂಲೆಗಳಿಂದ ಶೃಂಗೇರಿಯತ್ತ ಹೊರಟಿದ್ದಾರೆಂದೂ ಮೂಲಗಳೂ ಪತ್ರಿಕೆಗೆ ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News