100ರ ಬದಲಿಗೆ ಬಂತು 500ರ ನೋಟು!: ಎಟಿಎಂಗೆ ಹೋದ ಗ್ರಾಹಕರಿಗೆ 1.50 ಲಕ್ಷ ರೂ. ಹೆಚ್ಚುವರಿ ಹಣ

Update: 2020-01-08 17:34 GMT
ಸಾಂದರ್ಭಿಕ ಚಿತ್ರ

ಮಡಿಕೇರಿ, ಜ.8: ನಗರದ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರ ಒಂದರಲ್ಲಿ ಅದಕ್ಕೆ ಹಣ ತುಂಬುವ ಸಿಬ್ಬಂದಿಗಳು ಮಾಡಿದ್ದ ಎಡವಟ್ಟಿನಿಂದ ಹತ್ತು ಹಲವು ಮಂದಿ ತಾವು ಪಡೆಯಬೇಕಿದ್ದ ಹಣಕ್ಕಿಂತ ಹೆಚ್ಚು ಹಣವನ್ನು ಪಡೆದುಕೊಂಡ ಪ್ರಕರಣ ಬೆಳಕಿಗೆ ಬಂದಿದೆ. 

ಕೆಲವು ಗ್ರಾಹಕರು ಹಣವನ್ನು ಹಿಂದಿರುಗಿಸಲು ಹಿಂದೇಟು ಹಾಕಿದ್ದರಿಂದ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಹಣವನ್ನು ಡ್ರಾ ಮಾಡಿದ್ದ ಜನರು ಪೊಲೀಸರಿಗೆ ಹೆದರಿ ಹಣವನ್ನು ಮರಳಿ ಬ್ಯಾಂಕಿಗೆ ನೀಡಿದ್ದು, 1.50 ಲಕ್ಷ ರೂ. ಎಟಿಎಂ ಕೇಂದ್ರದಿಂದ ಹೆಚ್ಚುವರಿಯಾಗಿ ಗ್ರಾಹಕರ ಕೈಸೇರಿತ್ತು.

ಘಟನೆ ಹಿನ್ನಲೆ: ಖಾಸಗಿ ಏಜೆನ್ಸಿಯೊಂದು ಮಡಿಕೇರಿಯ ಕೆನರಾ ಬ್ಯಾಂಕಿನ ಎಟಿಎಂ ಕೇಂದ್ರಕ್ಕೆ ಹಣ ತುಂಬುವ ಜವಾಬ್ದಾರಿ ವಹಿಸಿಕೊಂಡಿತ್ತು. ಅದರಂತೆ 2019ರ ಡಿಸೆಂಬರ್ 30 ರಂದು ಈ ಖಾಸಗಿ ಏಜೆನ್ಸಿಯ ಸಿಬ್ಬಂದಿಗಳು ಕೊಹಿನೂರು ರಸ್ತೆಯಲ್ಲಿರುವ ಎಟಿಎಂ ಕೇಂದ್ರಕ್ಕೆ ಹಣ ತುಂಬಿದ್ದರು. ಈ ಸಂದರ್ಭ 100 ರೂ. ಹಾಕುವ ಟ್ರೇಯಲ್ಲಿ 500ರೂ. ಮುಖಬೆಲೆಯ ನೋಟುಗಳನ್ನು ತುಂಬಿದ್ದು. ಈ ಎಡವಟ್ಟು ಹಣ ತುಂಬಿದ ಸಿಬ್ಬಂದಿಗಳ ಗಮನಕ್ಕೆ ಬಂದಿರಲಿಲ್ಲ. 

ಬಳಿಕ ಎಟಿಎಂ ಕೇಂದ್ರಕ್ಕೆ ಹಣ ಪಡೆಯಲು ಬಂದ ಗ್ರಾಹಕರು 500ರೂ. ಹಣ ಡ್ರಾ ಮಾಡಲು ಮುಂದಾದಾಗ 100ರೂ. ಮುಖ ಬೆಲೆಯ 5 ನೋಟು ಬರುವ ಬದಲು 500ರೂ. ಮುಖ ಬೆಲೆಯ 5 ನೋಟಿನಂತೆ ಒಟ್ಟು 2500ರೂ ಗ್ರಾಹಕರ ಕೈಸೇರಿದೆ. ಕೆಲವರು ಎಟಿಎಂ ಮಿಷನ್‍ಗೆ ಹಿಡಿಶಾಪ ಹಾಕುತ್ತಾ ಮನೆಗೆ ತೆರಳಿದರೆ, ಮತ್ತೆ ಕೆಲವರು ಈ ಎಡವಟ್ಟನ್ನು ದುರುಪಯೋಗಪಡಿಸಿಕೊಂಡು 64 ಸಾವಿರ, 50 ಸಾವಿರದಂತೆ ಸರಣಿಯಾಗಿ ಹಣ ಪಡೆದಿದ್ದಾರೆ. ಈ ವಿಚಾರ ಅರಿತ ಒರ್ವ ವ್ಯಕ್ತಿ ಒಂದೇ ದಿನ ಹತ್ತು ಹಲವು ಬಾರಿ ಹಣ ಪಡೆದಿರುವುದು ಕೂಡ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ 3 ದಿನಗಳ ಹಿಂದೆ ಶ್ರೀಧರ್ ಎಂಬ ಕೆನರಾ ಬ್ಯಾಂಕಿನ ಗ್ರಾಹಕರು ಇದೇ ಎಟಿಎಂ ಕೇಂದ್ರಕ್ಕೆ ಹಣ ಪಡೆಯಲು ಬಂದಾಗ ತಾವು ಪಡೆಯ ಬಯಸಿದ ಹಣಕ್ಕಿಂತ ಹೆಚ್ಚುವರಿ ಹಣ ಬಂದಿದೆ. ಇದರಿಂದ ಶಂಸಯಗೊಂಡ ಶ್ರೀಧರ್ ಬ್ಯಾಂಕಿಗೆ ಕರೆ ಮಾಡಿ ಎಟಿಎಂ ಕೇಂದ್ರದಲ್ಲಿ ದೋಷವಿರುವ ಬಗ್ಗೆ ದೂರು ನೀಡಿದ್ದಾರೆ. 

ಬಳಿಕ ಎಚ್ಚೆತ್ತ ಬ್ಯಾಂಕ್ ಸಿಬ್ಬಂದಿಗಳು ಮತ್ತು ಖಾಸಗಿ ಏಜೆನ್ಸಿ ಎಟಿಎಂ ಕೇಂದ್ರವನ್ನು ಬಂದ್ ಮಾಡಿದ್ದಾರೆ. ಆದರೆ ಎಟಿಎಂ ಮಿಷಿನ್‍ನಿಂದ ಆ ಹೊತ್ತಿಗಾಗಲೇ 1.50 ಲಕ್ಷ ರೂ. ಹೆಚ್ಚುವರಿಯಾಗಿ ಸೋರಿಕೆಯಾಗಿತ್ತು. ತದನಂತರ ಎಟಿಎಂ ಕೇಂದ್ರದಿಂದ ಹಣ ಡ್ರಾ ಮಾಡಲಾದ ಬ್ಯಾಂಕ್ ಖಾತೆಗಳ ಎಟಿಎಂ ಕಾರ್ಡ್‍ಗಳನ್ನು ಪರಿಶೀಲಿಸಿ, ಹೆಚ್ಚುವರಿ ಹಣ ಪಡೆದ ಗ್ರಾಹಕರನ್ನು ಸಂಪರ್ಕಿಸಿ, ಹಣ ಹಿಂದಿರುಗಿಸುವಂತೆ ಬ್ಯಾಂಕ್ ಸಿಬ್ಬಂದಿಗಳು ಮನವಿ ಮಾಡಿದ್ದರು. 

ಹೆಚ್ಚುವರಿ ಹಣ ಪಡೆದ ಗ್ರಾಹಕರ ಪೈಕಿ ಬಹುತೇಕರು ಬ್ಯಾಂಕಿಗೆ ಹಣ ಹಿಂದಿರುಗಿಸಿದ್ದಾರೆ. ಮತ್ತೆ ಕೆಲವರು ಹಣ ಕೊಡಲು ನಿರಾಕರಿಸಿದ ಹಿನ್ನಲೆಯಲ್ಲಿ ಜನವರಿ 6 ರಂದು ಅನಿವಾರ್ಯವಾಗಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಈ ಸಂದರ್ಭ ಪೊಲೀಸ್ ಠಾಣೆಯಿಂದ ಹಣ ಕೊಡಲು ನಿರಾಕರಿಸಿದವರಿಗೆ ಕರೆ ಮಾಡಿ ಹಣ ನೀಡುವಂತೆ ಸೂಚಿಸಿದ ಹಿನ್ನಲೆಯಲ್ಲಿ ಎಲ್ಲರೂ ಕೂಡ ಬ್ಯಾಂಕಿಗೆ ತೆರಳಿ ಹಣ ಪಾವತಿಸಿದ್ದಾರೆ. ಎಟಿಎಂ ಕೇಂದ್ರದಿಂದ ಹೆಚ್ಚುವರಿಯಾಗಿ ಗ್ರಾಹಕರ ಕೈ ಸೇರಿದ್ದ ಹಣ ಮತ್ತೆ ಬ್ಯಾಂಕ್‍ಗೆ ಜಮೆಯಾಗುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

ಕಳೆದ ಕೆಲ ತಿಂಗಳ ಹಿಂದೆ ಕೊಹಿನೂರು ರಸ್ತೆಯಲ್ಲಿರುವ ಹಳೆಯ ಎಟಿಎಂ ಮಿಷಿನ್ ಅನ್ನು ಬದಲಿಸಿ, ನೂತನ ತಂತ್ರಜ್ಞಾನದ ಮಿಷನ್ ಅನ್ನು ಅಳವಡಿಸಲಾಗಿತ್ತು. ಈ ಹೊಸ ಮಿಷನ್‍ನ 100, 500 ಮತ್ತು 2000 ರೂ. ಮುಖ ಬೆಲೆಯ ನೋಟುಗಳನ್ನು ತುಂಬುವ ಹಣದ ಟ್ರೇಗಳು ಆಧುನಿಕ ತಂತ್ರಜ್ಞಾನದಿಂದ ಕೂಡಿದೆ. 100 ಮತ್ತು 500ರೂ.ಗಳ ನೋಟಿನ ಅಳತೆ ಒಂದೇ ಆಗಿರುವುದರಿಂದ ಈ ಎಡವಟ್ಟು ನಡೆದಿದೆ. ಮಾತ್ರವಲ್ಲದೇ, ಹೊಸ ಮಿಷಿನ್‍ನಲ್ಲಿ ನೋಟುಗಳನ್ನು ಹಾಕುವ ಟ್ರೇಗಳ ಕಲರ್ ಕೋಡ್ ಕೂಡ ವಿಶಿಷ್ಟವಾಗಿದೆ. ಹೀಗಾಗಿ ಖಾಸಗಿ ಏಜೆನ್ಸಿ ಸಿಬ್ಬಂದಿಗಳು ಈ ಎಡವಟ್ಟು ಮಾಡಿರುವ ಸಾಧ್ಯತೆಗಳಿವೆ. ಆದರೆ ಎಟಿಎಂನಲ್ಲಿ ಇಂತಹ ಪ್ರಮಾದಗಳು ನಡೆದಾಗ ಯಾವುದೇ ಬ್ಯಾಂಕಿನಿಂದಲೂ ಹೆಚ್ಚುವರಿ ಹಣ ಪಡೆಯಲು ಗ್ರಾಹಕರಿಗೆ ಸಾಧ್ಯವಿಲ್ಲ ಎಂದು ಕೆನರಾ ಬ್ಯಾಂಕಿನ ಪ್ರದಾನ ಸಹಾಯಕ ವ್ಯವಸ್ಥಾಪಕ ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News