ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾರ್ಮಿಕ ಸಂಘಟನೆಗಳ ಮುಷ್ಕರ ಯಶಸ್ವಿ

Update: 2020-01-08 17:59 GMT

ಚಿಕ್ಕಮಗಳೂರು, ಜ.8: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಬುಧವಾರ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ನಡೆಸುತ್ತಿರುವ ಚಳವಳಿಯನ್ನು ಬೆಂಬಲಿಸಿ ಜಿಲ್ಲೆಯ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಜಿಲ್ಲಾದ್ಯಂತ ನಡೆಸಿದ ಮುಷ್ಕರ ಯಶಸ್ವಿಯಾಗಿದೆ. ನಗರದಲ್ಲಿ ಬಿಜೆಪಿಯ ಬಿಎಂಸ್ ಹೊರತು ಪಡಿಸಿ ಎಐಟಿಯುಸಿ ನೇತೃತ್ವದಲ್ಲಿ 11 ಕಾರ್ಮಿಕ ಸಂಘಟನೆಗಳು ನಗರದ ಕ.ಇ.ಬಿ ವೃತ್ತದಿಂದ ಆಝಾದ್ ಪಾರ್ಕ್ ವೃತ್ತದವರೆಗೆ ಸಾವಿರಾರು ಜನರೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳು, ಧರ್ಮಾಧಾರಿತ ಆಡಳಿತ ವ್ಯವಸ್ಥೆ ಸೇರಿದಂತೆ ಸಿಎಎ, ಎನ್‍ಆರ್‍ಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಪ್ರಮುಖ ಬೀದಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಕಾರ್ಯಕರ್ತೆಯರು, ಕಟ್ಟಡ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ತೋಟ ಕಾರ್ಮಿಕರು, ಕೃಷಿ ಕಾರ್ಮಿಕರೂ ಸೇರಿದಂತೆ ವಿವಿಧ ಅಸಂಘಟಿತ ವಲಯಗಳ ಕಾರ್ಮಿಕರು, ಕೇಂದ್ರದ ಬಿಜೆಪಿ ಸರಕಾರ ತನ್ನ ಅಧಿಕಾರದುದ್ದಕ್ಕೂ ಜನವಿರೋಧಿ ನೀತಿ ಅನುಸರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಆರೆಸ್ಸೆಸ್‍ನ ಕೈಗೊಂಬೆಯಾಗಿದ್ದಾರೆಂದು ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಬೆಳಗ್ಗೆ ನಗರದ ಆಜಾದ್ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ರೇಣುಕಾರಾಧ್ಯ, ಜಾತಿ ಧರ್ಮದ ಹೆಸರಿನಲ್ಲಿ  ಕೋಮುವಾದದ ಬೀಜಗಳನ್ನು ಬಿತ್ತುತ್ತಿರುವ ಬಿಜೆಪಿಯವರು ಈ ದೇಶಕ್ಕೆ ಶಾಪವಾಗಿರುವ ದೇಶದ್ರೋಹಿಗಳಾಗಿದ್ದಾರೆ. ಹಿಟ್ಲರ್ ನ ಪ್ಯಾಸ್ಟಿಸ್ ಸಂಸ್ಕೃತಿ ಮತ್ತು ಆರೆಸ್ಸೆಸ್ ಸಂಸ್ಕೃತಿ ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸಿರುವ ದೇಶಕ್ಕೆ ಬೇಕಿಲ್ಲ. ಯಾವಾಗಲೂ ಪಾಕಿಸ್ತಾನದ ಬಗ್ಗೆ ಮಾತನಾಡುವ ನರೇಂದ್ರ ಮೋದಿ ಭಾರತದ ಪ್ರಧಾನಿಗಳೋ ಅಥವಾ ಪಾಕಿಸ್ತಾನದ ಪ್ರಧಾನಿಗಳೋ ಎಂಬ ಅನುಮಾನ ದೇಶದ ಜನರನ್ನು ಕಾಡುತ್ತಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಲ್ಲಿ ಜನರ ಬದುಕು ಅತಂತ್ರವಾಗಲಿದೆ ಎಂದು ಹಿಂದಿನಿಂದಲೂ ಪಕ್ಷ ಜನರನ್ನು ಎಚ್ಚರಿಸುತ್ತಾ ಬಂದಿದೆ. ಜನರು ನಂಬಲಿಲ್ಲ. ಒಳ್ಳೆ ಆಡಳಿತ ನೀಡುತ್ತಾರೆಂದು ಕುರುಡಾಗಿ ನಂಬಿ ಅಧಿಕಾರ ನೀಡಿದರು. ಈಗ ನಾವು ಹೇಳಿದ್ದ ಸತ್ಯ ಜನರಿಗೆ ಮನವರಿಕೆಯಾಗಿದೆ. ಬಿಜೆಪಿ ಸರಕಾರಕ್ಕೆ ದೇಶ ಹಾಗೂ ಜನರ ಕಲ್ಯಾಣ ಬೇಕಿಲ್ಲ. ಅದಕ್ಕೆ ಬೇಕಿರುವುದು ದೇಶದ ಸಂಪತ್ತು ಲೂಟಿ ಮಾಡಿ ಹಿಂದೂ ರಾಷ್ಟ್ರ ನಿರ್ಮಾಣ ಮಾಡುವುದು ಮಾತ್ರ. ಇದಕ್ಕಾಗಿ ಬಿಜೆಪಿಯವರು ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಒಡೆದಾಳುತ್ತಿದ್ದಾರೆ. ಈ ವೇಳೆ ಅವರು ಜನರ ಸಮಸ್ಯೆಗಳನ್ನು ಮರೆಮಾಚಲು ಧಾರ್ಮಿಕ ವಿಚಾರಗಳನ್ನು ಮುನ್ನಲೆಗೆ ತಂದು ಸಂವಿಧಾನಕ್ಕೆ ದ್ರೋಹ ಬಗೆಯುತ್ತಿದ್ದಾರೆಂದು ಆರೋಪಿಸಿದರು.

ರೈತ ಮುಖಂಡ ಕೃಷ್ಣೇಗೌಡ ಮಾತನಾಡಿ, ರೈತರ ಬೆವರು ಹೊಲಕ್ಕೆ ಬಿದ್ದರೆ ಮಾತ್ರ ದೇಶಕ್ಕೆ ಅನ್ನ, ಆದರೆ ಅನ್ನ ನೀಡುವ ರೈತನ ಬದುಕು ಕೇಂದ್ರದ ಆರ್ಥಿಕ ನೀತಿಗಳಿಂದಾಗಿ ರಕ್ತ ಸುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ, ರೈತರು ಅಗಾಧವಾದ ಸಂಕಷ್ಟದಲ್ಲಿದ್ದರೂ ಆಡಳಿತಾರೂಢ ಸರಕಾರಗಳು ರೈತನಿಗೆ ನೆರವು ನೀಡದ ಪರಿಣಾಮ ದೇಶದಲ್ಲಿ ನಿರಂತರ ಆತ್ಮಹತ್ಯೆಗಳು ನಡೆಯುತ್ತಿವೆ. ರೈತರ ಹೆಸರೇಳಿಕೊಂಡ ಪಕ್ಷಗಳು ಇದೀಗ ರೈತರನ್ನೇ ಸುಲಿಗೆ ಮಾಡುತ್ತಿದೆ. ಅವರ ಮೇಲೆ ಗೋಲಿಬಾರ್ ಮಾಡುತ್ತಿದೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾರ್ಮಿಕರು, ರೈತರು ಬೀದಿಪಾಲಾಗುತ್ತಿದ್ದಾರೆಂದು ಆಕ್ರೋಶ ವ್ಯಕತಪಡಿಸಿದರು.

ಎ.ಐ.ಟಿ.ಯು.ಸಿ. ಜಿಲ್ಲಾಧ್ಯಕ್ಷ ಕೆ.ಗುಣಶೇಖರ್ ಮಾತನಾಡಿ, ಆಡಳಿತಾರೂಢ ಬಿಜೆಪಿ ಸರಕಾರ ದೇಶದ ಸಂಪತ್ತು, ಸಂವಿಧಾನದ ರಕ್ಷಣೆ, ಕೃಷಿರಂಗದ ಉಳಿವು, ದೇಶದ ಆರ್ಥಿಕತೆಯನ್ನು ಸದೃಡಗೊಳಿಸುವ ಪ್ರಯತ್ನಕ್ಕೆ ಮುಂದಾಗದಿದ್ದರೆ ನಮ್ಮ ಹೊರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದ ಅವರು, ಕೇಂದ್ರ ಸರಕಾರ ಕಾರ್ಮಿಕರು ಹೋರಾಟದ ಮೂಲಕ ಪಡೆದುಕೊಂಡಿದ್ದ 44 ಕಾರ್ಮಿಕ ಕಾಯ್ದೆಗಳ ನಾಶಕ್ಕೆ ಮುಂದಾಗಿದೆ. ಈ ಕಾಯ್ದೆಗಳು ನಾಶವಾದಲ್ಲಿ ಕಾರ್ಮಿಕರು ಬದುಕು ನಾಶವಾಗಲಿದೆ ಎಂದು ಎಚ್ಚರಿಸಿದರು.

ಸಿಪಿಐ ನಾಯಕಿ ರಾಧಾ ಸುಂದರೇಶ್ ಮಾತನಾಡಿ, ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ ವಾಸಿಸುತ್ತಿರುವ ದೇಶದ ಜನರ ಸಮಸ್ಯೆಗಳ ಅರಿತು ಕೆಲಸ ಮಾಡುವುದು ಆಡಳಿತಾರೂಢ ಸರಕಾರದ ಕರ್ತವ್ಯ. ಆದರೆ ದೇಶದ ರಕ್ಷಣೆಯ ವಿಚಾರವನ್ನೇ ಬಂಡವಾಳವನ್ನಾಗಿಸಿಕೊಂಡು ಭಾವನಾತ್ಮಕವಾಗಿ ಕೆರಳಿಸಿ ಗದ್ದುಗೆ ಹಿಡಿಯುವ ಕೃತ್ಯ ದೇಶದಲ್ಲಿ ನಡೆಯುತ್ತಿದೆ ಎಂದು ಕಿಡಿಕಾರಿದರು.

ಸಿಪಿಐ ಮುಖಂಡ ಬಿ.ಅಮ್ಜದ್ ಮಾತನಾಡಿ, ಇಂದು ಕಾರ್ಮಿಕ ಸಂಘಟನೆಗಳು ದೇಶವ್ಯಾಪಿ ನಡೆಸುತ್ತಿರುವ ಚಳವಳಿಗೆ ಪ್ರತ್ಯಕ್ಷವಾಗಿ 32 ಕೋಟಿ ಕಾರ್ಮಿಕರು, 60 ಕೋಟಿ ರೈತರು ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಿದ್ದರೂ ಪ್ರಧಾನಿ ನರೇಂದ್ರಮೋದಿ ಮತ್ತು ಅಮಿತ್‍ ಶಾರ ಮೇಲಿನ ಭಯದಿಂದ ದೃಶ್ಯ ಮಾಧ್ಯಮಗಳು ಬಂದ್ ವಿಫಲ ಎಂಬ ಸುದ್ದಿಗಳನ್ನು ಬಿತ್ತರಿಸುತ್ತಿವೆ. ನಾವು ಭಾರತ್ ಬಂದ್‍ಗೆ ಕರೆಯೇ ನೀಡಿರಲಿಲ್ಲ, ಆದರೆ ಜನರನ್ನು ತಪ್ಪು ದಾರಿಗೆ ಎಳೆಯಲು ಮಾಧ್ಯಮಗಳನ್ನು ಕೇಂದ್ರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದ ಅವರು, ಎಡಪಕ್ಷಗಳನ್ನು ಬಿಜೆಪಿಯವರು ತುಕಡೆ ಗ್ಯಾಂಗ್‍ಗಳೆಂದು ಮೂದಲಿಸುತ್ತಿದ್ದಾರೆ, ಆದರೆ ಈ ತುಕಡೆಗಳು ದೇಶದ ಸ್ವಾತಂತ್ರ್ಯಕ್ಕಾಗಿ ಬಲಿದಾನ ನೀಡದೇ ಇದ್ದಿದ್ದರೆ ಇವಾರ್ಯಾರು ಅಧಿಕಾರದಲ್ಲಿ ಇರುತ್ತಿರಲಿಲ್ಲ, ಬಿಜೆಪಿಯವರು ಬ್ರಿಟಿಷರ ಪಳೆಯುಳಿಕೆಗಳು, ಬ್ರಿಟಿಷರನ್ನೇ ದೇಶದಿಂದ ಓಡಿಸದ ತುಕುಡೆ ಗ್ಯಾಂಗ್‍ಗಳಿಗೆ ಬಿಜೆಪಿಯವರನ್ನು ಓಡಿಸುವುದೂ ಕಷ್ಟವಲ್ಲ, ಇದಕ್ಕೆ ನಾವು ಸಿದ್ಧರಾಗುತ್ತಿದ್ದೇವೆ ಎಂದರು.

ಈ ಪ್ರತಿಭಟನಾ ಸಭೆಯಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಜಿ.ರಘು, ಬಿಸಿಯೂಟ ಕಾರ್ಯಕರ್ತೆಯರ ಸಂಘದ ವಿಜಯಕುಮಾರ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಮಂಗಳ, ಕಾರ್ಮಿಕರ ಸಂಘದ ಮುಖಂಡರುಗಳಾದ ಮುನಿಯಾಂಡಿ,  ಓಬಯ್ಯ, ಸುಂದರ,ಮೋಹನ, ಜಯಕುಮಾರ, ವಸಂತಕುಮಾರ, ಚೆಲುವ, ಎಂ.ಪಿ ಸೆಲ್ವಂ, ಇಂದುಮತಿ ಸೇರಿದಂತೆ ಹಲವರಿದ್ದರು. 

ಬೇಡಿಕೆಗಳು: ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ತಡೆಗಟ್ಟುವುದು, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ, ಬಿ.ಎಸ್.ಎನ್, ಎಲ್.ಎಲ್.ಐ.ಸಿ,ರೈಲ್ವೆ, ಏರ್ ಇಂಡಿಯಾದಂತ ಸಂಸ್ಥೆಗಳನ್ನು ಖಾಸಗೀಕರಣ ಕೈಬಿಡುವುದು, ರೈತರ ಸಮಗ್ರ ಅಭಿವೃದ್ದಿಗೆ  ಮಾಡುವ ಪ್ರಯತ್ನದಿಂದ ಇನ್ನಷ್ಟು ಉದ್ಯೋಗಿಗಳು ನಿರುದ್ಯೋಗಿಗಳಾಗುವ ಆತಂಕದಲ್ಲಿದ್ದಾರೆ ಎಂದರು.

ಬಿಸಿಯೂಟ ಕಾರ್ಯಕರ್ತೆಯರು, ಅಂಗನವಾಡಿ, ಆಶಾಕಾರ್ಯಕರ್ತೆಯರಿಗೆ ಕನಿಷ್ಟ ವೇತನ 21 ಸಾವಿರವನ್ನು ನೀಡದೆ ನೀಡದೆ ಗೌರವಧನ ನೀಡಿ ಶೋಷಿಸಲಾಗುತ್ತಿದೆ, ತೋಟ ಕಾರ್ಮಿಕರು, ಗ್ರಾ.ಪಂ ನೌಕರರು ಸೇರಿದಂತೆ ಇತರ ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಟ 10 ಸಾವಿರ ಪಿಂಚಣಿ ನೀಡಬೇಕು, ಕಟ್ಟಡ ಕಾರ್ಮಿಕರ ಮಂಡಳಿಯನ್ನು ಸದೃಡಗೊಳಿಸಬೇಕು, 44 ಕಾರ್ಮಿಕ  ಕಾನೂನುಗಳ ತಿದ್ದುಪಡಿಯನ್ನು ಕೈಬಿಡಬೇಕು, ಸಣ್ಣ ಕೈಗಾರಿಕೆಗಳನ್ನು ಸಶಕ್ತಗೊಳಿಸಬೇಕು, ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಗೆ ಸ್ವಾಮಿನಾಥನ್ ವರದಿ ಜಾರಿಗೊಳಿಸುವುದು. ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಈಪ್ರತಿಭಟನೆಯಲ್ಲಿ ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.

ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎಸ್‍ಬಿಐ ಬ್ಯಾಂಕ್ ಹೊರತು ಪಡಿಸಿ ಎಲ್ಲ ಬ್ಯಾಂಕ್‍ಗಳು ಬಂದ್‍ಗೆ ಬೆಂಬಲ ಸೂಚಿಸಿ ಬೆಳಗ್ಗೆ ಬ್ಯಾಂಕ್ ಕಚೇರಿ ಎದುರು ಧರಣಿ ನಡೆಸಿ ನಂತರ ಕೆಲಸ ಮುಂದುವರಿಸಿದರು. ಅಂಚೆ ಕಚೇರಿ ಸಿಬ್ಬಂದಿಯೂ ಮುಷ್ಕರಕ್ಕೆ ಬೆಂಬಲ ಸೂಚಿಸಿ ಧರಣಿ ನಡೆಸಿದರು. ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘನೆಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದವು. ಉಳಿದಂತೆ ನಗರದಲ್ಲಿ ಸಾರಿಗೆ ಬಸ್‍ಗಳ ಓಡಾಡ ಎಂದಿನಂತಿದ್ದು, ಮುಷ್ಕರದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಜಿಲ್ಲೆಯ ತಾಲೂಕು ಕೇಂದ್ರಗಳಲ್ಲೂ ಎಡ ಪಕ್ಷಗಳ ಕಾರ್ಮಿಕ ಸಂಘಟನೆಗಳು ಮುಷ್ಕರ ಬೆಂಬಲಿಸಿ ಧರಣಿ ನಡೆಸಿದವು.

ಎಡ ಪಕ್ಷಗಳು ತುಕಡೆ ಗ್ಯಾಂಗ್ ಎಂದು ಹೇಳಿದ ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಶೋಭಾ ಕರಂದ್ಲಾಜೆಯವರ ಸಂಸ್ಕೃತಿಯನ್ನು ಅವರ ನಾಲಿಗೆ ತೋರ್ಪಡಿಸಿದೆ. ನರೇಂದ್ರ ಮೋದಿ ಪಾಕಿಸ್ತಾನ ತೋರಿಸಿ ಗೆದ್ದರೆ ಸ್ಥಳೀಯ ಸಚಿವ ಸಿ.ಟಿ. ರವಿ ಬಾಬಾಬುಡನ್‍ಗಿರಿಯನ್ನು ತೋರಿಸಿ ಗೆಲ್ಲುತ್ತಿದ್ದಾರೆ. ಇಂತಹ ಕಿಡಿಗೇಡಿಗಳೇ ಬಿಜೆಪಿ ಪಕ್ಷಕ್ಕೆ ಆಸ್ತಿಯಾಗಿದ್ದಾರೆ. ಇವರಿಗೆ ಜನರು ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ.
- ರಾಧಾ ಸುಂದರೇಶ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News