ತೀವ್ರ ವಿರೋಧದ ನಡುವೆಯೂ ಕಲ್ಕುಳಿ ವಿಠಲ್ ಹೆಗ್ಡೆ ಅಧ್ಯಕ್ಷತೆಯಲ್ಲಿ ಸಮ್ಮೇಳನಕ್ಕೆ ಭರದ ಸಿದ್ಧತೆ

Update: 2020-01-09 15:28 GMT

#ಶೃಂಗೇರಿ ಪಟ್ಟಣದಲ್ಲಿ ಖಾಕಿ ಸರ್ಪಗಾವಲು

ಚಿಕ್ಕಮಗಳೂರು, ಜ.9: ಜಿಲ್ಲಾ ಕಸಾಪ ಶೃಂಗೇರಿ ಪಟ್ಟಣದಲ್ಲಿ ಜ.10, 11ರಂದು ಹಮ್ಮಿಕೊಂಡಿರುವ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಂಘಪರಿವಾರ ಹಾಗೂ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿರುವ ಮಧ್ಯೆ ಶೃಂಗೇರಿ ಪಟ್ಟಣದಲ್ಲಿ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಲು ಭರದ ಸಿದ್ಧತೆಗಳು ಪೂರ್ಣಗೊಂಡಿವೆ. ರಾಜ್ಯ ಮಟ್ಟದಲ್ಲಿ ಸುದ್ದಿ ಮಾಡಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಉಸ್ತುವಾರಿ ಸಚಿವ ಸಿ.ಟಿ.ರವಿ ಸೇರಿದಂತೆ ಸಂಘಪರಿವಾರದ ಸಂಘಟನೆಗಳು ಕಸಾಪ ಸದಸ್ಯರ ಮೇಲೆ ತೀವ್ರ ಒತ್ತಡ ಹೇರಿದ್ದರೂ ಸಮ್ಮೇಳನ ಮಾಡಿಯೇ ಸಿದ್ಧ ಎಂದು ಪಟ್ಟು ಹಿಡಿದಿರುವ ಜಿಲ್ಲೆಯ ಕಸಾಪ ಮುಖಂಡರು ಸಮ್ಮೇಳನಕ್ಕೆ ಸಕಲ ತಯಾರಿ ನಡೆಸಿದ್ದಾರೆ.

ಜಿಲ್ಲಾ ಕಸಾಪ ಕಾರ್ಯಕಾರಿ ಮಂಡಳಿ, ಪರಿಸರ ಹೋರಾಟಗಾರ ಹಾಗೂ ಸಾಹಿತಿ ಕಲ್ಕುಳಿ ವಿಠಲ್ ಹೆಗ್ಡೆ ಅವರನ್ನು ಶೃಂಗೇರಿ ಪಟ್ಟಣದಲ್ಲಿ ನಡೆಯುವ 16ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದಾಗಿನಿಂದ ಸಂಘಪರಿವಾರದ ಸಂಘಟನೆಗಳು ಹೆಗ್ಡೆ ಆಯ್ಕೆಯನ್ನು ವಿರೋಧಿಸುತ್ತಿದ್ದು, ಈ ವಿರೋಧಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರೂ ಸಹಮತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಅವರು ಸಮ್ಮೇಳನಕ್ಕೆ ಕೇಂದ್ರ ಕಸಾಪದಿಂದ ಬರಬೇಕಿದ್ದ ಅನುದಾನವನ್ನೂ ತಡೆಹಿಡಿಯಲು ಸೂಚಿಸಿದ್ದು, ಸಮ್ಮೇಳನದ ಆಹ್ವಾನ ಪತ್ರಿಕೆಯನ್ನೂ ಸ್ವೀಕರಿಸಿದೇ ತಾನೂ ಸಮ್ಮೇಳನದ ಉದ್ಘಾಟನೆಗೂ ಬರುವುದಿಲ್ಲ ಎಂದಿದ್ದಾರೆ.

ಈ ನಡುವೆ ಸಂಘಪರಿವಾರದ ಸಂಘಟನೆಗಳು ಶೃಂಗೇರಿಯಲ್ಲಿ ಪ್ರತಿಭಟನೆ ಮಾಡಿ ಸಮ್ಮೇಳದ ಅಧ್ಯಕ್ಷರನ್ನು ಬದಲಾಯಿಸುವಂತೆ ಒತ್ತಾಯಿಸಿದ್ದು, ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ನಡೆದರೆ ಪಟ್ಟಣ ಬಂದ್ ಮಾಡುವುದಾಗಿ ಬೆದರಿಕೆ ಹಾಕಿವೆ. ಈ ಬೆಳವಣಿಗೆಗಳ ನಡುವೆಯೂ ಜಿಲ್ಲಾ ಕಸಾಪ ಜನರಿಂದ ಹಣ ಸಂಗ್ರಹಿಸಿ ಸಮ್ಮೇಳನ ಮಾಡುವುದಾಗಿ ಹೇಳಿಕೆ ನೀಡಿ ಅದರಂತೆ ಶುಕ್ರವಾರದ ಶೃಂಗೇರಿ ಪಟ್ಟಣದಲ್ಲಿನ ಸಮ್ಮೇಳನಕ್ಕೆ ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದಾರೆ. ಈ ಮಧ್ಯೆ ಜಿಲ್ಲಾ ಪೊಲೀಸ್ ಇಲಾಖೆ ಕಾನೂನ ಸುವ್ಯಸ್ಥೆಯ ನೆಪವೊಡ್ಡಿ ಸಮ್ಮೇಳನ, ಮೆರವಣಿಗೆಗೆ ಅನುಮತಿ ಇಲ್ಲ ಎಂದು ಸ್ಪಷ್ಟನೆ ನೀಡಿದ್ದು, ಈ ಸಂಬಂಧ ಸ್ಥಳೀಯ ಪೊಲೀಸರಿಂದ ಕಸಾಪಕ್ಕೆ ಸಮ್ಮೇಳನ ಮುಂದೂಡುವಂತೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಶೃಂಗೇರಿ ಪಟ್ಟಣವನ್ನು ಕಳೆದ ಮೂರು ದಿನಗಳಿಂದ ಕಸಾಪ ಸದಸ್ಯರು ಸಮ್ಮೇಳನಕ್ಕಾಗಿ ಸಿಂಗಾರ ಮಾಡಿದ್ದು, ಗುರುವಾರ ಶೃಂಗೇರಿ ಪಟ್ಟಣ ಪಂಚಾಯತ್ ಸಮ್ಮೇಳನಕ್ಕಾಗಿ ಪಟ್ಟಣದಾದ್ಯಂತ ಕಟ್ಟಲಾಗಿರುವ ಶುಭಾಶಯ ಬ್ಯಾನರ್ ಗಳನ್ನು ತೆರವು ಮಾಡಿದೆ ಎಂದು ತಿಳಿದು ಬಂದಿದೆ. ಜಿಲ್ಲಾ ಕಸಾಪ ಸದಸ್ಯರು ಹಾಗೂ ತಾಲೂಕು ಕಸಾಪವು ಸಮ್ಮೇಳನಕ್ಕಾಗಿ ಶೃಂಗೇರಿ ಪಟ್ಟಣದ ಬಿಜೆಎಸ್ ಸಮುದಾಯ ಭವನದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಸಮ್ಮೇಳದಲ್ಲಿ ಸುಮಾರು 2 ಸಾವಿರ ಆಸನಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಸಮ್ಮೇಳನದ ವೇದಿಕೆಯ ಬಳಿ ಶುಕ್ರವಾರ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಸಂಘಪರಿವಾರದ ಬೆದರಿಕೆಗಳ ಹಿನ್ನೆಲೆಯಲ್ಲಿ ಪಟ್ಟಣದಾದ್ಯಂತ ಪೊಲೀಸ್ ಇಲಾಖೆ ಖಾಕಿ ಸರ್ಪಗಾವಲನ್ನೂ ಹಾಕಿದೆ.

ಕಸಾಪ ಜಿಲ್ಲಾಧ್ಯಕ್ಷರಿಂದ ಉಪವಾಸ: ಸಮ್ಮೇಳನಕ್ಕೆ ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್  ಗುರುವಾರ ಬೆಳಗ್ಗೆಯಿಂದ ಉಪವಾಸ ಕೈಗೊಳ್ಳುತ್ತಿದ್ದೇನೆಂದು ಈ ಹಿಂದೆ ಹೇಳಿಕೆ ನೀಡಿದ್ದರು. ಅದರಂತೆ ಗುರುವಾರ ಬೆಳಗ್ಗೆ ಅವರು ಶೃಂಗೇರಿಯಲ್ಲಿ ಉಪವಾಸ ಕೈಗೊಂಡಿದ್ದು, ತನ್ನ ಉಪವಾಸ ಯಾರ ವಿರುದ್ಧವೂ ಅಲ್ಲ, ಸಮ್ಮೇಳನದ ಯಶಸ್ವಿಗಾಗಿ ತಾನು ಉಪವಾಸ ಕೈಗೊಂಡಿದ್ದೇನೆ, ಶುಕ್ರವಾರ ಸಮ್ಮೇಳನ ವಿವಾದವಾದಲ್ಲಿ ಉಪವಾಸವನ್ನು ಮುಂದುವರಿಸುತ್ತೇನೆಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಕುಂದೂರು ಅಶೋಕ್ ಅವರ ಉಪವಾಸ ಸತ್ಯಾಗ್ರಹಕ್ಕೆ ಶೃಂಗೇರಿ ತಾಲೂಕು ಕಸಾಪ ಸದಸ್ಯರೂ ಬೆಂಬಲ ವ್ಯಕ್ತಪಡಿಸಿ ಸದಸ್ಯರೆಲ್ಲರೂ ಉಪವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ.

'ಸಮ್ಮೇಳನ ನಡೆಯುವುದಿಲ್ಲ, ಶುಕ್ರವಾರ ಪಟ್ಟಣ ಬಂದ್ ಇದೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಸಿದ್ದಾರೆ. ನಾಳೆ ಯಾವುದೇ ಬಂದ್ ಇರುವುದಿಲ್ಲ. ಪೊಲೀಸರು ಬಂದ್‍ಗೆ ಅನುಮತಿ ನೀಡಿಲ್ಲ. ಸಮ್ಮೇಳನ ಯಾವುದೇ ಅಡೆತಡೆ ಇಲ್ಲದೇ ನಡೆಯುತ್ತದೆ. ಸ್ಥಳೀಯ ಪೊಲೀಸರು ಸಮ್ಮೇಳನಕ್ಕೆ ಸಹಕಾರ ನೀಡುತ್ತಿದ್ದಾರೆ. ಕಸಾಪ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಸಮ್ಮೇಳನಕ್ಕೆ ಪರವಾನಿಗೆಯ ಅಗತ್ಯವಿಲ್ಲ. ಮೆರವಣಿಗೆಗೆ ಅನುಮತಿ ಬೇಕಿದೆ. ಅದನ್ನೂ ಕೇಳಿದ್ದೇವೆ, ಇನ್ನೂ ಅನುಮತಿ ನೀಡಿಲ್ಲ. ಸಮ್ಮೇಳನದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯುವುದಿಲ್ಲ. ಸಮ್ಮೇಳನಕ್ಕೆ ಜಿಲ್ಲೆಯಿಂದಲ್ಲದೇ ಹೊರ ಜಿಲ್ಲೆಗಳಿಂದಲೂ ಜನರು, ಸಾಹಿತಿಗಳು, ಪ್ರಗತಿಪರರೂ ಬರುತ್ತಿದ್ದಾರೆ. ಸಮ್ಮೇಳನಕ್ಕೆ ಕೇಂದ್ರ ಕಸಾಪ ಇನ್ನೂ ಅನುದಾನ ನೀಡಿಲ್ಲ. ಸಾರ್ವಜನಿಕರು, ರೈತರು, ಸ್ಥಳೀಯ ಸಂಘಸಂಸ್ಥೆಗಳು ಆರ್ಥಿಕ ನೆರವು ನೀಡಿದ್ದಾರೆ. ಕನ್ನಡದ ತೇರು ಎಳೆಯಲು ಎಲ್ಲರೂ ಮುಂದಾಗುತ್ತಾರೆ. ಯಾರೂ ವಿರೋಧ ಮಾಡುವುದಿಲ್ಲ ಎಂಬ ನಂಬಿಕೆ ಇದೆ. ಸೈದ್ಧಾಂತಿಕ ಭಿನ್ನಾಭಿಪ್ರಾಯ ಸಮ್ಮೇಳನಕ್ಕೆ ಯಾವುದೇ ತೊಂದರೆ ನೀಡದು ಎಂಬುದು ನನ್ನ ನಂಬಿಕೆಯಾಗಿದೆ
- ಕುಂದೂರು ಅಶೋಕ್, ಕಸಾಪ ಜಿಲ್ಲಾಧ್ಯಕ್ಷ 

ಸಂಘಪರಿವಾರದಿಂದ ಮಾತ್ರ ವಿರೋಧ ?
ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಬಿಜೆಪಿ ಹಾಗೂ ಸಂಘಪರಿವಾರದ ಸಂಘಟನೆಗಳು ಮಾತ್ರ ವಿರೋಧ ವ್ಯಕ್ತಪಡಿಸುತ್ತಿವೆ. ಆದರೆ ಸಾರ್ವಜನಿಕರಿಂದಾಗಲೀ, ಸ್ಥಳೀಯರಿಂದಾಗಲೀ, ಮಠದಿಂದಾಗಲೀ ಸಮ್ಮೇಳನ ವಿರೋಧಿಸಿ ಯಾವುದೇ ಹೇಳಿಕೆ ಇದುವರೆಗೂ ಬಂದಿಲ್ಲ ಎನ್ನಲಾಗಿದೆ. ಶೃಂಗೇರಿ ಮಠದ ವತಿಯಿಂದ ಸಮ್ಮೇಳನಕ್ಕೆ ಬರುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಆದಿಚುಂಚನಗಿರಿ ಮಠದಿಂದ ಸಮ್ಮೇಳನ ನಡೆಸಲು ಸ್ಥಳಾವಕಾಶವನ್ನೂ ನೀಡಲಾಗಿದೆ. ನಕ್ಸಲ್ ವಿರೋಧಿ ನಾಗರಿಕರ ವೇದಿಕೆ ಹೆಸರಿನಲ್ಲಿ ಸಮ್ಮೇಳನಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ಈ ವೇದಿಕೆಯಲ್ಲಿರುವವರೆಲ್ಲರೂ ಬಿಜೆಪಿ ಹಾಗೂ ಸಂಘಪರಿವಾರದ ಇತರ ಸಂಘಟನೆಗಳ ಸದಸ್ಯರಾಗಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News