ಮೈಸೂರು ವಿವಿಯಲ್ಲಿ ಪ್ರತಿಭಟನೆ ವೇಳೆ 'ಫ್ರೀ ಕಾಶ್ಮೀರ್' ಭಿತ್ತಿ ಪತ್ರ: ವರದಿ ಕೇಳಿದ ರಾಜ್ಯಪಾಲರು

Update: 2020-01-09 16:36 GMT

ಮೈಸೂರು,ಜ.9: ಜೆಎನ್‍ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಬುಧವಾರ ಮೈಸೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‍ನಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿನಿಯೋರ್ವಳು 'ಫ್ರೀ ಕಾಶ್ಮೀರ್' ಭಿತ್ತಿ ಪತ್ರ ಹಿಡಿದುಕೊಂಡಿದ್ದು, ಘಟನೆ ಸಂಬಂಧ ರಾಜ್ಯಪಾಲರು ವರದಿ ಕೇಳಿದ್ದಾರೆ.

ಮಾನಸ ಗಂಗೋತ್ರಿಯ ಕ್ಯಾಂಪಸ್‍ನಲ್ಲಿ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ಮೈಸೂರು ವಿವಿ ಸಂಶೋಧಕರ ಸಂಘದ ವತಿಯಿಂದ ಜ.8 ರಂದು ಜೆಎನ್‍ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆ ಖಂಡಿಸಿ ಪಂಜಿನ ಮೆರವಣಿಗೆ ಮಾಡಲಾಗಿತ್ತು. ಈ ವೇಳೆ ವಿದ್ಯಾರ್ಥಿಯೋರ್ವಳು 'ಪ್ರೀ ಕಾಶ್ಮೀರ್' ಭಿತ್ತಿ ಪತ್ರ ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿದ್ದ ಪತ್ರಿಕಾ ವರದಿ ಆಧರಿಸಿ ಸಿಂಡಿಕೇಟ್ ಸದಸ್ಯರೊಬ್ಬರು ಕುಲಪತಿಗಳಿಗೆ ದೂರು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಮೈಸೂರು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದೆ.

ಈ ಸಂಬಂಧ “ವಾರ್ತಾಭಾರತಿ”ಯೊಂದಿಗೆ ಗುರುವಾರ ಕುಲಸಚಿವ ಪ್ರೊ.ಶಿವಪ್ಪ ಮಾತನಾಡಿ, ವಿವಿ ಕ್ಯಾಂಪಸ್ ಆವರಣದಲ್ಲಿ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ವಿದ್ಯಾರ್ಥಿನಿಯೋರ್ವಳು ರಾಷ್ಟ್ರದ ಐಕ್ಯತೆಗೆ ಧಕ್ಕೆ ತರುವಂತಹ 'ಫ್ರೀ ಕಾಶ್ಮೀರ್' ಎಂಬ ಬರಹದ ಭಿತ್ತಿ ಪತ್ರ ಪ್ರದರ್ಶನ ಮಾಡಿದ್ದು ನಮ್ಮ ಗಮನಕ್ಕೆ ಬಂದಿದೆ. ಈ ಸಂಬಂಧ ಪ್ರತಿಭಟನೆ ನಡೆಸಿದ ದಲಿತ ವಿದ್ಯಾರ್ಥಿ ಒಕ್ಕೂಟ ಮತ್ತು ವಿವಿ ಸಂಶೋಧಕರ ಸಂಘದವರಿಗೆ ನೋಟಿಸ್ ನೀಡಲಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗೂ ದೂರು ನೀಡಲಾಗಿದೆ ಎಂದು ಹೇಳಿದರು. ಈ ಘಟನೆ ಸಂಬಂಧ ರಾಜ್ಯಪಾಲರು ವರದಿ ಕೇಳಿದ್ದಾರೆ. ಇಂದು ಎಷ್ಟೇ ಸಮಯ ಅದರೂ ವರದಿ ನೀಡಲಾಗುವುದು ಎಂದು ಹೇಳಿದರು.

ಮೈಸೂರು ವಿವಿ ಕ್ಯಾಂಪಸ್ ಒಳಗೆ ಮಾಡುವ ಪ್ರತಿಭಟನಗೆ ಇದುವರೆಗೂ ಅನುಮತಿ ಪಡೆಯುತ್ತಿರಲಿಲ್ಲ, ಅದೇ ರೀತಿ ನಿನ್ನೆ ಜೆಎನ್‍ಯು ನಲ್ಲಿ ಹಲ್ಲೆ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ. ಕ್ಯಾಂಪಸ್‍ನಿಂದ ಹೊರಗೆ ಬಂದಾಗ ಯಾರೋ ಇಂತಹ ಭಿತ್ತಿ ಪತ್ರವನ್ನು ಪ್ರದರ್ಶನ ಮಾಡಿದ್ದಾರೆ. ಅವರು ಯಾರು ಎಂಬುದು ನಮಗೆ ಗೊತ್ತಿಲ್ಲ.
-ಮರಿದೇವಯ್ಯ, ಮೈಸೂರು ವಿವಿ ಸಂಶೋಧಕರ ಸಂಘದ ಅಧ್ಯಕ್ಷ

ವಿದ್ಯಾರ್ಥಿಗಳ ಪ್ರತಿಭಟನೆಯನ್ನು ಹತ್ತಿಕ್ಕಲು ಯಾರೋ ಉದ್ದೇಶಪೂರ್ವಕವಾಗಿ ಇಂತಹ ಭಿತ್ತಿ ಪತ್ರ ಪ್ರದರ್ಶನ ಮಾಡಿದ್ದಾರೆ. ಭಿತ್ತಿ ಪತ್ರ ಪ್ರದರ್ಶನ ಮಾಡಿರುವವರಿಗೆ ಪ್ರತಿಭಟನೆ ನಡೆಸಿರುವ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಗೂ ಸಂಬಂಧವಿಲ್ಲ, ನಮ್ಮ ಹೋರಾಟ ಮತ್ತು ಒಗ್ಗಟ್ಟನ್ನು ಮುರಿಯಬೇಕು ಎಂಬ ಸಂಚು ನಡೆಯುತ್ತಿದೆ.
-ಮಹೇಶ್ ಸೋಸ್ಲೆ, ಮೈಸೂರು ವಿವಿ ಸಂಶೋಧಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News