×
Ad

ಸಾಹಿತ್ಯ ಸಮ್ಮೇಳನಕ್ಕೆ ಅಡ್ಡಿಪಡಿಸಿದರೆ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ: ಕರವೇ ರಾಜ್ಯಾಧ್ಯಕ್ಷ ಎಚ್ಚರಿಕೆ

Update: 2020-01-09 22:20 IST
ಟಿ.ಎ.ನಾರಾಯಣಗೌಡ

ಬೆಂಗಳೂರು, ಜ.9: ಶೃಂಗೇರಿಯಲ್ಲಿ ನಾಳೆ ನಡೆಯಬೇಕಿರುವ 16ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜ್ಯ ಸರ್ಕಾರವೇ ಅಡ್ಡಿ ಆತಂಕ ಉಂಟು ಮಾಡುತ್ತಿರುವುದು ಕನ್ನಡ ದ್ರೋಹ ಮತ್ತು ಕನ್ನಡದ ಸಾಂಸ್ಕೃತಿಕ ಪರಂಪರೆಗೆ ಮಾಡುತ್ತಿರುವ ವಂಚನೆ. ಇದನ್ನು ಖಂಡಿಸುತ್ತೇನೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.

ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಕಲ್ಕುಳಿ ವಿಠಲ ಹೆಗಡೆಯವರನ್ನು ಆಯ್ಕೆ ಮಾಡಿರುವುದನ್ನು ಸಹಿಸದೆ ಕನ್ನಡ ಮತ್ತು ಸಂಸ್ಕೃತಿ ಸಚಿವ‌ ಸಿ.ಟಿ.ರವಿ ಸಮ್ಮೇಳನಕ್ಕೆ ಅಡ್ಡಿಯಾಗಿದ್ದಾರೆ. ಇದು ಅಕ್ಷಮ್ಯ. ಸಮ್ಮೇಳನಕ್ಕೆ ಅನುದಾನ ತಡೆ ಹಿಡಿದಿರುವುದು, ಪೊಲೀಸರಿಂದ ಅನುಮತಿ ನಿರಾಕರಿಸಿರುವುದು, ಸರ್ಕಾರಿ ನೌಕರರಿಗೆ ನೀಡಲಾಗುವ ಓಓಡಿ ರದ್ದುಪಡಿಸಿರುವುದು ಸಚಿವರ ಸಾಂಸ್ಕೃತಿಕ ದಬ್ಬಾಳಿಕೆಗೆ ನಿದರ್ಶನ. ಯಾವುದೇ ಕಾರಣಕ್ಕೂ ನಾಳಿನ‌ ಸಮ್ಮೇಳನ ನಿಲ್ಲಬಾರದು. ಕರ್ನಾಟಕ ರಕ್ಷಣಾ ವೇದಿಕೆ ಚಿಕ್ಕಮಗಳೂರು ಜಿಲ್ಲಾ ಘಟಕ ಮತ್ತು ಸುತ್ತಮುತ್ತಲ ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ. ಪೊಲೀಸರಿಗೆ ರಕ್ಷಣೆ ಒದಗಿಸಲು ಸಾಧ್ಯವಿಲ್ಲದಿದ್ದರೆ ಕರವೇ ಕಾರ್ಯಕರ್ತರೇ ರಕ್ಷಣೆ ನೀಡುತ್ತಾರೆ ಎಂದು ಅವರು ತಿಳಿಸಿದ್ದಾರೆ. 

ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಲ್ಲಿ ಕೈಯಾಡಿಸಲು ಸರ್ಕಾರಕ್ಕೆ,‌ ಸಚಿವರಿಗೆ ಯಾವುದೇ ಹಕ್ಕು ಇಲ್ಲ. ಪರಿಷತ್ತು ಸ್ವಾಯತ್ತ ಸಂಸ್ಥೆ. ಅದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ಅದರ ಮೇಲಿನ ದೌರ್ಜನ್ಯವನ್ನು ಸಹಿಸಲಾಗದು. ಕನ್ನಡ ಸಂಸ್ಕೃತಿಯ ಗಂಧಗಾಳಿಯೂ ಗೊತ್ತಿಲ್ಲದ ವ್ಯಕ್ತಿಯನ್ನು ಕನ್ನಡ ಮತ್ತು ಸಂಸ್ಕೃತಿ‌ ಇಲಾಖೆಯ ಮಂತ್ರಿಯನ್ನಾಗಿ ಮಾಡಿರುವುದೇ ಅಪಚಾರ. ಮೊದಲು ಸಿ.ಟಿ.ರವಿಯನ್ನು ಆ ಸ್ಥಾನದಿಂದ ಕಿತ್ತು‌ಹಾಕಬೇಕು. ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರ ಕಿರುಕುಳ‌ ಮುಂದುವರೆಸಿದ್ದೇ ಆದರೆ ಸರ್ಕಾರ ತೀವ್ರ ಸ್ವರೂಪದ ಪ್ರತಿಭಟನೆಗಳನ್ನು ರಾಜ್ಯಾದ್ಯಂತ ಎದುರಿಸಬೇಕಾಗುತ್ತದೆ. ಇಂಥ ಸರ್ವಾಧಿಕಾರಿಗಳನ್ನು‌ ಕನ್ನಡ ನಾಡು ಎಂದೂ‌ ಸಹಿಸುವುದಿಲ್ಲ ಎಂದು ಅವರು ಪ್ರಕಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News