ಲಿಂಗಾಯತರಿಗೆ ಶೇ.16ರಷ್ಟು ಮೀಸಲಾತಿಗೆ ಬಸವರಾಜ ಹೊರಟ್ಟಿ ಆಗ್ರಹ

Update: 2020-01-09 18:17 GMT

ಹುಬ್ಬಳ್ಳಿ, ಜ.9: ಕರ್ನಾಟಕ ಜನಸಂಖ್ಯೆ ಅನುಗುಣವಾಗಿ ವೀರಶೈವ-ಲಿಂಗಾಯತ ಸಮುದಾಯಕ್ಕೆ ಶೇಕಡ 16ರಷ್ಟು ಮೀಸಲಾತಿ ಕಲ್ಪಿಸಬೇಕೆಂದು ರಾಜ್ಯ ಸರಕಾರಕ್ಕೆ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಒತ್ತಾಯಿಸಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸಮಾಜದವರು ಮೀಸಲಾತಿ ಕೇಳುತ್ತಿದ್ದಾರೆ. ಆ ಪ್ರಕಾರ ಅನೇಕ ಸಮುದಾಯದವರಿಗೆ ವಿವಿಧ ರಾಜ್ಯಗಳಲ್ಲಿ ಮೀಸಲಾತಿ ಕೊಡಲಾಗಿದೆ. ಅದರಂತೆ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಜನರ ಸಂಖ್ಯೆ ಹೆಚ್ಚಿದ್ದು, ಅವರಲ್ಲಿ ಅನೇಕರು ಬಡ ಜನರಿದ್ದಾರೆ ಎಂದು ತಿಳಿಸಿದರು.

ಸಮುದಾಯದಲ್ಲಿ ಶೈಕ್ಷಣಿಕ, ಸಾಮಾಜಿಕ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಹೀಗಾಗಿ ವೀರಶೈವ ಲಿಂಗಾಯತ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ಕಲ್ಪಿಸಬೇಕು ಎಂದು ಹೊರಟ್ಟಿ ಆಗ್ರಹಿಸಿದರು.

ವೀರಶೈವ-ಲಿಂಗಾಯತ ಮೀಸಲಾತಿ ವಿಚಾರವಾಗಿ ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರಿಗೂ ಪತ್ರ ಬರೆದಿದ್ದೆ. ಅಲ್ಲದೇ ಈಗ ಬಿ.ಎಸ್.ಯಡಿಯೂರಪ್ಪಮುಖ್ಯಮಂತ್ರಿ ಆಗಿದ್ದು, ಅವರಿಗೂ ಪತ್ರ ಮೂಲಕ ಬೇಡಿಕೆ ಈಡೇರಿಸಲು ಒತ್ತಾಯಿಸಲಾಗುವುದು. ಈ ಸಂಬಂಧ ಜ.19 ರಂದು ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News