ವಾಸ್ತವ ಒಪ್ಪಿಕೊಳ್ಳುವುದೇ ಪ್ರಧಾನಿಗಿರುವ ದಾರಿ

Update: 2020-01-10 07:02 GMT

ಪ್ರಧಾನಿಯಾಗಿ ನರೇಂದ್ರ ಮೋದಿ ದೇಶದಲ್ಲಿ ಸುದ್ದಿ ಮಾಡಿರುವುದಕ್ಕಿಂತ ವಿದೇಶಗಳಲ್ಲಿ ಸುದ್ದಿಯಾದದ್ದೇ ಅಧಿಕ. ವಿದೇಶಗಳಿಗೆ ತೆರಳಿ, ಅಲ್ಲಿ ಅವರು ಮಾಡಿದ ಭಾಷಣ, ನೆರೆದವರ ಚಪ್ಪಾಳೆ, ಸೇರಿದ ಜನಸಂದಣಿ ಇತ್ಯಾದಿಗಳನ್ನು ಅತಿ ವರ್ಣರಂಜಿತವಾಗಿ ಮಾಧ್ಯಮಗಳು ಸುದ್ದಿ ಬಿತ್ತರಿಸಿ ಮೋದಿಯವರನ್ನು ವಿಶ್ವದ ನಾಯಕನನ್ನಾಗಿಸಲು ಪ್ರಯತ್ನಿಸಿದವು. ವಿದೇಶಗಳ ನಾಯಕರೆಲ್ಲ ಮೋದಿಯ ಮಾರ್ಗದರ್ಶನಕ್ಕೆ ಕಾಯುತ್ತಿದ್ದಾರೆ ಎಂಬ ಹಸಿ ಸುಳ್ಳುಗಳನ್ನು ಹರಡಿ, ಮೋದಿಯೆಂಬ ಹುಸಿ ತಟ್ಟೀರಾಯನನ್ನು ನಿರ್ಮಿಸಿದ ಹೆಗ್ಗಳಿಕೆ ಮಾಧ್ಯಮಗಳಿಗೆ ಸಲ್ಲಬೇಕು. ಅಂಬಾನಿ-ಅದಾನಿಗಳೆಂಬ ಎರಡು ಊರುಗೋಲುಗಳ ಮೂಲಕ ಪ್ರಧಾನಿಯಾಗಿ, ಅವರದೇ ಸಲಹೆ ಸೂಚನೆಗಳಂತೆ ವಿದೇಶ ಪ್ರವಾಸಗಳನ್ನು ಒಂದರ ಹಿಂದೆ ಒಂದರಂತೆ ಹಮ್ಮಿಕೊಂಡ ಮೋದಿ, ‘ಬಂಡವಾಳ ಹೂಡಿಕೆಗಾಗಿ ಭಾರತಕ್ಕೆ ಬನ್ನಿ’ ಎಂದು ಕರೆದದ್ದೇ ಬಂತು. ಅವರ ಕರೆಗೆ ಸ್ಪಂದಿಸಿ ಬಂಡವಾಳ ಹೂಡಿಕೆದಾರರು ಬರುವುದು ಪಕ್ಕಕ್ಕಿರಲಿ, ಭಾರತದ ಸದ್ಯದ ಸ್ಥಿತಿಯನ್ನು ಗಮನಿಸಿ ಉದ್ಯಮಿಗಳು ಒಬ್ಬೊಬ್ಬರಾಗಿ ಹೂಡಿಕೆಗಳನ್ನು ಕಡಿಮೆಗೊಳಿಸುತ್ತಿದ್ದಾರೆ. ಸ್ವದೇಶಿ ಉದ್ಯಮಿಗಳೇ ವಿದೇಶಗಳಿಗೆ ವಲಸೆ ಹೋಗುವ ಪ್ರಯತ್ನದಲ್ಲಿದ್ದಾರೆ.

ಬಂಡವಾಳ ಹೂಡಬೇಕಾದರೆ ದೇಶದಲ್ಲಿ ಸೌಹಾರ್ದವಾದ ವಾತಾವರಣ ಇರಬೇಕು. ಆದರೆ ಒಂದೆಡೆ ದೇಶವನ್ನು ಅರಾಜಕತೆಗೆ ತಳ್ಳುತ್ತಾ ಮಗದೊಂದೆಡೆ ‘ಬನ್ನಿ’ ಎಂದು ವಿದೇಶಿ ಉದ್ಯಮಿಗಳನ್ನು ಕರೆದರೆ ಅವರಾದರೂ ಯಾಕೆ ಬಂದಾರು? ಮೋದಿಯವರ ವಿದೇಶ ಪ್ರವಾಸದಿಂದ ಲಾಭ ಪಡೆದುಕೊಂಡವರು ಇಬ್ಬರೇ ಇಬ್ಬರು ಉದ್ಯಮಿಗಳು. ಅವರೇ ಅಂಬಾನಿ ಮತ್ತು ಅದಾನಿ. ದೇಶದ ಇತರೆಲ್ಲ ಉದ್ಯಮಿಗಳ ಮುಖದಲ್ಲಿ ಆತಂಕ ಕಾಣುತ್ತಿದೆಯಾದರೂ, ಇವರ ಮೊಗದ ನಗುವಿನ ಲಾಸ್ಯ ಅಳಿದಿಲ್ಲ. ಹಾಗೆ ನೋಡಿದರೆ ಅಂಬಾನಿ, ಅದಾನಿಗಳ ವಿದೇಶಿ ಉದ್ಯಮಗಳಿಗೆ ಪೂರಕವಾಗಿ ಆಯಾ ಸರಕಾರದ ಜೊತೆಗೆ ಮಾತುಕತೆ ನಡೆಸುವುದಕ್ಕಾಗಿಯೇ ಮೋದಿಯವರು ಹಲವು ಪ್ರವಾಸಗಳನ್ನು ಗೈದಿದ್ದಾರೆ. ರಫೇಲ್ ಯುದ್ಧವಿಮಾನಕ್ಕೆ ಸಂಬಂಧಿಸಿ ಹಾಲ್‌ನ ಒಪ್ಪಂದವನ್ನು ಮುರಿದು ಅದನ್ನು ಅಂಬಾನಿಯ ರಿಲಯನ್ಸ್‌ಗೆ ನೀಡುವುದಕ್ಕಾಗಿ ಫ್ರಾನ್ಸ್ ಪ್ರವಾಸವನ್ನು ಗೈದ ಹೆಮ್ಮೆಯೂ ಇವರಿಗಿದೆ. ಇದೀಗ ಪ್ರವಾಸ ಮಾಡುವುದಕ್ಕೆ ದೇಶವೂ ಇಲ್ಲದೆ, ಮಾಡಲು ಕೆಲಸವೂ ಇಲ್ಲದೆ ದೇಶದೊಳಗೆ ಅರಾಜಕತೆ ಸೃಷ್ಟಿಸುವುದಕ್ಕಾಗಿ ಸಿಎಎ ಕಾಯ್ದೆಯ ಮೂಲಕ ಮೋದಿ ಸುದ್ದಿಯಲ್ಲಿದ್ದಾರೆ. ಈ ಕಾಯ್ದೆಯ ಮೂಲಕ ಇತರೆಲ್ಲ ಧರ್ಮೀಯರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಬಹುದು ಎಂದು ಪ್ರಧಾನಿಯ ಆಪ್ತರಾಗಿರುವ ಅಮಿತ್ ಶಾ ಭಾವಿಸಿದ್ದರು. ಆದರೆ ಅವರ ಎಲ್ಲ ಸಂಚುಗಳು ವಿಫಲವಾಗಿವೆ. ಇಡೀ ದೇಶ ಜಾತಿ ಧರ್ಮಗಳನ್ನು ಬದಿಗಿಟ್ಟು ಭಾರತಕ್ಕಾಗಿ ಒಂದಾಗಿದೆ. ಈ ಜನಸಮರವನ್ನು ಹೇಗೆ ಎದುರಿಸುವುದು ಎಂದು ತಿಳಿಯದೆ, ಪ್ರಧಾನಿ ಮೋದಿ ಅಡಗುವುದಕ್ಕೆ ವೈಶಂಪಾಯನ ಸರೋವರವನ್ನು ಹುಡುಕುತ್ತಿದ್ದಾರೆ.

ವಿದೇಶಗಳೆಲ್ಲ ಸುತ್ತಾಡಿ ಬಂದ ಪ್ರಧಾನಿ ತನ್ನದೇ ದೇಶದ ರಾಜ್ಯಗಳಲ್ಲಿ ಕಾಲಿಡುವುದಕ್ಕೆ ಸಾಧ್ಯವಾಗದಂತಹ ಸನ್ನಿವೇಶ ನಿರ್ಮಾಣವಾಗಿದೆ. ಅದರ ಭಾಗವಾಗಿಯೇ ಅಸ್ಸಾಮಿನಲ್ಲಿ ನಡೆಯಲಿರುವ ‘ಖೇಲೋ ಇಂಡಿಯಾ ಉದ್ಘಾಟನೆ’ಯಿಂದ ಪ್ರಧಾನಿ ಹಿಂದೆ ಸರಿದಿದ್ದಾರೆ. ‘ಖೇಲೋ ಇಂಡಿಯಾ ಕ್ರೀಡಾಕೂಟವು ಒಂದು ರಾಷ್ಟ್ರೀಯ ಅಭಿಯಾನ’ ಎಂದು ಬಣ್ಣಿಸಿದ್ದ ಮೋದಿ, ಇಂದು ಆ ಕಾರ್ಯಕ್ರಮದ ಉದ್ಘಾಟನೆಗೆ ಅಸ್ಸಾಮಿಗೆ ಕಾಲಿಡದಂತಹ ಸನ್ನಿವೇಶ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ, ಪ್ರಧಾನಿಯ ಬದಲಿಗೆ ಉದ್ಘಾಟನೆಗಾಗಿ ಅಸ್ಸಾಂ ಸರಕಾರ ಅಮಿತ್ ಶಾ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿದೆಯಾದರೂ, ಅವರೂ ಸಂಪರ್ಕಕ್ಕೆ ಸಿಗದೇ ತಪ್ಪಿಸಿಕೊಂಡಿದ್ದಾರೆ. ತನ್ನದೇ ದೇಶದ ಭೂಭಾಗಕ್ಕೆ ಹೋಗಲು ಪ್ರಧಾನಿಯೊಬ್ಬ ಹೆದರಿದ ಸನ್ನಿವೇಶ ಭಾರತದ ಇತಿಹಾಸದಲ್ಲೇ ಮೊದಲಿರಬೇಕು. ಒಂದೆಡೆ ಕಾಶ್ಮೀರವನ್ನು ಸಂಪೂರ್ಣವಾಗಿ ಸೇನೆಗೆ ಒಪ್ಪಿಸಲಾಗಿದೆ. ಅಲ್ಲೂ ಪ್ರಧಾನಿ ಕಾಲಿಡದ ಪರಿಸ್ಥಿತಿ ನಿರ್ಮಾಣವಾಗಿದೆ. ಈಶಾನ್ಯ ಭಾರತಕ್ಕೆ ಪ್ರವಾಸಗೈಯುವುದಕ್ಕೂ ಮೋದಿ ಹಿಂಜರಿಯುತ್ತಿದ್ದಾರೆ. ಇನ್ನುಳಿದಿರುವುದು ದಕ್ಷಿಣ ಭಾರತ ಮಾತ್ರ. ಅತ್ಯಂತ ವಿಪರ್ಯಾಸವೆಂದರೆ, ಗೃಹ ಸಚಿವ ಅಮಿತ್ ಶಾ ಮಂಗಳೂರಿನಲ್ಲಿ ಮಾಡಬೇಕಾಗಿದ್ದ ಸಮಾವೇಶವನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಲಾಗಿದೆ. ಮಂಗಳೂರಿನಲ್ಲಿ ಸರಕಾರಿ ಪ್ರಾಯೋಜಿತ ಗೋಲಿಬಾರ್‌ನ ಕಳಂಕ ಅವರು ಮಂಗಳೂರಿಗೂ ಕಾಲಿಡದಂತೆ ತಡೆದಿದೆ.

ಅಮಿತ್ ಶಾ ವಿರುದ್ಧ ಅನಿರೀಕ್ಷಿತವಾದ ಪ್ರತಿಭಟನೆ ವ್ಯಕ್ತವಾಗಬಹುದು ಎನ್ನುವ ದೂರದೃಷ್ಟಿಯಿಂದ ಸಮಾವೇಶವನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಿದ್ದಾರೆ. ಒಂದು ರೀತಿಯಲ್ಲಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ತಮ್ಮದೇ ನೆಲದಲ್ಲಿ ಅನ್ಯರಾಗಿದ್ದಾರೆ. ಅವರಿಂದ ಈ ದೇಶ ಅಭಿವೃದ್ಧಿಯ ಪಥದತ್ತ ಸಾಗಬಹುದು ಎನ್ನುವ ಜನರ ಕನಸುಗಳೆಲ್ಲ ಸರ್ವನಾಶವಾಗಿದೆ. ಇದೀಗ ಧರ್ಮದ ಆಧಾರದಲ್ಲಿ ಅರಾಜಕತೆಯನ್ನು ಸೃಷ್ಟಿಸಿ ಸಂಘಪರಿವಾರದ ಜನರನ್ನ ತೃಪ್ತಿ ಪಡಿಸುವ ಪ್ರಯತ್ನದಲ್ಲಿದೆ ಈ ಗುಜರಾತಿನ ಜೋಡಿ. ಸಿಎಎ ಕಾಯ್ದೆಯನ್ನು ಜಾರಿಗೆ ತಂದ ಬಳಿಕ ಬಳಿಕ, ಅದರ ಪರವಾಗಿ ಜನರನ್ನು ಪ್ರತಿಭಟನೆಗೆ ಇಳಿಸುವಂತಹ ಅನಿವಾರ್ಯತೆ ಸರಕಾರಕ್ಕೆ ಸೃಷ್ಟಿಯಾಗಿದೆ. ಮಿಸ್‌ಕಾಲ್‌ಗಳ ಮೂಲಕ ಸಿಎಎ ಕಾಯ್ದೆಗೆ ಬೆಂಬಲ ಗಳಿಸುವ ಅದರ ಪ್ರಯತ್ನವೂ ವಿಫಲವಾಗಿದೆ. ಮಹಿಳೆಯರ ಹೆಸರಿನಲ್ಲಿ, ವೇಶ್ಯಾವಾಟಿಕೆಯ ಹೆಸರಿನಲ್ಲಿ ನಂಬರ್‌ಗಳನ್ನು ಹಂಚಿದರೂ ಸಿಎಎ ಪರವಾಗಿ ಬಂದ ಮಿಸ್‌ಕಾಲ್‌ಗಳು ಬರೇ 50 ಲಕ್ಷ. ದೇಶದ ಉಳಿದ ಜನರು ಸಿಎಎ ವಿರುದ್ಧ ಇದ್ದಾರೆ ಎನ್ನುವ ಸತ್ಯವನ್ನು ಸರಕಾರಕ್ಕೆ ಇದು ತಿಳಿಸಿಕೊಟ್ಟಿದೆ. ಸಂಘಪರಿವಾರದ ಗೂಂಡಾಗಳ, ಪೊಲೀಸರ ಮೂಲಕ ಸಂವಿಧಾನದ ಪರವಾದ ಪ್ರತಿಭಟನೆಗಳನ್ನು ದಮನಿಸಬಹುದು ಎಂಬ ನಂಬಿಕೆಯಿಂದ ಮೋದಿ ಹೊರ ಬರದೇ ಇದ್ದರೆ, ಈ ದೇಶದಲ್ಲಿ ಪ್ರಧಾನಿಯವರು ಯಾವ ರಾಜ್ಯಗಳಲ್ಲೂ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ.

ಇಂದು ಎಲ್ಲ ವರ್ಗದ, ಎಲ್ಲ ಕ್ಷೇತ್ರಗಳ ಜನರು ಜಾತಿ, ಧರ್ಮಗಳನ್ನು ಬಿಟ್ಟು ಯಾಕೆ ಬೀದಿಗೆ ಬಂದಿದ್ದಾರೆ, ಪೊಲೀಸರ ಲಾಠಿಗಳು, ಗುಂಡುಗಳು ಅವರನ್ನು ಯಾಕೆ ಹೆದರಿಸುತ್ತಿಲ್ಲ ಎನ್ನುವುದನ್ನು ಮೋದಿ ಅರ್ಥಮಾಡಿಕೊಳ್ಳಬೇಕು. ವಾಸ್ತವವನ್ನು ಒಪ್ಪಿ ಜನದನಿಯನ್ನು ಗೌರವಿಸಬೇಕು. ಇಂದು ಮೋದಿ ಸಂಸತ್ತಿನಲ್ಲಿ ಕುಳಿತು ಯಾವುದೋ ಕಾಯ್ದೆಯೊಂದನ್ನು ತರುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ, ಬೀದಿಯಲ್ಲಿರುವ ಇದೇ ಜನರು ಕೊಟ್ಟ ಅಧಿಕಾರ. ಈ ಜನರ ಪೌರತ್ವವನ್ನು ಪ್ರಶ್ನಿಸುವುದೆಂದರೆ ಮೋದಿಯ ಪ್ರಧಾನಿ ಹುದ್ದೆಯನ್ನೇ ಪ್ರಶ್ನಿಸಿದಂತೆ. ಯಾರ ಪೌರತ್ವದ ಬಗ್ಗೆ ಅನುಮಾನಗಳಿವೆಯೋ ಆ ಪೌರರು ಆರಿಸಿದ ಪ್ರಧಾನಿ ಹೇಗೆ ಸಿಂಧುವಾಗುತ್ತಾರೆ? ಅಂತಹ ಪ್ರಧಾನಿ ಕಾಯ್ದೆಯನ್ನು ತರುವುದಕ್ಕೇ ಅನರ್ಹರಾಗುತ್ತಾರೆ ಎನ್ನುವುದು ಹೊಳೆಯದೇ ಇದ್ದರೆ ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ ವಿದೇಶದಲ್ಲೇ ಕುಳಿತು ದೇಶ ನಡೆಸುವ ಸ್ಥಿತಿ ಬರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News