ಜಮ್ಮು-ಕಾಶ್ಮೀರದಲ್ಲಿ ಅಂತರ್ಜಾಲ ಸೇವೆ ಸಹಿತ ಎಲ್ಲ ನಿರ್ಬಂಧ ಮರುಪರಿಶೀಲಿಸಬೇಕು: ಸುಪ್ರೀಂಕೋರ್ಟ್

Update: 2020-01-10 14:33 GMT

ಹೊಸದಿಲ್ಲಿ, ಜ.10: ಅಂತರ್ಜಾಲ ಹಕ್ಕು ವಾಕ್‌ ಹಾಗೂ ಅಭಿವ್ಯಕ್ತಿ ಸ್ವಾತಂತ್ರದ ಭಾಗವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಆಗಸ್ಟ್‌ನಲ್ಲಿ ವಿಶೇಷ ಸ್ಥಾನಮಾನ ರದ್ದುಪಡಿಸಿದ ಬಳಿಕ ಹೊರಡಿಸಲಾಗಿರುವ ಅಂತರ್ಜಾಲ ಸೇವೆ ಸಹಿತ ಎಲ್ಲ ನಿರ್ಬಂಧಗಳ ಆದೇಶಗಳನ್ನು ಜಮ್ಮು-ಕಾಶ್ಮೀರದ ಆಡಳಿತ ಒಂದು ವಾರದಲ್ಲಿ ಮರುಪರಿಶೀಲನೆ ನಡೆಸುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ.

 ಇಂಟರ್‌ನೆಟ್ ಸೇವೆಗಳ ಅಮಾನತು ಕ್ರಮವನ್ನು ಕೂಡಲೇ ಮರು ಪರಿಶೀಲನೆ ನಡೆಸಬೇಕು. ಇಂತಹ ನಿರ್ಬಂಧಗಳು ಕೇವಲ ಸೀಮಿತ ಅವಧಿಗೆ ಆಗಿರಬಹುದು. ಇದು ನ್ಯಾಯಾಂಗ ಪರಿಶೀಲನೆಗೆ ಒಳಪಡಲಿದೆ ಎಂದು ಜಸ್ಟಿಸ್‌ಗಳಾದ ಎನ್‌ವಿ ರಮಣ, ಆರ್. ಸುಭಾಶ್ ರೆಡ್ಡಿ ಹಾಗೂ ಬಿಆರ್ ಗವಾಯಿ ಅವರನ್ನೊಳಗೊಂಡ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಶುಕ್ರವಾರ ಆದೇಶವನ್ನು ನೀಡಿದೆ.

 ಕೇಂದ್ರ ಸರಕಾರ ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ವಿಧಿಯನ್ನು ರದ್ದುಪಡಿಸಿದ ಬಳಿಕ ಕಣಿವೆ ರಾಜ್ಯದಲ್ಲಿ ವಿಧಿಸಲಾಗಿರುವ ನಿರ್ಬಂಧವನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಕಳೆದ ವರ್ಷದ ನವೆಂಬರ್ 27ರಂದು ತ್ರಿಸದಸ್ಯ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.

ವಿಧಿ 19ರೊಳಗೆ ವಾಕ್ ಹಾಗೂ ಅಭಿವ್ಯಕ್ತಿ ಸ್ವಾತಂತ್ರದಲ್ಲಿ ಅಂತರ್ಜಾಲ ಹಕ್ಕು ಕೂಡ ಸೇರಿದೆ ಎಂದು ಜಸ್ಟಿಸ್ ಎನ್‌ವಿ ರಮಣ ತಮ್ಮ ತೀರ್ಪಿನಲ್ಲಿ ಓದಿ ಹೇಳಿದರು.

ಸುಪ್ರೀಂ ಆದೇಶದ ಸಾರಾಂಶ:

► ಇಂಟರ್‌ನೆಟ್ ಸೌಲಭ್ಯ ಕೂಡಾ ಮೂಲಭೂತ ಹಕ್ಕು

► ಸೀಮಿತ ಅವಧಿಯವರೆಗೆ ಮಾತ್ರ ಇಂಟರ್‌ನೆಟ್ ಕಡಿತ ಮಾಡಬೇಕು

► ಸರಕಾರದ ನಿರ್ಧಾರಕ್ಕೆ ಅಸಮ್ಮತಿ, ವಿರೋಧ ಸೂಚಿಸುವುದು ಇಂಟರ್‌ನೆಟ್ ಸ್ಥಗಿತಕ್ಕೆ ಕಾರಣವಾಗದು.

► ಸೆಕ್ಷನ್ 144ರ ಪದೇ ಪದೇ ಬಳಕೆ ಅಧಿಕಾರದ ದುರುಪಯೋಗ

► ಜಮ್ಮು ಕಾಶ್ಮೀರದಲ್ಲಿ ಕಳೆದ 5 ತಿಂಗಳಿನಿಂದ ಸರಕಾರ ಜಾರಿಗೊಳಿಸಿದ ಎಲ್ಲಾ ಆದೇಶಗಳನ್ನೂ ಬಹಿರಂಗಗೊಳಿಸಬೇಕು.

► ಇಂಟರ್‌ನೆಟ್ ಸ್ಥಗಿತಗೊಳಿಸುವ ನಿರ್ಧಾರ ವಾರದೊಳಗೆ ಮರು ಪರಿಶೀಲನೆಗೆ ಸೂಚನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News