×
Ad

2018ನೇ ಸಾಲಿನ ಕನ್ನಡ ಚಲನಚಿತ್ರ ಪ್ರಶಸ್ತಿ: ‘ ಆ ಕರಾಳ ರಾತ್ರಿ’ ಅತ್ಯುತ್ತಮ ಸಿನಿಮಾ

Update: 2020-01-10 14:02 IST

ಬೆಂಗಳೂರು, ಜ. 10: 2018ನೆ ಸಾಲಿನ ಚಲನಚಿತ್ರ ಪ್ರಶಸ್ತಿಗೆ ಅತ್ಯುತ್ತಮ ಚಿತ್ರ- ‘ಆ ಕರಾಳ ರಾತ್ರಿ’ ಆಯ್ಕೆಯಾಗಿದೆ. ಅತ್ಯುತ್ತಮ ನಟ-ರಾಘವೇಂದ್ರ ರಾಜ್ ಕುಮಾರ್(ಚಿತ್ರ-ಅಮ್ಮನ ಮನೆ), ಅತ್ಯುತ್ತಮ ನಟಿ-ಮೇಘನಾರಾಜ್(ಚಿತ್ರ- ಇರುವುದೆಲ್ಲವ ಬಿಟ್ಟು)ಗೆ ಸಂದಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಮನ ಸವಾರಿ’ ಮತ್ತು ‘ಒಂದಲ್ಲಾ ಎರಡಲ್ಲಾ’ ಸಿನಿಮಾಗಳು ಕ್ರಮವಾಗಿ ಎರಡು ಮತ್ತು ಮೂರನೆ ಅತ್ಯುತ್ತಮ ಸಿನಿಮಾ ಪ್ರಶಸ್ತಿಗೆ ಭಾಜನವಾಗಿವೆ ಎಂದರು.

ಮೊದಲನೆ ಅತ್ಯುತ್ತಮ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರಿಗೆ ತಲಾ 1ಲಕ್ಷ ರೂ.ನಗದು ಹಾಗೂ ತಲಾ 50 ಗ್ರಾಂ ಚಿನ್ನದ ಪದಕ, ಎರಡನೆ ಚಿತ್ರಕ್ಕೆ 75 ಸಾವಿರ ರೂ.ನಗದು, 100 ಗ್ರಾಂ ಬೆಳ್ಳಿ ಪದಕ ಹಾಗೂ ಮೂರನೆ ಅತ್ಯುತ್ತಮ ಚಿತ್ರಕ್ಕೆ 50 ಸಾವಿರ ರೂ.ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು.

ಜನಪ್ರಿಯ ಚಿತ್ರ: ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಸಿನಿಮಾ ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಪ್ರಶಸ್ತಿಗೆ, ‘ಸಂತಕವಿ ಕನಕದಾಸ ರಾಮಧಾನ್ಯ’ ಸಿನಿಮಾ ವಿಶೇಷ ಸಾಮಾಜಿಕ ಕಾಳಜಿಯ ಪ್ರಶಸ್ತಿಗೆ ಹಾಗೂ ಅತ್ಯುತ್ತಮ ಮಕ್ಕಳ ಚಿತ್ರವಾಗಿ ‘ಹೂವು ಬಳ್ಳಿ’, ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ‘ಬೆಳಕಿನ ಕನ್ನಡಿ’, ಅತ್ಯುತ್ತಮ ಚಿತ್ರ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ-‘ದೇಯಿ ಬೈದೇತಿ(ತುಳು) ಆಯ್ಕೆಯಾಗಿದೆ.

ಅತ್ಯುತ್ತಮ ಪೋಷಕ ನಟ-ಬಾಲಾಜಿ ಮನೋಹರ್, ಅತ್ಯುತ್ತಮ ಪೋಷಕ ನಟಿ-ವೀಣಾ ಸುಂದರ್, ಅತ್ಯುತ್ತಮ ಕತೆ-ಹರೀಶ್ ಎಸ್., ಅತ್ಯುತ್ತಮ ಕತೆ ಚಿತ್ರಕತೆ- ಪಿ.ಶೇಷಾದ್ರಿ, ಅತ್ಯುತ್ತಮ ಸಂಭಾಷಣೆ-ಶಿರಿಷಾ ಜೋಷಿ, ಅತ್ಯುತ್ತಮ ಛಾಯಾಗ್ರಾಹಣ -ನವೀನ್‌ ಕುಮಾರ್ ಐ., ಅತ್ಯುತ್ತಮ ಸಂಗೀತ ನಿರ್ದೇಶನ-ರವಿಬಸ್ರೂರ್, ಅತ್ಯುತ್ತಮ ಸಂಕಲನ-ಸುರೇಶ್ ಆರ್ಮುಗಂ, ಅತ್ಯುತ್ತಮ ಬಾಲನಟ-ಮಾಸ್ಟರ್ ಆರ್ಯನ್.

ಅತ್ಯುತ್ತಮ ಬಾಲನಟಿ-ಸಿಂಚನಾ, ಅತ್ಯುತ್ತಮ ಕಲಾನಿರ್ದೇಶನ-ಶಿವಕುಮಾರ್ ಜೆ., ಅತ್ಯುತ್ತಮ ಗೀತ ರಚನೆ-ಡಾ.ಬರಗೂರು ರಾಮಚಂದ್ರಪ್ಪ, ಅತ್ಯುತ್ತಮ ಹಿನ್ನಲೆ ಗಾಯಕ- ಸಿದ್ಧಾರ್ಥ ಬೆಳ್ಮಣ್ಣು, ಅತ್ಯುತ್ತಮ ಹಿನ್ನಲೆ ಗಾಯಕಿ-ಕಲಾವತಿ ದಯಾನಂದ, ತೀರ್ಪುಗಾರರ ವಿಶೇಷ ಪ್ರಶಸ್ತಿ-ಅನಂತರಾಯಪ್ಪ ಎಚ್., ಅತ್ಯುತ್ತಮ ನಿರ್ಮಾಣ ನಿರ್ವಾಹಕ-ವಿ.ಥಾಮಸ್ ಆಯ್ಕೆಯಾಗಿದ್ದು, ಅತ್ಯುತ್ತಮ ನಟ, ನಟಿ, ಕತೆ, ಚಿತ್ರಕತೆ ಪ್ರಶಸ್ತಿಗೆ ಆಯ್ಕೆಯಾದವರಿಗೆ ಕ್ರಮವಾಗಿ ತಲಾ 20 ಸಾವಿರ ರೂ.ನಗದು ಹಾಗೂ 100 ಗ್ರಾಂ ಬೆಳ್ಳಿಯ ಪದಕ ನೀಡಲಾಗುವುದು.

ಸಾಹಿತ್ಯ ಪ್ರಶಸ್ತಿ: ಎನ್.ಎಸ್.ಶಂಕರ್ ಅವರ ‘ಚಿತ್ರಕಥೆ ಹಾಗೆಂದರೇನು?’ ಹಾಗೂ ಡಾ.ಶರಣು ಹುಲ್ಲೂರು ಅವರ ‘ಅಂಬರೀಶ್ ವ್ಯಕ್ತಿ-ವ್ಯಕಿತ್ವ ವರ್ಣರಂಜಿತ ಬದುಕು’ ಕೃತಿಗಳು ಆಯ್ಕೆಯಾಗಿದ್ದು, ಲೇಖಕರು, ಪ್ರಕಾಶಕರಿಗೆ ತಲಾ 10 ಸಾವಿರ ರೂ.ನಗದು ಹಾಗೂ 25 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ತಿಳಿಸಲಾಗಿದೆ.

ಕಿರುಚಿತ್ರ ಪ್ರಶಸ್ತಿ: ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ‘ಪಡುವಾರಳ್ಳಿ’ ಕಿರುಚಿತ್ರ ಆಯ್ಕೆಯಾಗಿದ್ದು, ನಿರ್ಮಾಪಕ ಮತ್ತು ನಿರ್ದೇಶಕರಿಗೆ 25 ಸಾವಿರ ರೂ.ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು. ಸುದ್ದಿಗೋಷ್ಠಿಯಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಬಸಂತ್‌ ಕುಮಾರ್ ಪಾಟೀಲ್, ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಜೋಸೈಮನ್, ವಾರ್ತಾ ಇಲಾಖೆ ಆಯುಕ್ತ ಎಸ್. ಎನ್.ಸಿದ್ದರಾಮಪ್ಪ ಹಾಜರಿದ್ದರು.

ಜೀವಮಾನ ಸಾಧನೆ ಪ್ರಶಸ್ತಿಗಳು
‘ಡಾ.ರಾಜ್‌ಕುಮಾರ್ ಪ್ರಶಸ್ತಿಗೆ ಹಿರಿಯ ನಟ ಜೆ.ಕೆ.ಶ್ರೀನಿವಾಸಮೂರ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಪಿ.ಶೇಷಾದ್ರಿ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ಬಿ.ಎಸ್.ಬಸವರಾಜು ಆಯ್ಕೆಯಾಗಿದ್ದು, ತಲಾ 5 ಲಕ್ಷ ರೂ.ನಗದು ಹಾಗೂ 50 ಗ್ರಾಂ ಚಿನ್ನದ ಪದಕ ಒಳಗೊಂಡಿದೆ’
-ಯಡಿಯೂರಪ್ಪ ಮುಖ್ಯಮಂತ್ರಿ

‘ಕನಸು-ಮನಸಿನಲ್ಲೂ ನಾನು ಪ್ರಶಸ್ತಿಯನ್ನು ನಿರೀಕ್ಷೆ ಮಾಡಿರಲಿಲ್ಲ. ನನ್ನ ನಟನೆ ಗುರುತಿಸಿ ಪ್ರಶಸ್ತಿ ನೀಡಿರುವುದು ನನ್ನ ಕನಸು ನಿಜವಾದಂತೆ ಆಗಿದೆ. ಅತ್ಯುತ್ತಮ ನಟಿ ಪ್ರಶಸ್ತಿ ಬಂದಿರುವುದರಿಂದ ಖುಷಿ ತಂದಿದೆ’
-ಮೇಘನಾ ರಾಜ್ ನಟಿ

ನನ್ನ ವೃತ್ತಿ ಬದುಕಿನಲ್ಲಿ ಈವರೆಗೆ ನಟನೆಗಾಗಿ ನನಗೆ ಈವರೆಗೆ ಯಾವುದೇ ಪ್ರಶಸ್ತಿ ಬಂದಿರಲಿಲ್ಲ. ಈ ಪ್ರಶಸ್ತಿಗೆ ತುಂಬಾ ಮಹತ್ವ ಇದೆ. ಅಮ್ಮನ ಮನೆ ಚಿತ್ರದ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಸಿಕ್ಕಿದ್ದರೆ ಅದರ ಶ್ರೇಯ ನಿರ್ದೇಶಕರಿಗೆ ಸಲ್ಲಬೇಕು. ನಾನು ಇನ್ನಷ್ಟು ಪರಿಶ್ರಮ ಹಾಕಿ, ನನ್ನ ಕೆಲಸ ಮಾಡಲು ನನಗೆ ಈ ಪ್ರಶಸ್ತಿ ಸ್ಫೂರ್ತಿ ನೀಡಿದೆ. ಪ್ರಶಸ್ತಿ ಬಂದಿರುವುದರಿಂದ ತುಂಬಾ ಖುಷಿಯಾಗಿದೆ.
-ರಾಘವೇಂದ್ರ ರಾಜಕುಮಾರ್, ನಟ

ಪ್ರಶಸ್ತಿಗೆ ಗುರುತಿಸಿದಾಗ ಸಂತೋಷವಾಗುವುದು ಸಹಜ. ಮೂಕಜ್ಜಿಯ ಕನಸುಗಳು ಚಿತ್ರಕ್ಕೂ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಸಿಕ್ಕಿರುವುದು ಕಾಕತಾಳೀಯ. ಈ ಪ್ರಶಸ್ತಿಯ ಶ್ರೇಯ ನಿಜಕ್ಕೂ ಶಿವರಾಮ ಕಾರಂತರಿಗೆ ಸಲ್ಲಬೇಕು. ಇನ್ನೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಸಂದಿರುವುದು ನನ್ನೊಬ್ಬನ ಶ್ರಮಕ್ಕಲ್ಲ. ಸಿನಿಮಾ ಮಾಡುವುದು ಒಬ್ಬರಿಂದ ಸಾಧ್ಯವಿಲ್ಲ. ಇದೊಂದು ಸಮೂಹ ಕಲೆ. ಹಾಗಾಗಿ ನನ್ನ ಜತೆ 25 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಲಾವಿದರು, ತಂತ್ರಜ್ಞರು, ನಿರ್ಮಾಪಕರಿಗೂ ಈ ಪ್ರಶಸ್ತಿಯ ಶ್ರೇಯ ಸಲ್ಲುತ್ತದೆ. ಈ ಪ್ರಶಸ್ತಿ ನಮ್ಮ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚು ಮಾಡಿದೆ.
-ಪಿ.ಶೇಷಾದ್ರಿ, ನಿರ್ದೇಶಕ

ಎಷ್ಟು ಚೆನ್ನಾಗಿ ಸಿನಿಮಾ ಮಾಡಿದರೂ ನಮಗೆ ಮನ್ನಣೆ ಸಿಗಲಿಲ್ಲವೆಂದು ನಿರಾಸೆಯಾಗಿತ್ತು. ಈಗ ರಾಜ್ಯ ಪ್ರಶಸ್ತಿಯೂ ಬಾರದಿದ್ದರೆ ತುಂಬಾ ನಿರಾಸೆಯಾಗುತ್ತಿತ್ತು. ನನ್ನ ಆತ್ಮವಿಶ್ವಾಸದ ಮಟ್ಟ ಕಡಿಮೆಯಾಗುವ ವೇಳೆಗೆ ಸರಿಯಾಗಿ ಆ ಕರಾಳ ರಾತ್ರಿಗೆ ಮೊದಲನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿದೆ. ತುಂಬಾ ಖುಷಿಯಾಗಿದೆ.

-ದಯಾಳ್ ಪದ್ಮನಾಭ್, ನಿರ್ದೇಶಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News