ಸಾಮಾಜಿಕ ಬದ್ಧತೆಯಿಲ್ಲದ ಸಾಹಿತ್ಯ ಜೊಳ್ಳು: ಕಲ್ಕುಳಿ ವಿಠಲ ಹೆಗ್ಗಡೆ

Update: 2020-01-10 09:13 GMT

ಶೃಂಗೇರಿ, ಜ.10: ಹೋರಾಟ ಸಾಹಿತ್ಯದಿಂದ ಹೊರತಲ್ಲ. ಸಾಹಿತ್ಯವೂ ಹೋರಾಟದಿಂದ ಹೊರತಲ್ಲ. ಅವು ಒಂದಕ್ಕೊಂದು ಪೂರಕವೇ. ಸೈದ್ಧಾಂತಿಕ ಪ್ರೇರಣೆಯಿಲ್ಲದ ಹೋರಾಟಗಳಾಗಲೀ; ಸಾಮಾಜಿಕ ಬದ್ಧತೆಯಿಲ್ಲದ ಸಾಹಿತ್ಯವಾಗಲೀ- ಎರಡೂ ಜೊಳ್ಳು. ಜನಸಮಾನ್ಯರ ಸಂಕಟಗಳನ್ನು ಪರಿಹರಿಸುವಲ್ಲಿ ಹೋರಾಟಗಳಿಗೆ ಎಷ್ಟು ಜವಾಬ್ದಾರಿ ಇರುತ್ತದೆಯೋ ಅಷ್ಟೇ ಜವಾಬ್ದಾರಿ ಸಾಹಿತ್ಯಕ್ಕೂ ಇರುತ್ತದೆ. ಮೌಲ್ಯಯುತ ಸಾಹಿತ್ಯ ಸಾಮಾಜಿಕ ಬದ್ಧತೆಯಿಂದ ಕೂಡಿರಬೇಕಾಗುತ್ತದೆ ಎಂದು ಸಾಹಿತಿ, ಹೋರಾಟಗಾರ ಕಲ್ಕುಳಿ ವಿಠಲ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.

ಶೃಂಗೇರಿಯ ಪೂರ್ಣಚಂದ್ರ ತೇಜಸ್ವಿ ವೇದಿಕೆಯಲ್ಲಿ ಶುಕ್ರವಾರ 16ನೆ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.

ನಾನು ಯಾವುದೇ ಸಾಹಿತ್ಯದ ಕೃತಿಯನ್ನಾದರೂ ವ್ಯಸನಕ್ಕಾಗಿ ಮಾತ್ರ ಓದುವುದಿಲ್ಲ. ಸಂಶೋಧನಾ ದೃಷ್ಟಿಯಿಂದಲೂ ಅಭ್ಯಾಸ ಮಾಡುತ್ತೇನೆ. ಕನ್ನಡದ ಕೋಟ್ಯಂತರ ಜನರ ಅರಿವನ್ನು ಹೆಚ್ಚಿಸಿದ್ದು, ಹೆಚ್ಚಿಸುತ್ತಿರುವದು ಕನ್ನಡ ಭಾಷೆಯಾಗಿದೆ. ಇದುವೇ ನಮ್ಮ ಅಸ್ಮಿತೆ ಎಂದು ಹೇಳಿದ ಅವರು, ಸೌಹಾರ್ದವೇ ಕನ್ನಡ ಭಾಷೆಯ ನಿಜವಾದ ಪರಂಪರೆ ಎಂದು ಅಭಿಪ್ರಾಯಪಟ್ಟರು.

ಹುಟ್ಟಿದವರಿಗೆ ಸಾವಿದೆ; ಆದರೆ ಬರೆದ ಸಾಹಿತ್ಯಕ್ಕೆಂದೂ ಅಳಿವಿಲ್ಲ ಎಂಬ ಮಾತಿದೆ. ಈ ಮಾತಿಗೆ ಪುಷ್ಟಿದಾಯಕವಾದ ವಿಚಾರವೆಂದರೆ ಯುಗದಕವಿ, ಜಗದ ಕವಿ, ಮಲೆನಾಡಿನ ಕವಿ, ರಾಷ್ಟ್ರಕವಿ ಕುವೆಂಪು ಅವರ ಸಾಹಿತ್ಯ. ಕನ್ನಡ ಜೀವಂತವಿರುವವರೆಗೂ ನಮ್ಮ ಈ ಹೆಮ್ಮೆಯ ಕವಿಯ ಸಾಹಿತ್ಯ ಜೀವಂತವಾಗಿರುತ್ತದೆ. ಕುವೆಂಪು ಎಂದರೆ ಮಲೆನಾಡು. ಅವರು ಈ ನಮ್ಮ ಮಲೆನಾಡಿನ ಪರಿಸರವನ್ನು ರಮ್ಯವಾಗಿ ವರ್ಣಿಸಿ ವಿಜೃಂಭಿಸಿದರು. ‘ಹಕ್ಕಿ ಬಳಗ ಸುತ್ತ ಕೂಡಿ ಬೈಗಂ ಬೆಳಗು ಹಾಡಿ ಹಾಡಿ ಮಲೆನಾಡ ಸಗ್ಗ ಮಾಡಿ ಎನ್ನುತ್ತಾ’ ಅವರು ಬರೆದ ಕವಿತೆ-ಕಾದಂಬರಿಗಳು ನನ್ನನ್ನು, ನನ್ನಂತಹ ಅನೇಕರನ್ನು ಪರಿಸರವಾದಿಯಾಗಿ ರೂಪಿಸಿದೆ ಎಂದರೆ ಸಾಹಿತ್ಯದ ಶಕ್ತಿ ಅಪೂರ್ವವಾದದ್ದು ಎಂದೆನಿಸುವುದಿಲ್ಲವೇ? ಎಂದು ಅವರು ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News