ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಪೊಲೀಸರೇ ವಿಡಿಯೋ ಸೃಷ್ಟಿಸಿದ್ದರು: ಸಿದ್ದರಾಮಯ್ಯ

Update: 2020-01-10 11:55 GMT

ಬೆಂಗಳೂರು, ಜ. 10: ‘ಭ್ರಷ್ಟಾಚಾರ ನಿಯಂತ್ರಣವನ್ನು ಬಲಪಡಿಸುವ ಉದ್ದೇಶದಿಂದ ಭ್ರಷ್ಟಾಚಾರ ನಿಯಂತ್ರಣ ದಳ(ಎಸಿಬಿ)ವನ್ನು ನಮ್ಮ ಸರಕಾರ ಸ್ಥಾಪಿಸಿದಾಗ ನಮ್ಮ ಮೇಲೆ ಮುಗಿಬಿದ್ದು ಆರೋಪಗಳ ಸುರಿಮಳೆ ಗೈದಿದ್ದ ಬಿಜೆಪಿ, ಈಗ ನ್ಯಾಯಾಲಯದ ಮುಂದೆ ಅದೇ ಎಸಿಬಿ ಸಮರ್ಥಿಸಿರುವುದು ವಾಂತಿ ಮಾಡಿದ್ದನ್ನು ಮತ್ತೆ ತಿಂದಷ್ಟು ಅಸಹ್ಯ ಅಲ್ಲವೇ?’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, ‘ಎಸಿಬಿ ಸ್ಥಾಪನೆಯಿಂದ ಲೋಕಾಯುಕ್ತ ಬಲಹೀನವಾಗುವುದಿಲ್ಲ. ಅದರ ಅಧಿಕಾರವನ್ನು ಯಾವುದೇ ರೀತಿಯಿಂದ ಮೊಟಕುಗೊಳಿಸಿದ ಹಾಗೆ ಆಗುವುದಿಲ್ಲ ಎಂದು ನಾವು ಕೂಗಿಕೂಗಿ ಹೇಳಿದರೂ, ಕೇಳಿಸಿಕೊಳ್ಳದೆ ನಮ್ಮನ್ನು ದೂಷಿಸಿದ್ದ ಬಿಜೆಪಿ ಈಗ ಯಾವ ಮುಖ ಹೊತ್ತು ಅದನ್ನು ಸಮರ್ಥಿಸುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ.

‘ಲೋಕಾಯುಕ್ತಕ್ಕೆ ತನ್ನಲ್ಲಿದ್ದ ಪೊಲೀಸ್ ವಿಭಾಗದ ಮೇಲೆ ನಿಯಂತ್ರಣ ಇರಲಿಲ್ಲ, ಆ ನಿಯಂತ್ರಣ ರಾಜ್ಯ ಸರಕಾರದ ಕೈಯಲ್ಲಿತ್ತು. ಇದರಿಂದ ನಿರ್ಮಾಣಗೊಂಡಿದ್ದ ಅಸಮಂಜಸ ಸ್ಥಿತಿಯ ನಿವಾರಣೆಗಾಗಿ ಎಸಿಬಿ ಸ್ಥಾಪಿಸಲಾಗಿತ್ತು ಎನ್ನುವುದನ್ನು ಒಪ್ಪಿಕೊಂಡ ಬಿಜೆಪಿಗೆ ಧನ್ಯವಾದ’ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ವಿಕೃತಾನಂದ: ‘ನನಗೆ ಹಂಚಿಕೆಯಾಗಿದ್ದ ಮನೆಯ ದುರಸ್ತಿ ನಡೆಸಿ ಜ.15ರ ಒಳಗೆ ಬಿಟ್ಟುಕೊಡುವುದಾಗಿ ಲೋಕೋಪಯೋಗಿ ಇಲಾಖೆ ಸಿಎಂ ಬಿಎಸ್‌ವೈಗೆ ತಿಳಿಸಿದೆ. ಹೀಗಿದ್ದರೂ ಬಿಜೆಪಿ ಸುಳ್ಳು ಸುದ್ದಿ ಸೃಷ್ಟಿಸುತ್ತಾ ವಿಕೃತಾನಂದ ಅನುಭವಿಸುತ್ತಿರುವುದು ವಿಷಾದನೀಯ’ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

‘ನನಗೆ ಹಂಚಿಕೆಯಾಗಿದ್ದ ಮನೆಯನ್ನು ಸಚಿವ ಎಚ್.ಡಿ.ರೇವಣ್ಣ ಅವರು ಡಿ.15ರ ವರೆಗೆ ಬಿಟ್ಟುಕೊಡದಿದ್ದ ಕಾರಣ ದುರಸ್ತಿ ಕಾರ್ಯ ವಿಳಂಬವಾಗಿದೆ. ಅನಿವಾರ್ಯವಾಗಿ ನಾನು ಈಗಿನ ಮನೆಯಲ್ಲಿಯೇ ಉಳಿಯಬೇಕಾಗಿದೆಯೇ ಹೊರತು ಬೇರೆ ಕಾರಣಗಳಿಲ್ಲ’ ಎಂದು ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

‘ಮಂಗಳೂರು ಗಲಭೆ ಕುರಿತ ವಿಡಿಯೋ ಪೊಲೀಸರ ಸೃಷ್ಟಿ ಎಂದು ನಾನು ಹಿಂದೆಯೇ ಹೇಳಿದ್ದೆ. ಅವರ ತಪ್ಪುಗಳನ್ನು ಮುಚ್ಚಿಹಾಕಲು ವಿಡಿಯೋ ಸೃಷ್ಟಿಸಿದ್ದರು. ಹಿಂಸಾಚಾರ ಸೃಷ್ಟಿಸಿ ಪೊಲೀಸರು ತಪ್ಪು ಮಾಡಿದ್ದಾರೆ. ಘಟನೆಯಲ್ಲಿ ಅಮಾಯಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

-ಸಿದ್ದರಾಮಯ್ಯ, ವಿಪಕ್ಷ ನಾಯಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News