ಮಂಗಳೂರು ಪೊಲೀಸ್ ಆಯುಕ್ತರ ನಡೆ ಅನುಮಾನಾಸ್ಪದ: ಕುಮಾರಸ್ವಾಮಿ ಆರೋಪ

Update: 2020-01-10 15:16 GMT

ಬೆಂಗಳೂರು, ಜ.10: ಸಿಎಎ ವಿರೋಧಿಸಿ ಡಿ,.19ರಂದು ಮಂಗಳೂರಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಪೊಲೀಸರೆ ಲಾಠಿ ಬೀಸಿ, ಕಲ್ಲೆಸೆದು, ಗುಂಡು ಹಾರಿಸಿರುವುದು ಸಿಸಿ ಟಿವಿಗಳಲ್ಲಿಯೇ ಸಾಕ್ಷಾಧಾರಗಳು ಸಿಕ್ಕಿವೆ. ಆದರೂ ಪೊಲೀಸ್ ಇಲಾಖೆ ಹಾಗೂ ಸರಕಾರ ಪ್ರಕರಣವನ್ನು ತಿರುಚುವಂತಹ ಕೆಲಸಕ್ಕೆ ಮುಂದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಶುಕ್ರವಾರ ನಗರದ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ, ಆ ನಂತರ ನಡೆದ ಪೊಲೀಸರ ಲಾಠಿಚಾರ್ಜ್, ಕಲ್ಲೆಸೆತ ಹಾಗೂ ಗೋಲಿಬಾರ್ ನಡೆದ ಪ್ರಕರಣದ 35 ಸಿಸಿಟಿವಿ ದೃಶ್ಯಾವಳಿಗಳನ್ನೊಳಗೊಂಡ ಸಿಡಿಯನ್ನು ಬಿಡುಗಡೆ ಮಾಡಿ ಮತನಾಡಿದರು.

ಸಿಎಎ ವಿರೋಧಿಸಿ ಡಿ.19ರಂದು ಪ್ರತಿಭಟನೆ ಹಾಗೂ ಆ ನಂತರ ಪೊಲೀಸರು ನಡೆಸಿರುವ ದೌರ್ಜನ್ಯವನ್ನೊಳಗೊಂಡ ದೃಶ್ಯಾವಳಿಗಳನ್ನು ಸಂಗ್ರಹಿಸಿ, ಗಂಭೀರವಾಗಿ ಪರಿಶೀಲಿಸಿದ್ದೇನೆ. ಪ್ರತಿಭಟನೆಯಲ್ಲಿ ಭಾಗವಹಿಸದ ಸಾರ್ವಜನಿಕರು, ಅಂಗಡಿ ಮಾಲಕರು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ಪೊಲೀಸರು ಮನಬಂದಂತೆ ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

ಪೊಲೀಸರು ಮಸೀದಿಗೆ ಕಲ್ಲು ತೂರಿದ್ದಾರೆ. ಬಸ್ ನಿಲ್ದಾಣದಲ್ಲಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಹಾಗೂ ಪೊಲೀಸ್ ಅಧಿಕಾರಿಗಳ ಆದೇಶಕ್ಕೂ ಮುನ್ನವೇ ಸಾರ್ವಜನಿಕರತ್ತ ಗುಂಡು ಹಾರಿಸುವುದಕ್ಕಾಗಿ ಪೊಲೀಸರು ತಮ್ಮ ಗನ್‌ಗಳನ್ನು ತಯಾರಿ ಮಾಡಿಕೊಳ್ಳುತ್ತಿರುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ಸರಕಾರ ಸಾರ್ವಜನಿಕರಿಗೆ ಉತ್ತರಿಸಬೇಕಿದೆ ಎಂದು ಅವರು ಆಗ್ರಹಿಸಿದರು.

ಸದನ ಸಮಿತಿ ರಚನೆಯಾಗಲಿ: ಸಿಎಎ ವಿರೋಧಿಸಿ ರಾಜ್ಯದಲ್ಲಿ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆದು, ಶಾಂತಿಯುತವಾಗಿ ಮುಗಿದಿದೆ. ಆದರೆ, ಮಂಗಳೂರಿನಲ್ಲಿ ಮಾತ್ರ ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್, ಕಲ್ಲು ತೂರಾಟ, ಗೋಲಿಬಾರ್ ನಡೆದಿದೆ. ಪೊಲೀಸ್ ಆಯುಕ್ತ ಹರ್ಷರ ಈ ನಡೆಯು ಅನುಮಾನಾಸ್ಪದವಾಗಿದೆ. ಪ್ರಕರಣದಲ್ಲಿ ಕಾಣದ ಕೈಗಳು ಕೆಲಸ ಮಾಡಿರುವ ಸಾಧ್ಯತೆಗಳಿವೆ. ಹೀಗಾಗಿ ಪ್ರಕರಣದ ಸತ್ಯಾಸತ್ಯತೆಗೆ ಸದನ ಸಮಿತಿ ರಚನೆಯಾಗಲಿ ಎಂದು ಅವರು ಒತ್ತಾಯಿಸಿದರು.

ಪೊಲೀಸರಿಗೆ ಅಧಿಕಾರ ಕೊಟ್ಟವರ್ಯಾರು

ಮಂಗಳೂರಿನ ಗಲಭೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾ.ಗೋಪಾಲಗೌಡರ ಅಧ್ಯಕ್ಷತೆಯಲ್ಲಿ ಜನತಾ ಅದಾಲತ್ ನಡೆಸಲು ಹೋದಾಗ ಪೊಲೀಸರು ಅನಗತ್ಯವಾಗಿ ತಡೆ ಮಾಡಿದ್ದಾರೆ. ಸುದ್ದಿಗೋಷ್ಟಿಗೆ ಅವಕಾಶ ಮಾಡಿಕೊಡದೆ ಅಸಂವಿಧಾನಿಕವಾಗಿ ನಡೆದುಕೊಂಡಿದ್ದಾರೆ. ಇವರಿಗೆ ಇಂತಹ ಅಧಿಕಾರ ಕೊಟ್ಟವರ್ಯಾರು.

ಹೊಟೇಲ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಲು ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜುಗೆ ಅವಕಾಶ ನೀಡಿಲ್ಲ. ಅವರೇನು ಗಲಭೆ ಸೃಷ್ಟಿ ಮಾಡಲು ಹೋಗಿದ್ದವರ. ನ್ಯಾ.ಗೋಪಾಲಗೌಡರಿಗೆ ದಿಗ್ಬಂಧನ ಹೇರುವುದಾದರೆ ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇದೆಯೇ ಎಂಬುದು ಅನುಮಾನ ಮೂಡಿಸುತ್ತದೆ ಎಂದು ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ರಾಜ್ಯವನ್ನು ಕಾಶ್ಮೀರ ಮಾಡಲು ಹೊರಟಿದೆ ಬಿಜೆಪಿ

ಮಂಗಳೂರಿನಲ್ಲಿ ನಡೆದಿರುವ ಗಲಭೆಯನ್ನು ನೋಡಿದರೆ ಬಿಜೆಪಿ ಸರಕಾರ ತನ್ನ ಸ್ವಾರ್ಥಕ್ಕಾಗಿ ರಾಜ್ಯವನ್ನು ಮತ್ತೊಂದು ಕಾಶ್ಮೀರ ಮಾಡಲು ಹೊರಟಿರುವುದು ನಿಶ್ಚಲವಾಗಿ ಕಾಣುತ್ತಿದೆ. ಪ್ರತಿಭಟನೆಗೂ ಮುನ್ನವೇ ನಿಷೇಧಾಜ್ಞೆ ಹಾಕುವುದು. ಶಾಂತಿಯುತ ಪ್ರತಿಭಟನೆಗೆ ಅವಕಾಶ ಮಾಡಕೊಡದಿರುವುದು ಹಾಗೂ ಡಿ.19ರಂದು ಮಂಗಳೂರಿನಲ್ಲಿ ಪ್ರತಿಭಟಕಾರರು ಹಾಗೂ ಸಾರ್ವಜನಿಕರ ಮೇಲೆ ನಡೆದಿರುವ ಲಾಠಿಚಾರ್ಜ್ ಹಾಗೂ ಗೋಲಿಬಾರ್ ನೋಡಿದರೆ ಬಿಜೆಪಿ ನಾಯಕರು ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯಲು ಬಯಸಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ.

ಪೊಲೀಸರು ನಿತ್ಯವೂ ಒಂದೊಂದು ಕತೆ ಕಟ್ಟುತ್ತಿದ್ದಾರೆ. ಡಿ.24ರಂದು ಪ್ರತಿಭಟನಾಕಾರರು ಕಲ್ಲುಗಳನ್ನು ತಂದ ಬಗ್ಗೆ ಕತೆ ಕಟ್ಟಿದರು. ಆದರೆ, ನಿಜವಾಗಿ ಅಲ್ಲಿ ಆಗಿರುವುದೇ ಬೇರೆ. ಮೂರು ಬಾರಿ ಕಟ್ಟಡ ತ್ಯಾಜ್ಯ ಸಾಗಿಸಿದ್ದ ಸರಕು ಸಾಗಾಣೆ ಟೆಂಪೊ ಚಾಲಕ, ನಾಲ್ಕನೇ ಬಾರಿ ಬರುವಾಗ ಗಲಭೆ ಉಂಟಾದ ಕಾರಣ ತನ್ನ ಆಟೊವನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋಗಿದ್ದ. ಆದರೆ, ಅದನ್ನೇ ಕತೆ ಕಟ್ಟಿ ಕಲ್ಲು ತಂದು ಇಡಲಾಗಿದೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು ಆರೋಪಿಸಿದರು.

ನಾನು ಈ ವಿಡಿಯೋಗಳ ದೃಶ್ಯಾವಳಿಗಳನ್ನು ಸದನದಲ್ಲಿ ಬಹಿರಂಗಪಡಿಸಲು ಸಂಗ್ರಹಿಸಿ ಇಟ್ಟಿದ್ದೆ. ಆದರೆ, ಯಾವಾಗ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಿಗೇ ಮಾತನಾಡಲು ಅವಕಾಶ ನೀಡಲಿಲ್ಲವೋ ಆಗ ಸಿಡಿಯನ್ನು ಬಹಿರಂಗಪಡಿಸಲು ನಿರ್ಧರಿಸಿದೆ. ಸಿಡಿಯನ್ನು ಈಗ ಜನತೆಯ ಮುಂದೆ ಇಟ್ಟಿದ್ದೇನೆ. ಅವರೇ ಸರಿ ತಪ್ಪುಗಳನ್ನು ತೀರ್ಮಾನಿಸಲಿ.

-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News